‘ನಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ’: ಪ್ರತಿಭಟನಾಕಾರರ ಮೇಲೆ ಪೊಲೀಸರ ದಬ್ಬಾಳಿಕೆಯ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

0
290

ಸನ್ಮಾರ್ಗ ವಾರ್ತೆ

ಸೋಮವಾರ ‘ಕಾಕ್ರೋಚ್ ಜನತಾ ಪಾರ್ಟಿ’ ರಾಜಕೀಯ ಅಭಿಯಾನದ ಕರೆ ಮೇರೆಗೆ ಸಂಸತ್ತಿನತ್ತ ಮೆರವಣಿಗೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ದಬ್ಬಾಳಿಕೆ ಮಾಡಿದ್ದಾರೆಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ ಎಂದು ‘ಬಾರ್ ಆಂಡ್ ಬೆಂಚ್’ ವರದಿ ಮಾಡಿದೆ. “ನಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಮತ್ತು ನಿಮ್ಮ ಸಮಯವನ್ನೂ ವ್ಯರ್ಥ ಮಾಡಿಕೊಳ್ಳಬೇಡಿ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿರುವುದಾಗಿ ‘ಲೈವ್ ಲಾ’ ಉಲ್ಲೇಖಿಸಿದೆ.

ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠದ ಮುಂದೆ ವಕೀಲರೊಬ್ಬರು ಈ ಅರ್ಜಿಯನ್ನು ಪ್ರಸ್ತಾಪಿಸಿ, ಗುರುವಾರವೇ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಿದ್ದರು. ಪೊಲೀಸರ ದಬ್ಬಾಳಿಕೆಗೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳನ್ನು ತಾನು ನ್ಯಾಯಾಲಯಕ್ಕೆ ಸಲ್ಲಿಸಬಲ್ಲೆ ಎಂದು ವಕೀಲರು ತಿಳಿಸಿದರು. ಆದಾಗ್ಯೂ, ತಮಗೆ “ವಿಡಿಯೋಗಳಲ್ಲಿ ಆಸಕ್ತಿಯಿಲ್ಲ” ಎಂದು ಪೀಠವು ಹೇಳಿದೆ ಎಂದು ‘ಬಾರ್ ಆಂಡ್ ಬೆಂಚ್’ ವರದಿ ಮಾಡಿದೆ. “ನಮಗೆ ವೀಕ್ಷಿಸಲು ಸಮಯವಿಲ್ಲ” ಎಂದು ಸೂರ್ಯಕಾಂತ್ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.

ಸೋಮವಾರ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯುಗಳನ್ನು ಸಿಡಿಸಿ ಮತ್ತು ಲಾಠಿಚಾರ್ಜ್ ನಡೆಸಿದ ನಂತರ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಪ್ರತಿಭಟನಾಕಾರರು ಮುಂದೆ ಸಾಗುವುದನ್ನು ಪೊಲೀಸರು ತಡೆದಿದ್ದರೂ, ಕೆಲ ಪ್ರತಿಭಟನಾಕಾರರು ಸಂಸತ್ತಿನ ಸಮೀಪಕ್ಕೆ ತೆರಳಿ ನವದೆಹಲಿಯ ಇತರೆಡೆಗಳಲ್ಲಿ ಜಮಾಯಿಸಿದ್ದರು. ಪ್ರತಿಭಟನಾಕಾರರ ಮೇಲೆ ಪೊಲೀಸರು ಪೆಲೆಟ್ ಗನ್‌ಗಳಿಂದ ಗುಂಡು ಹಾರಿಸಿದ್ದಾರೆ ಎಂದೂ ‘ಕಾಕ್ರೋಚ್ ಜನತಾ ಪಾರ್ಟಿ’ ಆರೋಪಿಸಿದೆ.

ಕೇಂದ್ರ ಸರ್ಕಾರವು ಪೆಲೆಟ್ ಗನ್‌ಗಳನ್ನು ಗುಂಪು ನಿಯಂತ್ರಣದ “ಮಾರಕವಲ್ಲದ” ಶಸ್ತ್ರಾಸ್ತ್ರವೆಂದು ವರ್ಗೀಕರಿಸಿದೆ. ಇದರ ಕಾರ್ಟ್ರಿಡ್ಜ್ ರಬ್ಬರ್ ಅಥವಾ ಪ್ಲಾಸ್ಟಿಕ್‌ನಿಂದ ಮಾಡಿದ ಪೆಲೆಟ್‌ಗಳನ್ನು ಒಳಗೊಂಡಿರುತ್ತದೆ, ಇದು ಸಮೀಪದ ವ್ಯಾಪ್ತಿಯಿಂದ ಹಾರಿಸಿದಾಗ ಕಣ್ಣುಗಳಂತಹ ಸೂಕ್ಷ್ಮ ಭಾಗಗಳಿಗೆ ಹಾನಿ ಮಾಡಬಹುದು. ಪ್ರತಿಭಟನಾಕಾರರ ವಿರುದ್ಧ ಪೆಲೆಟ್ ಗನ್ ಬಳಸಿರುವುದನ್ನು ದೆಹಲಿ ಪೊಲೀಸ್ ಇಲಾಖೆ ನಿರಾಕರಿಸಿದೆ. ಅಲ್ಲದೆ, ಪ್ರತಿಭಟನಾಕಾರರು “ದೊಡ್ಡ ಮಟ್ಟದಲ್ಲಿ ಹಿಂಸಾಚಾರಕ್ಕೆ ತಿರುಗಿದ್ದಾರೆ” ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ ಎಂದು ಅದು ಹೇಳಿಕೊಂಡಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ವಹಣೆಯಲ್ಲಿನ ಅವ್ಯವಸ್ಥೆ ಆರೋಪಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜೂನ್ 6 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಈ CJPಯು ತನ್ನ ಮೊದಲ ಪ್ರತಿಭಟನೆಯನ್ನು ನಡೆಸಿತು. ಅದರ ಬೆನ್ನಲ್ಲೇ ಹಲವು ನಗರಗಳಲ್ಲಿ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಯಿತು. ಜೂನ್ 20 ರಂದು ಜಂತರ್ ಮಂತರ್‌ನಲ್ಲಿ ಈ ಅಭಿಯಾನವು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿತು. ಜೂನ್ 28 ರಂದು ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹದೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾದರು. ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡದಿದ್ದರೆ, ಮುಂಗಾರು ಅಧಿವೇಶನದ ಆರಂಭದ ದಿನವಾದ ಜುಲೈ 20 ರಂದು ಪ್ರತಿಭಟನಾಕಾರರು ಸಂಸತ್ತಿನತ್ತ ಮೆರವಣಿಗೆ ನಡೆಸಲಿದ್ದಾರೆ ಎಂದು ಜುಲೈ 9 ರಂದು ‘ಕಾಕ್ರೋಚ್ ಜನತಾ ಪಾರ್ಟಿ’ ಘೋಷಿಸಿತ್ತು. ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ದಬ್ಬಾಳಿಕೆ ನಡೆಸಿದ್ದಾರೆಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಕೂಡ ಮಂಗಳವಾರ ನಿರಾಕರಿಸಿತ್ತು. “ಇದೆಲ್ಲದಕ್ಕೂ ನ್ಯಾಯಾಲಯವನ್ನು ಎಳೆದು ತರಬೇಡಿ” ಎಂದು ಪೀಠವು ಮೌಖಿಕವಾಗಿ ಅಭಿಪ್ರಾಯಪಟ್ಟಿತ್ತು.