ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪಿಎಫ್‌ಐ ಸ್ಥಾಪಕ ಅಧ್ಯಕ್ಷ ಇ. ಅಬೂಬಕ್ಕರ್ ಜಾಮೀನು ಅರ್ಜಿ ವಜಾಗೊಳಿಸಿದ ದೆಹಲಿ ನ್ಯಾಯಾಲಯ

0
308

ಸನ್ಮಾರ್ಗ ವಾರ್ತೆ

ನವದೆಹಲಿ: ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವಿರುದ್ಧದ ಯುಎಪಿಎ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ, ಸಂಘಟನೆಯ ಸ್ಥಾಪಕ ಅಧ್ಯಕ್ಷ ಇ. ಅಬೂಬಕ್ಕರ್ ಅವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ. ಪಿಟಿಐ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಅಬೂಬಕ್ಕರ್ ಅವರ ಆರೋಗ್ಯ ಹದಗೆಡುತ್ತಿದೆ ಮತ್ತು ಅವರ ವಿರುದ್ಧ ಯಾವುದೇ ದೃಢವಾದ ಪ್ರಕರಣಗಳಿಲ್ಲ ಎಂಬ ಆಧಾರದ ಮೇಲೆ ಸಲ್ಲಿಕೆಯಾಗಿದ್ದ ನಿಯಮಿತ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಶೇಷ ಎನ್‌ಐಎ ನ್ಯಾಯಾಧೀಶ ಪ್ರಶಾಂತ್ ಶರ್ಮಾ ಅವರು ನಡೆಸುತ್ತಿದ್ದರು.

ತಮ್ಮ ಕಕ್ಷಿದಾರರ ವಿರುದ್ಧ ಈಗಾಗಲೇ ಆರೋಪಪಟ್ಟಿ ಸಿದ್ಧವಾಗಿದೆ ಮತ್ತು ಅವರ ಆರೋಗ್ಯವು ಕ್ಷೀಣಿಸುತ್ತಿದೆ ಎಂದು ಅಬೂಬಕ್ಕರ್ ಅವರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ಈ ಪ್ರಕರಣದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದು ಅವರು ವಾದ ಮಂಡಿಸಿದರು. ಇದಕ್ಕೆ ಪ್ರತಿಯಾಗಿ ಜಾಮೀನು ಅರ್ಜಿಯನ್ನು ವಿರೋಧಿಸಿದ ರಾಷ್ಟ್ರೀಯ ತನಿಖಾ ದಳದ (NIA) ಪರ ವಕೀಲ ರಾಹುಲ್ ತ್ಯಾಗಿ, ಸಾಕಷ್ಟು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಈಗಾಗಲೇ ಆರೋಪಗಳನ್ನು ನಿಗದಿಪಡಿಸಲಾಗಿದೆ ಮತ್ತು ಅವರಿಗೆ ಜೈಲಿನಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಜುಲೈ 15ರಂದು ನೀಡಿರುವ ಆದೇಶದಲ್ಲಿ, ಈ ಪ್ರಕರಣದ ಸತ್ಯಾಂಶಗಳು ಮತ್ತು ಸನ್ನಿವೇಶಗಳನ್ನು ಪರಿಗಣಿಸಿ ಅರ್ಜಿದಾರರಿಗೆ ಜಾಮೀನು ನೀಡಲು ಯಾವುದೇ ಆಧಾರಗಳು ಕಂಡುಬರುತ್ತಿಲ್ಲ. ಅದರಂತೆ, ಅರ್ಜಿದಾರ ಅಥವಾ ಆರೋಪಿ ಇ. ಅಬೂಬಕ್ಕರ್ ಅವರ ಪ್ರಸ್ತುತ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಕಳೆದ ತಿಂಗಳು ದೆಹಲಿ ನ್ಯಾಯಾಲಯವು ಭಾರತ ಸರ್ಕಾರವನ್ನು ಉರುಳಿಸಲು ಮತ್ತು 2047ರ ವೇಳೆಗೆ ಇಸ್ಲಾಮಿಕ್ ಖಿಲಾಫತ್ ಸ್ಥಾಪಿಸಲು ಪಿತೂರಿ ನಡೆಸಿದ ಗಂಭೀರ ಅನುಮಾನವಿದೆ ಎಂದು ಗಮನಿಸಿ, 25 ಪಿಎಫ್‌ಐ ಸದಸ್ಯರು ಮತ್ತು ಸಂಘಟನೆಯ ವಿರುದ್ಧ ಐಪಿಸಿ ಮತ್ತು ಯುಎಪಿಎ ಕಾಯ್ದೆಯಡಿ ಆರೋಪಗಳನ್ನು ನಿಗದಿಪಡಿಸಲು ಆದೇಶಿಸಿತ್ತು.

ಅಬೂಬಕ್ಕರ್ ಅವರು ಅನ್ನನಾಳದ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆಯ ನಂತರ ಸುದೀರ್ಘ ವಿಶ್ರಾಂತಿಯಲ್ಲಿದ್ದಾಗ, ಸೆಪ್ಟೆಂಬರ್ 22, 2022 ರಂದು ಮುಂಜಾನೆ ರಾಷ್ಟ್ರೀಯ ತನಿಖಾ ದಳವು ಅವರ ಮನೆಯಲ್ಲಿ ಬಂಧಿಸಿತ್ತು.

ಅವರ ಕುಟುಂಬದ ಪ್ರಕಾರ, ಅಬೂಬಕ್ಕರ್ ಅವರು ಎದೆ ಸೋಂಕು, ತೀವ್ರ ಕೆಮ್ಮು, ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತಗಳೊಂದಿಗೆ ಬಳಲುತ್ತಿದ್ದಾರೆ. ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟ ಕಡಿಮೆಯಾಗಿದ್ದು, ಆರೋಗ್ಯದ ಸ್ಥಿತಿಯ ಬಗ್ಗೆ ಆತಂಕ ಉಂಟಾಗಿದೆ. ಈ ಹಿಂದೆ ಆರೋಗ್ಯ ಸಮಸ್ಯೆಗಳಿಂದಾಗಿ ಜೈಲು ಅಧಿಕಾರಿಗಳು ಅವರನ್ನು ನವದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಿದ್ದರು. 2020ರಲ್ಲಿ ಕ್ಯಾನ್ಸರ್‌ಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಬೂಬಕ್ಕರ್, ಅಂದಿನಿಂದ ಕುಟುಂಬದವರ ತೀವ್ರ ನಿಗಾದಲ್ಲಿದ್ದರು. ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಕಿನ್ಸನ್ ಕಾಯಿಲೆ, ಹೃದಯ ಕಾಯಿಲೆ, ಶಸ್ತ್ರಚಿಕಿತ್ಸೆಯ ನಂತರದ ಅನ್ನನಾಳದ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿರುವುದಾಗಿ ವರದಿಯಾಗಿದೆ.