ಕ್ಲೀನ್ ಚಿಟ್ ಪಡೆದರೂ ಡಾ. ಕಫಿಲ್ ಖಾನ್ ಪುನಃ ಅಮಾನತ್ತಿನಲ್ಲಿ: ಯೋಗಿ ಸರಕಾರದ ಆದೇಶ

0
952

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.28: ಗೊರಕ್‍ಪುರ ಆಸ್ಪತ್ರೆಯಲ್ಲಿ ನಡೆದಿರುವ ಮಕ್ಕಳ ಸಾವಿನ ಕುರಿತು ಹೊರಿಸಲಾದ ಎಲ್ಲ ಆರೋಪಗಳಿಂದ ಡಾ. ಕಫಿಲ್ ಖಾನ್ ಆರೋಪ ಮುಕ್ತಗೊಳಿಸಿ ಕ್ಲೀನ್ ಚಿಟ್ ನೀಡಿದ ವರದಿ ಬಹಿರಂಗವಾದ ಬೆನ್ನಿಗೆ ಯೋಗಿ ಸರಕಾರ ಪುನಃ ಎರಡನೆ ಬಾರಿಗೆ ಅವರನ್ನು ಅಮಾನತು ಗೊಳಿಸಿದೆ. ಉತ್ತರಪ್ರದೇಶದ ಬಹ್ರೈಚ್‍ನಲ್ಲಿ ಕಳೆದ ವರ್ಷ ಅನುಮತಿಯಿಲ್ಲದೆ ಹೋಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸರಕಾರವನ್ನು ಟೀಕಿಸಿದ್ದು ಹೊಸ ಅಮಾನತಿಗೆ ಕಾರಣವಾಗಿ ತಿಳಿಸಲಾಗಿದೆ.

ತಮ್ಮ ಪರ ತನಿಖಾ ವರದಿ ಬಂದ ಬಳಿಕವೂ ಕಫೀಲ್ ಖಾನ್‍ರ ಮೊದಲ ಅಮಾನತು ಹಿಂಪಡೆಯಲು ಯೋಗಿ ಸರಕಾರ ಸಿದ್ಧವಾಗದ್ದು ಮಾಧ್ಯಮಗಳಲ್ಲಿ ಚರ್ಚೆಯಾಗುವ ವೇಳೆಯೇ ಎರಡನೆ ಅಮಾನತು ಹೇರಲಾಗಿದೆ. ತನ್ನನ್ನು ಬೇಟೆಯಾಡಲಾಗುತ್ತಿದ್ದು ಅದರಂತೆ ಹೊಸ ಅಮಾನತು ಆದೇಶವನ್ನು ಸರಕಾರ ಹೊರಡಿಸಿದೆ ಎಂದು ಕಪಿಲ್ ಖಾನ್ ಪ್ರತಿಕ್ರಿಯಿಸಿದ್ದಾರೆ. ತನ್ನ ಜೀವಕ್ಕೂ ಬೆದರಿಕೆಯಿದೆ. ಒಂದನೆ ಅಮಾನತು ಅನ್ಯಾಯವಾಗಿತ್ತೆಂದು ವರದಿ ಬಂದರೂ ಅದು ಹಾಗೆಯೇ ಉಳಿಸಿಕೊಳ್ಳಲಾಗಿತ್ತು.

“ಯೋಗಿ ಸರಕಾರದಿಂದ ತನಗೆ ಕ್ಲೀನ್ ಚಿಟ್ ಸಿಕ್ಕಿದ್ದರಿಂದ ನ್ಯಾಯದ ಹೋರಾಟ ಕೊನೆಗೊಳ್ಳುವುದಿಲ್ಲ. ಗೊರಕ್‍ಪುರದಲ್ಲಿ ಮೃತಪಟ್ಟ ಎಲ್ಲ ಮಕ್ಕಳ ಹೆತ್ತವರಿಗೆ ನಷ್ಟಪರಿಹಾರ ನೀಡುವವರೆಗೂ ಮತ್ತು ಮಕ್ಕಳ ಸಾವಿಗೆ ಕಾರಣವಾದವರನ್ನು ಕಾನೂನಿನ ಮುಂದೆ ತರುವವರೆಗೂ ಹೋರಾಟ ಮುಂದುವರಿಯಲಿದೆ” ಎಂದು ಕಫಿಲ್ ಖಾನ್ ಹೇಳಿದ್ದಾರೆ.