ಸನ್ಮಾರ್ಗ ವಾರ್ತೆ
ಧರ್ಮಸ್ಥಳ ಪ್ರದೇಶದ ಸುತ್ತಮುತ್ತಲಿನ ಕಾಡಿನಲ್ಲಿ ಸಾಮೂಹಿಕವಾಗಿ ನೂರಾರು ಮೃತ ದೇಹಗಳನ್ನು ಹೂತು ಹಾಕಿದ್ದೇನೆಂದು ವ್ಯಕ್ತಿ ಒಬ್ಬ ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಸಕ್ಷಮ ಪ್ರಾಧಿಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾಕ್ಷಿಯ ರಕ್ಷಣೆಗೆ ಅನುಮೋದನೆ ನೀಡಿದೆ. ಆದರೆ ಸಾಕ್ಷಿಯ ಗುರುತು ರಕ್ಷಣೆಯ ವಿಚಾರದಲ್ಲಿ ಗಂಭೀರ ಲೋಪವಾಗಿರುವುದು ಬೆಳಕಿಗೆ ಬಂದಿದೆ. ಸಾಕ್ಷಿಯನ್ನು ಪ್ರತಿನಿಧಿಸುತ್ತಿರುವ ವ್ಯಕ್ತಿಗಳು ಸಾಕ್ಷಿ ಯ ವಯಸ್ಸು ವೃತ್ತಿಯ ಸ್ಥಳ ಚಹರೆ ವೃತ್ತಿಯಲ್ಲಿದ್ದ ಅವಧಿ ಸಮುದಾಯ ಮತ್ತು ಇತರೆ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳಿಸಿದ್ದಾರೆ. ಇದರಿಂದಾಗಿ ಸ್ಥಳೀಯ ಅನೇಕರು ಸಾಕ್ಷಿಯನ್ನು ಅಂದಾಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಾಕ್ಷಿಯ ಮಾಹಿತಿ ಬಹಿರಂಗಪಡಿಸಿದವರ ವಿರುದ್ಧ ಪ್ರತ್ಯೇಕ ತನಿಖೆ ಆರಂಭಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾಕ್ಟರ್ ಅರುಣ್ ಕೆ ತಿಳಿಸಿದ್ದಾರೆ.
ಸಾಕ್ಷಿಯು ಬೆಳ್ತಂಗಡಿಯ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಇದೇ ವೇಳೆ ಸಾಕ್ಷಿ ಸ್ವತಃ ತಾವೇ ಹೊರತೆಗೆದಿರುವುದಾಗಿ ತಿಳಿಸಿರುವ ಅಸ್ತಿಪಂಜರದ ಅವಶೇಷಗಳನ್ನು ನ್ಯಾಯಾಲಯದಲ್ಲಿ ಪೊಲೀಸರಿಗೆ ಹಾಜರುಪಡಿಸಿದ್ದಾರೆ. ಈ ಅವಶೇಷಗಳನ್ನು ಸಾಕ್ಷಿ ಪರ ವಕೀಲರು ಹಾಗೂ ಪಂಚರ ಸಮ್ಮುಖದಲ್ಲಿ ಪೊಲೀಸರು ಸ್ವಾಧೀನಕ್ಕೆ ಪಡೆದುಕೊಂಡಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೆಣಗಳನ್ನು ಹೂತು ಹಾಕಿರುವ ಜಾಗಗಳನ್ನು ಸ್ಪಷ್ಟವಾಗಿ ದೂರುದಾರನು ಗುರುತಿಸಿ ತೋರಿಸಲು ಸಿದ್ಧನಿದ್ದಾರೆ. ಈ ಬಗ್ಗೆ ಪೊಲೀಸರು ಯಾವಾಗ ಬೇಕಾದರೂ ದಿನ ನಿಧಿಪಡಿಸಿದರೂ ನಾವು ದೂರುದಾರರೊಂದಿಗೆ ಬಂದು ಸಹಕರಿಸುತ್ತೇವೆ. ಘಟನೆ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಸಾಕ್ಷ್ಯ ನಾಶವಾಗುವ ಆತಂಕವೂ ಇದ್ದು ಸಾಧ್ಯವಾದಷ್ಟು ಬೇಗ ಇಲ್ಲಿ ಹೇಳಿಕೆ ನೀಡಿರುವ ವ್ಯಕ್ತಿ ಹೂತು ಹಾಕಿರುವ ಮೃತ ದೇಹಗಳನ್ನು ಹೊರ ತೆಗೆಯಲು ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು ಎಂದು ವಕೀಲರು ತಿಳಿಸಿದ್ದಾರೆ.












