ಸನ್ಮಾರ್ಗ ವಾರ್ತೆ
ಎಮಿರೇಟ್ಸ್ ಎನ್ಬಿಡಿಯ ಡೈರೆಕ್ಟ್ ರೆಮಿಟ್ ವಿಧಾನದ ಮೂಲಕ ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರ ಮಾಡುವಾಗ 26.25 ದಿರ್ಹಮ್ ಶುಲ್ಕ ನೀಡಬೇಕೆಂಬ ನಿರ್ಧಾರವು ಭಾರತಕ್ಕೆ ಅನ್ವಯಿಸುವುದಿಲ್ಲ ಎಂದು ಬ್ಯಾ0ಕ್ ಅಧಿಕಾರಿಗಳು ತಿಳಿಸಿದ್ದಾರೆ. ವಿವಿಧ ಮಾಧ್ಯಮಗಳು ಶುಲ್ಕದ ಬಗ್ಗೆ ಸುದ್ದಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಈ ಸ್ಪಷ್ಟನೆ ನೀಡಿದ್ದಾರೆ. ಭಾರತವನ್ನು ಹೊರತುಪಡಿಸಿ ಪಾಕಿಸ್ತಾನ ಈಜಿಪ್ಟ್ ಫಿಲಿಪಿನ್ಸ್ ಮುಂತಾದ ದೇಶಗಳ ನಾಗರಿಕರಿಗೂ ಈ ಶುಲ್ಕದ ದಿಂದ ವಿನಾಯಿತಿ ಇದೆ. ಈಗಾಗಲೇ ಈ ಎಲ್ಲ ರಾಷ್ಟ್ರಗಳ ನಾಗರಿಕರಿಗೂ ಹಣಕಾಸು ವ್ಯವಹಾರ ಮಾಡುವಾಗ ಶುಲ್ಕದಿಂದ ವಿನಾಯಿತಿ ಇದ್ದು ಅದು ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಹಲವು ರಾಷ್ಟ್ರಗಳಿಗೆ ಹಣಕಾಸಿನ ವ್ಯವಹಾರ ನಡೆಸುವುದಕ್ಕೆ ಈ ತಿಂಗಳಿನ ಸೆಪ್ಟೆಂಬರ್ ನಿಂದ 26.25 ದಿರ್ಹಂ ಶುಲ್ಕವನ್ನು ವಿಧಿಸುವುದಾಗಿಯೂ ತಿಳಿಸಲಾಗಿದೆ. ಹೊಸ ನಿಯಮ ಯಾರಿಗೆ ಅನ್ವಯವಾಗುತ್ತದೋ ಅವರಿಗೆ ಬ್ಯಾಂಕ್ ಇಮೇಲ್ ಮೂಲಕ ತಿಳಿಸುತ್ತದೆ ಎಂದು ಕೂಡ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರ ಮಾಡುವವರಿಗೆ ಯುಏ ಇ ಯ ವಿವಿಧ ಬ್ಯಾಂಕುಗಳು 20 ದಿರ್ಹಮ್ ನಿಂದ 60 ದಿರ್ಹಮ್ ವರೆಗೆ ಫೀಸ್ ವಿಧಿಸುತ್ತಿದೆ. ವ್ಯಾಟ್ ಸಹಿತ ನಿಶ್ಚಿತ ಶುಲ್ಕವು ಆನ್ಲೈನ್, ಮೊಬೈಲ್, ಇ ಎನ್ ಬಿ ಡಿ ಎಕ್ಸ್ ಗಳ ಮೂಲಕ ವ್ಯವಹಾರ ನಡೆಸುವವರಿಗೆ ಮಾತ್ರ ಶುಲ್ಕಗಳನ್ನು ವಿಧಿಸಲಾಗುತ್ತಿತ್ತು.
ಆದರೆ ಎನ್ ಬಿ ಡಿ ಡೈರೆಕ್ಟ್ ರಿಮಿಟ್ ಸೇವೆಯು ನಿರ್ದಿಷ್ಟ ದೇಶದವರಿಗೆ ಶುಲ್ಕದಿಂದ ವಿನಾಯಿತಿ ಘೋಷಿಸಿತ್ತು. ಅತ್ಯಂತ ಕಡಿಮೆ ಶುಲ್ಕದಲ್ಲಿ ಸುರಕ್ಷಿತವಾಗಿ ಹಣ ಕಳುಹಿಸುವ ವ್ಯವಸ್ಥೆ ಎಂಬ ನೆಲೆಯಲ್ಲಿ ಈ ಬ್ಯಾಂಕ್ ಮೂಲಕ ಭಾರತೀಯರು ಹಣ ಕಳುಹಿಸುತ್ತಿದ್ದಾರೆ. ಒಂದು ನಿಮಿಷದಲ್ಲಿ ಹಣ ಕಳುಹಿಸುವ ವ್ಯವಸ್ಥೆ ಈ ಡೈರೆಕ್ಟ್ ರಿಮಿಟ್ ಆಗಿದ್ದು ಎಲ್ಲೆಡೆ ಜನಪ್ರಿಯವಾಗಿದೆ.












