ಸನ್ಮಾರ್ಗ ವಾರ್ತೆ
ಉಪ್ಪಿನಂಗಡಿ: ಮಂಗಳೂರಿನಿಂದ ಕೋಲಾರಕ್ಕೆ ಸಾಗಿಸುತ್ತಿದ್ದ ಡೀಸೆಲ್ ತುಂಬಿದ್ದ ಟ್ಯಾಂಕರೊಂದು ಚಕ್ರ ಕಳಚಿದ ಕಾರಣ ಮಗುಚಿ ಬಿದ್ದ ಘಟನೆ ಶನಿವಾರದಂದು ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯ ಬೊಳ್ಳಾರು ಎಂಬಲ್ಲಿ ನಡೆದಿದ್ದು, ಅಪಾಯದ ಅರಿವಿಲ್ಲದೆ ಡೀಸೆಲ್ ತುಂಬಿಸಲು ಸಾರ್ವಜನಿಕರ ನೂಕುನುಗ್ಗಲು ನಡೆಸಿರುವ ಬಗ್ಗೆ ವರದಿಯಾಗಿದೆ.
ಘಟನೆಯಲ್ಲಿ ಡೀಸೆಲ್ ಟ್ಯಾಂಕರ್ ಚಾಲಕ ಮಹೇಶ್ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಕೋಲಾರಕ್ಕೆ ಹೋಗುತ್ತಿದ್ದ ಟ್ಯಾಂಕರ್ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಮಧ್ಯೆ ಟ್ಯಾಂಕರ್ ಮಗುಚಿ ಬಿದ್ದರೂ ಸುಮಾರು ಅರ್ಧ ಘಂಟೆಗಳವರೆಗೆ ಪೊಲೀಸರು ಸ್ಥಳಕ್ಕೆ ಬಾರದ ಕಾರಣ ಸ್ಥಳೀಯರು ಮತ್ತು ವಾಹನ ಚಾಲಕರು, ವಿಷಯ ಸಿಕ್ಕವರೆಲ್ಲ ಡೀಸೆಲ್ ತುಂಬಿಸಲು ಆರಂಭಿಸಿದ್ದರು. ಪರಿಣಾಮವಾಗಿ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗಿತ್ತು.
ನಂತರ ಸ್ಥಳಕ್ಕೆ ಬಂದ ಉಪ್ಪಿನಂಗಡಿ ಪೊಲೀಸರು ಡೀಸೆಲ್ ತುಂಬಿಸಿದ ಸ್ಥಳೀಯರಿಗೆ, ವಾಹನ ಚಾಲಕರಿಗೆ ಲಘು ಲಾಠಿ ಪ್ರಹಾರ ನಡೆಸಿ, ಗುಂಪು ಚದುರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಣ್ಣ ಕಿಡಿ ಹತ್ತಿದರೂ ದೊಡ್ಡ ಅನಾಹುತ ಸಂಭವಿಸುವಂತಹ ಸನ್ನಿವೇಶ ಇದ್ದರೂ ಸ್ಥಳೀಯರು ಹಾಗೂ ಸಾರ್ವಜನಿಕರು ಅಪಾಯದ ಅರಿವಿಲ್ಲದೆ ಡೀಸೆಲ್ ತುಂಬಿಸಲು ನೂಕುನುಗ್ಗಲು ನಡೆಸಿದ್ದು ಎಷ್ಟು ಸರಿ ಎಂಬ ಮಾತು ಕೇಳಿಬಂದಿದೆ.













