ಸನ್ಮಾರ್ಗ ವಾರ್ತೆ
ದುಬೈ,ಸೆ.27: ತಾನು ಅಬುಧಾಬಿಗೆ ಬಂದಿದ್ದು ಲವ್ ಜಿಹಾದ್ ಭಾಗವಲ್ಲ, ಈ ಆರೋಪ ನಿರಾಧಾರವಾದುದು ಎಂದು ದಿಲ್ಲಿಯ ಹುಡುಗಿ ಹೇಳಿದ್ದಾಳೆ. ‘ನನ್ನ ಇಚ್ಛೆಯಂತೆ ತಾನು ಇಲ್ಲಿಗೆ ಬಂದಿರುವೆ. ಪ್ರೀತಿಸುವ ವ್ಯಕ್ತಿಯನ್ನು ಮದುವೆಯಾಗುವುದು ತನ್ನ ಉದ್ದೇಶವಾಗಿದೆ’ ಎಂದು ಅಬುಧಾಬಿಯಲ್ಲಿ ಭಾರತದ ದೂತವಾಸದ ಅಧಿಕಾರಿಗಳಿಗೆ ಯುವತಿಯು ತಿಳಿಸಿದ್ದಾಳೆ. ದಿಲ್ಲಿ ಚಾಣಕ್ಯಪುರಿಯ ಕಾಲೇಜಿನಲ್ಲಿ ಪದವಿ ಕಲಿಯುತ್ತಿರುವ ಹುಡುಗಿ ಕೆಲವು ದಿವಸಗಳ ಮುನ್ನ ಯುಎಇಗೆ ಪಲಾಯನಗೈದಿದ್ದಳು.
ಹೆತ್ತವರು ನೀಡಿದ ದೂರಿನಲ್ಲಿ ದಿಲ್ಲಿ ಪೊಲೀಸರು ಕೇಸು ದಾಖಲಿಸಿದ್ದು ಅಬುಧಾಬಿಯ ಭಾರತ ದೂತವಾಸ ಹುಡುಗಿಯ ಜೊತೆಗಿರುವ ಯುವಕನನ್ನು ಕರೆಯಿಸಿದೆ. ತದನಂತರ ಹುಡುಗಿ ಇಲ್ಲಿಗೆ ಬಂದ ಉದ್ದೇಶ ಮತ್ತು ರೀತಿಯನ್ನು ಅಧಿಕಾರಿಗಳು ಕೇಳಿದ್ದಾರೆ.ಆಕೆ ತಾನು ತನ್ನಿಚ್ಛೆಯಂತೆ ಇಲ್ಲಿಗೆ ಬಂದಿದ್ದೇನೆ. ಯಾರೂ ತನಗೆ ಒತ್ತಡ ಹಾಕಿಲ್ಲ ಎಂದಿದ್ದು, ಲವ್ ಜಿಹಾದ್ ಆರೋಪವನ್ನು ತಿರಸ್ಕರಿಸಿದ್ದಾಳೆ.
ಆಕೆ ಪ್ರಾಪ್ತ ವಯಸ್ಕೆಯಾದ್ದರಿಂದ ಆಕೆಯನ್ನು ಯುವಕನೊಂದಿಗೆ ದೂತವಾಸ ಕಳುಹಿಸಿಕೊಟ್ಟಿದೆ. ಹುಡುಗಿ ನೀಡಿದ ವಿವರವನ್ನು ತಂದೆ-ತಾಯಿಗಳಿಗೆ ದೂತವಾಸ ಹಸ್ತಾಂತರಿಸಿದೆ. ಟೂರಿಸ್ಟ್ ವೀಸಾದಲ್ಲಿ ಅಬುದಾಭಿಗೆ ಯುವತಿಯು ಬಂದಿದ್ದು, ಆಕೆಯ ಸುರಕ್ಷತೆಗೆ ಬೇಕಾದ ಕ್ರಮಗಳನ್ನು ದೂತವಾಸ ಮಾಡಿದೆ. ಹುಡುಗಿಯ ತಾಯಿ ಮತ್ತು ಸಹೋದರ ದಿಲ್ಲಿಯಿಂದ ಅಬುಧಾಬಿಗೆ ತೆರಳಿದ್ದಾರೆಂದು ತಿಳಿದು ಬಂದಿದೆ.












