ಆಂಧ್ರಪ್ರದೇಶದ ಆಂಜನೇಯ ದೇವಸ್ಥಾನಕ್ಕೆ ಹಾನಿ: ಧರ್ಮದ ಬಣ್ಣ ಬಳಿದ ಬಲಪಂಥೀಯ ಮಾಧ್ಯಮಗಳು, ಫ್ಯಾಕ್ಟ್ ಚೆಕ್ ನಲ್ಲಿ ಗೊತ್ತಾದದ್ದೇನು?

0
192

ಸನ್ಮಾರ್ಗ ವಾರ್ತೆ

ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಮೂರು ದಿನಗಳ ಹಿಂದೆ ಅಭಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹಾನಿ ಮಾಡಲಾಗಿತ್ತು. ಸಾಕಷ್ಟು ಟಿವಿ ಚಾನಲ್ ಗಳು ಈ ಕುರಿತಂತೆ ಸುದ್ದಿಯನ್ನು ಬಿತ್ತರಿಸಿದ್ದುವು.

ಆದರೆ ಬಲಪಂಥೀಯ ಮಾಧ್ಯಮಗಳು ಈ ಸುದ್ದಿಗೆ ಧರ್ಮದ ಲೇಪನ ಹಚ್ಚಿದ್ದುವು. ಈ ದೇವಸ್ಥಾನ ಭಂಜಕ ಕೃತ್ಯದ ಹಿಂದೆ ಮುಸ್ಲಿಮನಿದ್ದಾನೆ ಎಂದು ಭಾವನೆ ಬರುವಂತೆ ಅದು ಸುದ್ದಿಯನ್ನು ತಿರುಚಿ ಪ್ರಕಟಿಸಿದ್ದುವು. ಇದೀಗ ಈ ಘಟನೆಯ ನಿಜ ಸುದ್ದಿ ಬಹಿರಂಗವಾಗಿದೆ.

ವಾಸ್ತವ ಏನು?

ಅನ್ನಮಯ್ಯ ಜಿಲ್ಲೆಯ ಪೊಲೀಸರು ಇದೀಗ ಅರ್ಚಕ ಹರಿನಾಥನನ್ನು ಈ ಕಾರಣಕ್ಕಾಗಿ ಬಂಧಿಸಿದ್ದಾರೆ. ಆಂಜನೇಯ ದೇವಾಲಯದ ತಳಭಾಗದಲ್ಲಿ ಈ ಹರಿನಾಥ ಸ್ಪೋಟಕಗಳನ್ನು ಇಟ್ಟಿದ್ದ. ಆದರೆ ಅದು ಸ್ಪೋಟಗೊಳ್ಳಲಿಲ್ಲ. ಇದರಿಂದ ಕೆರಳಿದ ಆತ ಆಂಜನೇಯ ದೇವಾಲಯದ ಮೂರ್ತಿಗಳನ್ನು ಸುತ್ತಿಗೆ ಇತ್ಯಾದಿ ಆಯುಧಗಳನ್ನು ಬಳಸಿ ಧ್ವಂಸ ಮಾಡಿದ್ದ. ಇದನ್ನು ಆತನೊಬ್ಬನೆ ಮಾಡಿರಲಿಲ್ಲ. ಆತನ ಜೊತೆಗೆ ಇನ್ನೂ ಐದು ಮಂದಿ ಕೃತ್ಯಕ್ಕೆ ನೇರವಾಗಿದ್ದರು. ಇದೀಗ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕಾರಣ ಏನು?

ಕನಗುಂಡ ಸ್ವಾಮಿ ದೇವಾಲಯದ ಅರ್ಚಕನಾಗಿರುವ ಹರಿನಾಥನಿಗೆ ಅಭಯ ಆಂಜನೇಯ ದೇವಾಲಯದ ಅರ್ಚಕನೊಂದಿಗೆ ಮನಸ್ತಾಪವಿತ್ತು. ದೇವಾಲಯಕ್ಕೆ ಬರುವ ಆದಾಯವನ್ನು ಹಂಚಿಕೊಳ್ಳುವ ವಿಷಯದಲ್ಲಿ ಈ ಮನಸ್ತಾಪ ಉಂಟಾಗಿತ್ತು. ಅಭಯ ಆಂಜನೇಯ ಸ್ವಾಮಿ ದೇವಾಲಯವನ್ನು ತನ್ನ ಅಧೀನಕ್ಕೆ ತಂದುಕೊಳ್ಳುವ ಉದ್ದೇಶವನ್ನು ಅರ್ಚಕ ಹರಿನಾಥ ಹೊಂದಿದ್ದ. ಆದರೆ ಅಭಯ ಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ವಿದ್ಯಾಸಾಗರ್ ಇದಕ್ಕೆ ಒಪ್ಪಿಕೊಳ್ಳಲಿಲ್ಲ. ಇದು ಹರಿನಾಥನಲ್ಲಿ ಸಿಟ್ಟು ತರಿಸಿತು. ಆದ್ದರಿಂದ ಅಭಯ ಆಂಜನೇಯ ಸ್ವಾಮಿ ದೇವಾಲಯವನ್ನು ಸ್ಪೋಟಿಸುವುದಕ್ಕೆ ಹರಿನಾಥ ತಂತ್ರ ಹೆಣೆದ. ಅದಕ್ಕಾಗಿ ದೇವಸ್ಥಾನದಲ್ಲಿ ಸ್ಫೋಟಕಗಳನ್ನು ಇರಿಸಿದ. ಒಂದು ವೇಳೆ ಸ್ಪೋಟಕ ಸಿಡಿದು ದೇವಾಲಯಕ್ಕೆ ಹಾನಿ ಆದರೆ ಅಲ್ಲಿಂದ ಈ ವಿದ್ಯಾಸಾಗರ ಹೊರಟು ಹೋಗಬಹುದು ಎಂದು ಆತ ಅಂದಾಜಿಸಿದ್ದ. ಸ್ಪೋಟಕ ಸಿಡಿಯದೆ ಹೋದಾಗ ಸುತ್ತಿಗೆ ಇತ್ಯಾದಿಗಳನ್ನು ಬಳಸಿ ದೇವಸ್ಥಾನದ ಮೂರ್ತಿಗಳಿಗೆ ಹಾನಿ ಮಾಡಿದ್ದ. ಇದರಿಂದ ಅರ್ಚಕ ವಿದ್ಯಾಸಾಗರ್ ಭಯ ಪಡಬಹುದು ಎಂದಾತ ಅಂದಾಜಿಸಿದ್ದ.

ಆದರೆ ಈ ಸತ್ಯ ಬಯಲಾಗುವುದಕ್ಕಿಂತ ಮೊದಲೇ ಬಲಪಂಥೀಯ ಮಾಧ್ಯಮಗಳು ಈ ಸುದ್ದಿಗೆ ಧರ್ಮದ ಲೇಪನ ಹಚ್ಚಿ ಸೋಶಿಯಲ್ ಮೀಡಿಯಾದಲ್ಲಿ ಭರಪೂರವಾಗಿ ಹಂಚಿದೆ. ಇದೀಗ ಸತ್ಯ ಶೋಧಕ ಮೊಹಮ್ಮದ್ ಝುಬೇರ್ ಅವರು ಫಾಕ್ಟ್ ಚೆಕ್ ಮೂಲಕ ಈ ಸತ್ಯ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.

https://x.com/zoo_bear/status/1847897716082311599?t=oDaqtTUnAhX3zlQBGRfxzA&s=08