ಪ್ರವಾದಿ ಮುಹಮ್ಮದರ ವ್ಯಂಗ್ಯಚಿತ್ರ ರಚಿಸಿ‌ದ್ದ ಕಾರ್ಟೂನಿಸ್ಟ್ ನಿಧನ

0
1652

ಸನ್ಮಾರ್ಗ ವಾರ್ತೆ

ಕೋಪನ್ ಹೇಗನ್(ಡೆನ್ಮಾರ್ಕ್): ಪ್ರವಾದಿ ಮುಹಮ್ಮದ್ (ಸ) ರವರ ವ್ಯಂಗ್ಯ ಚಿತ್ರ ರಚಿಸಿ‌ ಪ್ರಪಂಚದಾದ್ಯಂತ ಮುಸ್ಲಿಮರ ಆಕ್ರೋಶವನ್ನು ಎದುರಿಸಿದ್ದ ಕುಖ್ಯಾತ ಡ್ಯಾನಿಶ್ ಕಾರ್ಟೂನಿಸ್ಟ್ ಕರ್ಟ್ ವೆಸ್ಟರ್ಗಾರ್ಡ್ 86ನೇ ವಯಸ್ಸಿನಲ್ಲಿ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ದೀರ್ಘಕಾಲದ ಅನಾರೋಗ್ಯದ ನಂತರ ವೆಸ್ಟರ್ಗಾರ್ಡ್ ನಿಧನರಾದರು ಎಂದು ಅವರ ಕುಟುಂಬವು ತಿಳಿಸಿತೆಂದು ಡ್ಯಾನಿಶ್ ಪತ್ರಿಕೆ ಬರ್ಲಿಂಗ್ಸ್ ಕೆ ತಿಳಿಸಿದೆ.

ಕರ್ಟ್ ವೆಸ್ಟರ್ಗಾರ್ಡ್ ರಚಿಸಿದ್ದ ಕಾರ್ಟೂನ್ ಗಳನ್ನು ತೀವ್ರ ಬಲಪಂಥೀಯ ವಾದವನ್ನು ಬೆಂಬಲಿಸುವ ದಿನಪತ್ರಿಕೆ ಜಿಲ್ಲ್ಯಾಂಡ್ಸ್-ಪೋಸ್ಟನ್ “ದಿ ಫೇಸ್ ಆಫ್ ಮುಹಮ್ಮದ್” ಎಂಬ ಶೀರ್ಷಿಕೆಯಡಿಯಲ್ಲಿ 12 ರೇಖಾಚಿತ್ರಗಳನ್ನು ಪ್ರಕಟಿಸಿತ್ತು. ಇದು ಪ್ರಪಂಚದಾದ್ಯಂತ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿತ್ತು. ಬಾಂಬ್ ಆಕಾರದಲ್ಲಿ ಪೇಟವನ್ನು ಧರಿಸಿರುವ ಕಾರ್ಟೂನ್ ಅನ್ನು ಇವರು ರಚಿಸಿ ಕುಖ್ಯಾತಿ ಪಡೆದಿದ್ದರು.

ಈ ಬೆಳವಣಿಗೆಯಿಂದ ಫೆಬ್ರವರಿ 2006 ರಲ್ಲಿ ಹಲವೆಡೆ ಪ್ರತಿಭಟನೆಗಳು ನಡೆದು ಹಲವೆಡೆ ಹಿಂಸಾತ್ಮಕವಾಗಿ ಹಲವಾರು ಜನರು ಪ್ರಾಣ ತೆತ್ತಿದ್ದರು. ಈ ಘಟನೆಗಳು ಇಸ್ಲಾಮೋಫೋಬಿಯಾ ಮತ್ತು ಡೆನ್ಮಾರ್ಕ್ ಮತ್ತು ಅದರಾಚೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧರ್ಮದ ಮಿತಿಗಳ ಬಗ್ಗೆ ಚರ್ಚೆಗೆ ಕಾರಣವಾಗಿತ್ತು. ವೆಸ್ಟರ್ಗಾರ್ಡ್, ವ್ಯಂಗ್ಯಚಿತ್ರಗಳಿಗೆ ಸಂಬಂಧಿಸಿ ರಹಸ್ಯ ವಿಳಾಸದಲ್ಲಿ ಪೊಲೀಸ್ ರಕ್ಷಣೆಯಲ್ಲಿ ವಾಸಿಸಬೇಕಾಗಿತ್ತು. 2012ರಲ್ಲಿ ಕಾರ್ಟೂನ್‌ಗಳನ್ನು ಮರು ಮುದ್ರಣ ಮಾಡಿದ್ದ ಪ್ಯಾರಿಸ್‌ನ ಚಾರ್ಲಿ ಹೆಬ್ಡೊ ವಾರಪತ್ರಿಕೆಯ ಮೇಲೆ 2015 ರಲ್ಲಿ ನಡೆದ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದರು.