ಮುಮ್ತಾಝ್ ಅಲಿ ಸಾವು: ವಾಸ್ತವ ಏನು?

0
368

ಸನ್ಮಾರ್ಗ ವಾರ್ತೆ

ಉದ್ಯಮಿ ಸಾಮಾಜಿಕ ಮತ್ತು ಧಾರ್ಮಿಕ ಮುಂದಾಲು ಮುಮ್ತಾಜ್ ಅಲಿ ಅವರ ಸುತ್ತ ಹರಡಿರುವ ವದಂತಿಗಳಿಗೆ ತೆರೆ ಬಿದ್ದಿದೆ. ಮಂಗಳೂರು ಸಮೀಪದ ಪಲ್ಗುಣಿ ನದಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ. ಅವರು ನಾಪತ್ತೆಯಾದಂದಿನಿಂದ ಸೋಶಿಯಲ್ ಮೀಡಿಯಾದಲ್ಲಿ ಹತ್ತು ಹಲವು ರೀತಿಯ ಚರ್ಚೆಗಳು ನಡೆದಿದ್ದುವು. ಅವರ ಕಾರು ಅಪಘಾತಕ್ಕೆ ಈಡಾದ ಸ್ಥಿತಿಯಲ್ಲಿ ಕೂಳೂರು ಸೇತುವೆಯಲ್ಲಿ ಪತ್ತೆಯಾಗಿತ್ತು. ಅವರ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಅವರನ್ನು ಅಪಹರಿಸಲಾಗಿದೆಯೋ, ಅವರು ನದಿಗೆ ಧುಮುಕಿದ್ದಾರೋ ಇನ್ನೇನಾದರೂ ಸಂಭವಿಸಿದೆಯೋ, ಅವರನ್ನು ಯಾರಾದರೂ ಸಾಯಿಸಿ, ನದಿಗೆ ಹಾಕಿದ್ದಾರೋ ಎಂಬ ರೀತಿಯಲ್ಲಿ ಸೋಶಿಯಲ್ ಮೀಡಿಯಾ ಬ್ಯುಸಿಯಾಗಿತ್ತು. ಇದೀಗ ಆ ಎಲ್ಲಕ್ಕೂ ತೆರೆ ಬಿದ್ದಿದೆ. ಅವರ ಮೃತ ದೇಹ ನದಿಯಲ್ಲಿ ಪತ್ತೆಯಾಗಿದೆ

ಈ ಮೃತ ದೇಹ ಪತ್ತೆಯಾಗುವುದಕ್ಕಿಂತ ಮೊದಲೇ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಮುಮ್ತಾಝ್ ಅಲಿ ಅವರ ಸಹೋದರ ಹೈದರ್ ಅಲಿ ಅವರೇ, ಈ ದೂರು ದಾಖಲಿಸಿದ್ದರು. ಹೆಣ್ಣಿನ ವಿಷಯವನ್ನು ಇಟ್ಟುಕೊಂಡು ಅವರನ್ನು ಬೆದರಿಸಲಾಗುತ್ತಿದೆ, ಅವರಿಂದ ಹಣ ವಸೂಲಿ ಮಾಡಲಾಗಿದೆ, ಇನ್ನಷ್ಟು ಹಣಕ್ಕಾಗಿ ಅವರನ್ನು ಪೀಡಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು. ನಿಜಕ್ಕೂ ಹೀಗೆ ಮಾಡಿದವರು ಯಾರು? ಅವರ ಉದ್ದೇಶ ಏನು? ಇದರ ಹಿಂದೆ ಷಡ್ಯಂತ್ರ ಇದೆಯಾ? ಅವಮಾನ ತಾಳಲಾರದೆ ಅವರು ಬದುಕು ಕೊನೆಗೊಳಿಸಿಕೊಂಡರೆ ಅಥವಾ ಯಾರಾದರೂ ಅವರನ್ನು ಸಾಯಿಸಿದ್ರಾ, ನದಿಗೆಸೆದು ಹೋದ್ರಾ ಎಂಬಿತ್ಯಾಧಿ ಹತ್ತು ಹಲವು ಪ್ರಶ್ನೆಗಳಿಗೆ ಈಗ ಉತ್ತರ ಸಿಗಬೇಕಿದೆ.

ಮುಮ್ತಾಜ್ ಅಲಿ ಅಂದರೆ ದಕ್ಷಿಣ ಕನ್ನಡದ ಮಟ್ಟಿಗಂತೂ ಬಹಳ ಚಿರಪರಿಚಿತ ಹೆಸರು. ಪಂಪ್ ವೆಲ್ ನ ತಕ್ವಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯನ್ನು ಅವರು ಯಶಸ್ವಿಯಾಗಿ ನಿಭಾಯಿಸಿದವರು. ಅವರು ಉದ್ಯಮಿಯೂ ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮಸೀದಿಗಳಿಗೆ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಕೊಡುಗೈ ದಾನಿಯಾಗಿ ಅನೇಕರ ಪಾಲಿಗೆ ಆಪದ್ಬಾಂಧವರಾಗಿದ್ದರು. ಮಾಜಿ ಶಾಸಕ ಮೊಯ್ದಿನ್ ಭಾವ ಅವರ ಸಹೋದರನಾಗಿಯೂ ಅವರ ಕಷ್ಟಕಾಲದಲ್ಲಿ ಜೊತೆಗಾರನಾಗಿಯೂ ಅವರು ಪ್ರೀತಿ ಪಾತ್ರರಾಗಿದ್ದರು. ಸಮುದಾಯದ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದ ಮತ್ತು ಎಲ್ಲಾ ಸಂದರ್ಭಗಳಲ್ಲಿಯೂ ಸಮುದಾಯದ ಧ್ವನಿಗೆ ಧ್ವನಿಯಾಗುತ್ತಿದ್ದ ಅವರ ಈ ಸಾವನ್ನು ಅರಗಿಸಿಕೊಳ್ಳಲು ಸಮುದಾಯಕ್ಕೆ ಇನ್ನೂ ಸಾಧ್ಯವಾಗುತ್ತಿಲ್ಲ. ಅವರನ್ನು ದುರುಪಯೋಗಿಸಿಕೊಂಡಿದ್ದಾರಾ ಅವರ ಮುಗ್ಧತನದಿಂದ ಲಾಭ ಪಡಕೊಂಡಿದ್ದಾರ ಅವರನ್ನು ಸಿಲುಕಿಸಿ ಹಾಕುವುದಕ್ಕೆ ಬೇಕಾದ ಷಡ್ಯಂತ್ರಗಳು ನಡೆದಿದೆಯಾ ಅವಮಾನವನ್ನು ತಾಳಲಾರದೆ ಅವರು ನೊಂದುಕೊಂಡರಾ ಅಥವಾ ಅವರನ್ನು ಯಾರಾದರೂ ಸಾಯಿಸಿದರಾ ಇತ್ಯಾದಿ ಹತ್ತು ಹಲವು ಪ್ರಶ್ನೆಗಳಿಗೆ ನ್ಯಾಯ ಸಿಗಬೇಕಿದೆ.

ಮುಸ್ಲಿಂ ಸಮುದಾಯದ ಗೌರವಾನ್ವಿತ ಮತ್ತು ಆಪ್ತ ನಾಯಕನೊಬ್ಬನ ಸಾವು ತೀರ ಬೇಜವಾಬ್ದಾರಿಯುತ ರೀತಿಯಲ್ಲಿ ಚರ್ಚೆಗೆ ಒಳಗಾಗಿ ಕೊನೆಗೊಳ್ಳಬಾರದು ಎಂಬುದೇ ನಮ್ಮ ಆಶಯ.