ಮಧ್ಯ ನೀತಿ ಪ್ರಕರಣ| ಅರವಿಂದ್ ಕೇಜ್ರಿವಾಲ್ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ

0
104

ಸನ್ಮಾರ್ಗ ವಾರ್ತೆ

ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ನೀಡಲಾಗಿರುವ ಜಾಮೀನನ್ನು ಪ್ರಶ್ನಿಸಲು ಜಾರಿ ನಿರ್ದೇಶನಾಲಯ (ಇಡಿ) ಜೂನ್ 21ರಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಈ ಅರ್ಜಿ ಪುರಸ್ಕರಿಸಿದ ದೆಹಲಿ ಹೈಕೋರ್ಟ್ ಅರವಿಂದ್ ಕೇಜ್ರಿವಾಲ್ ಬಿಡುಗಡೆಗೆ ತಡೆಯೊಡ್ಡಿದೆ.

ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಲು ತನಿಖಾ ಸಂಸ್ಥೆಗೆ ಸಂಪೂರ್ಣ ಅವಕಾಶವನ್ನು ನೀಡಲಾಗಿಲ್ಲ ಎಂದು ಇಡಿ ಪರ ವಕೀಲ ಎಎಸ್‌ಜಿ ಎಸ್‌ವಿ ರಾಜು ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಹಾಗೆಯೇ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿದ ಆದೇಶಕ್ಕೆ ತಡೆ ನೀಡಿ ಆದಷ್ಟು ಬೇಗ ವಿಚಾರಣೆ ನಡೆಸಬೇಕು ಎಂದು ಇಡಿ ಪರ ವಕೀಲ ಹೈಕೋರ್ಟ್‌ಗೆ ಮನವಿ ಮಾಡಿದರು. ಈ ಅರ್ಜಿಯ ತುರ್ತು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಬಿಡುಗಡೆಗೆ ತಡೆ ನೀಡಿದೆ.

ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 20ರಂದು ಜಾಮೀನು ನೀಡಲಾಗಿದೆ. ರೂಸ್ ಅವೆನ್ಯೂ ನ್ಯಾಯಾಲಯವು ಕೆಲವು ಷರತ್ತುಗಳ ಅಡಿಯಲ್ಲಿ ಒಂದು ಲಕ್ಷ ರೂಪಾಯಿ ಬಾಂಡ್ ಮೇಲೆ ಜಾಮೀನು ನೀಡಿತ್ತು.

ತನಿಖೆಗೆ ಅಡ್ಡಿಪಡಿಸುವ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಬಾರದು. ಅಗತ್ಯವಿದ್ದಾಗ ನ್ಯಾಯಾಲಯಕ್ಕೆ ಹಾಜರಾಗಬೇಕು ಮತ್ತು ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದರು.

ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ ನ್ಯಾಯಾಲಯದ ತೀರ್ಪನ್ನು, ದೆಹಲಿ ಸಚಿವ ಮತ್ತು ಎಎಪಿ ನಾಯಕ ಅತಿಶಿ ಅವರು ‘ಸತ್ಯಮೇವ ಜಯತೆ’ ಎಂದು ಎಕ್ಸ್‌ ಪೋಸ್ಟ್ ಮಾಡಿದ್ದರು. ಹಿರಿಯ ಎಎಪಿ ನಾಯಕ ರಾಘವ್ ಚಡ್ಡಾ ಕೂಡ ‘ಇದು ನ್ಯಾಯದ ವಿಜಯ’ ಎಂದು ಶ್ಲಾಘಿಸಿದ್ದರು. ಈ ನಡುವೆ ಕೇಜ್ರಿವಾಲ್ ಇನ್ನೂ ಆರೋಪಿಯಾಗಿದ್ದು, ಇನ್ನೂ ನಿರಪರಾಧಿ ಎಂದು ಘೋಷಿಸಲಾಗಿಲ್ಲ ಎಂದು ಬಿಜೆಪಿ ನಾಯಕ ಅಜಯ್ ಮಹಾವಾರ್ ಹೇಳಿದ್ದಾರೆ.

https://x.com/barandbench/status/1804029295066579422?t=aMuVaJWOHqKSiHydqW-J_w&s=19