ಬಂಟ್ವಾಳ ಯುವಕನ ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆ

0
250

ಸನ್ಮಾರ್ಗ ವಾರ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಯುವಕನ ಮೃತ ದೇಹವು ಮೂಡಿಗೆರೆಯ ಚಾರ್ಮಾಡಿ ಘಾಟ್ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ದೇವರ ಮನೆ ರಸ್ತೆ ತಿರುವು ಬಳಿಯ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸವಾದ್ (35) ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಬಣಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಮೃತ ಸವಾದ್ 10 ದಿನಗಳಿಂದ ಕಾಣೆಯಾಗಿದ್ದ. ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಈ ಹಿಂದೆ ಕೂಡಾ ಈತ ಇದೇ ತರಹ ಸಂಪರ್ಕಕ್ಕೆ ಸಿಗದೆ ಕೆಲವು ದಿನಗಳ ಬಳಿಕ ಮನೆಗೆ ಬರುತ್ತಿದ್ದ ಎನ್ನಲಾಗಿದ್ದು, ಮನೆಯವರು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಈತನ ಅಣ್ಣನಿಗೆ ಸವಾದ್ ನ ಕೊಲೆಯಾಗಿರುವ ಬಗ್ಗೆ ವ್ಯಕ್ತಿಯೋರ್ವ ಮಾಹಿತಿ ನೀಡಿದ್ದು, ಮಾಹಿತಿ ಆಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತ ಶರೀರದ ಗುರುತು ಪತ್ತೆ ಹಚ್ಚಿದ್ದಾರೆ. ಮೃತ ದೇಹದ ಗುರುತು ಸಿಗದ ರೀತಿಯಲ್ಲಿ ಮುಖಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದ್ದು, ಮಾದಕ ವ್ಯಸನಿಗಳ ತಂಡ ಈ ಕೃತ್ಯ ಎಸಗಿದ್ದಾರೆ ಎಂದು ದೂರಲಾಗಿದೆ. ಹಂತಕರು ಕಾವಳಕಟ್ಟೆ – ವಗ್ಗ ಮೂಲದ ಪೆಡ್ಲರ್ ತಂಡದವರು ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.