ರಾಹುಲ್ ಗಾಂಧಿಯನ್ನು ಆರ್ ಎಸ್ ಎಸ್ ನಾಯಕರು ಭೇಟಿಯಾಗಬಯಸಿದ್ದರೇ? ಭಾರತ್ ಜೋಡೋ ಯಾತ್ರೆಯಲ್ಲಿ ಅವರೇಕೆ ಭಾಗಿಯಾಗಿಲ್ಲ? ದಿ ವೈರ್ ಲೇಖನ

0
284

ಸನ್ಮಾರ್ಗ ವಾರ್ತೆ

ತಮ್ಮನ್ನು ಈವರೆಗೆ ಭೇಟಿಯಾಗದ ರಾಹುಲ್ ಗಾಂಧಿಯಿಂದ ಆರ್ ಎಸ್ಎಸ್ ಮುಖಂಡರು ವಿಚಲಿತರಾಗಿರುವರೇ? ರಾಹುಲ್ ಗಾಂಧಿಯನ್ನು ಭೇಟಿಯಾಗಬೇಕೆಂಬ ಬಯಕೆ ಆರ್ ಎಸ್ ಎಸ್ ನಾಯಕರಲ್ಲಿ ಇದೆಯೇ? ಭೇಟಿಗಾಗಿ ದಿನಾಂಕ ನಿಗದಿಪಡಿಸಲಾಗಿದೆಯೇ ಅಥವಾ ಆರ್ ಎಸ್ ಎಸ್ ನಾಯಕರಿಗೆ ರಾಹುಲ್ ಗಾಂಧಿಯನ್ನು ಭೇಟಿಯಾಗುವ ಇರಾದೆ ಇಲ್ಲವೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಈ ಕುರಿತಂತೆ ದಿ ವಯರ್ ಅಂತರ್ಜಾಲ ಪತ್ರಿಕೆಯು ವಿಸ್ತೃತವಾದ ಬರಹ ಪ್ರಕಟಿಸಿದೆ.

ಕಳೆದ ಎರಡು ವರ್ಷಗಳಲ್ಲಿ ರಾಹುಲ್ ಗಾಂಧಿಯ ಜೊತೆ ಭಿನ್ನ-ಭಿನ್ನ ವಿಚಾರಧಾರೆಯ ಜನರು ಭೇಟಿಯಾಗಿ ಮಾತಾಡಿದ್ದನ್ನು ನೋಡಿದ್ದೇವೆ. ನಾಯಕರು ಭೇಟಿಯಾಗಿ ಮಾತಾಡಿದ್ದನ್ನು ನೋಡಿದ್ದೇವೆ. ಭಾರತ್ ಜೋಡೊ ಯಾತ್ರೆಯ ವೇಳೆ ಅವರನ್ನು ಟೀಕಿಸುವವರೂ ಅವರನ್ನು ಭೇಟಿಯಾಗಿದ್ದಾರೆ. ಇವರಲ್ಲಿ ರಾಜಕಾರಣಿಗಳು, ಚಿಂತಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಉದ್ಯಮಿಗಳೂ ಸೇರಿದ್ದಾರೆ. ರಾಹುಲ್ ಗಾಂಧಿಯನ್ನು ಈ ಯಾತ್ರೆಯ ವೇಳೆ ಭೇಟಿಯಾಗಲು ಬಂದವರನ್ನು ತಡೆದ ಒಂದೇ ಒಂದು ಸುದ್ದಿಯನ್ನೂ ನಾವು ಈವರೆಗೂ ಕೇಳಿಲ್ಲ ಮತ್ತು ಜೋಡೋದಲ್ಲಿ ಭೇಟಿಯಾಗಲು ಬಂದ ಯಾರನ್ನೂ ರಾಹುಲ್ ಗಾಂಧಿ ಮಾತಾಡದೆ ಹಿಂದಕ್ಕೆ ಕಳುಹಿಸಿದ್ದೂ ಇಲ್ಲ ಎಂದು ಲೇಖನದಲ್ಲಿ ಅಪೂರ್ವಾನಂದ್ ಬರೆದಿದ್ದಾರೆ.

ಭಾರತವನ್ನು ಒಗ್ಗೂಡಿಸುವಲ್ಲಿ ಯಾರಿಗೆ ನಂಬಿಕೆ ಇದೆಯೋ ಅವರೆಲ್ಲರೂ ಈ ಜೋಡೊ ಯಾತ್ರೆಯಲ್ಲಿ ಭಾಗವಹಿಸಬಹುದು ಎಂದು ರಾಹುಲ್ ಗಾಂಧಿ ಮೊದಲೇ ಹೇಳಿದ್ದರು. ಹೀಗಿರುವಾಗ ಆರ್ ಎಸ್ ಎಸ್ ಅಧಿಕಾರಿಗಳು ಅಥವಾ ನಾಯಕರು ಯಾಕೆ ಈ ಜೋಡೊ ಯಾತ್ರೆಯಲ್ಲಿ ಎರಡು ಹೆಜ್ಜೆಗಳನ್ನು ಇಡಲು ಬಯಸಲಿಲ್ಲ? ರಾಹುಲ್ ಗಾಂಧಿ ಎಲ್ಲರಿಗೂ ಮುಕ್ತ ಆಹ್ವಾನವನ್ನು ನೀಡಿದ್ದರಲ್ಲವೇ? ಭಾರತೀಯರನ್ನೆಲ್ಲ ಒಗ್ಗೂಡಿಸುವುದರಲ್ಲಿ ಆರ್ ಎಸ್ ಎಸ್ ಗೆ ನಂಬಿಕೆ ಇಲ್ಲವೇ ಎಂದು ಅವರು ತಮ್ಮ ಲೇಖನದಲ್ಲಿ ಪ್ರಶ್ನಿಸಿದ್ದಾರೆ.