ಕಳಚಬೇಕಾದುದು ದೇಹದ ಹೊರಗಿನ ಬುರ್ಖಾವನ್ನಲ್ಲ…

0
475

ಸನ್ಮಾರ್ಗ ಸಂಪಾದಕೀಯ

ಮುಂಬೈಯ ಎಸ್.ಬಿ.ಐ. ಶಾಖೆಯು ಬ್ಯಾಂಕ್ ಆವರಣದಲ್ಲಿ ಅಂಟಿಸಿರುವ ನೋಟೀಸೊಂದು ವಿವಾದಕ್ಕೆ ಕಾರಣವಾಗಿದೆ. ಬುರ್ಖಾ ಮತ್ತು ಸ್ಕಾರ್ಫ್ ಧರಿಸಿ ಬ್ಯಾಂಕ್ ಪ್ರವೇಶಿಸುವುದಕ್ಕೆ ಆ ನೋಟೀಸಿನಲ್ಲಿ ನಿಷೇಧ ಹೇರಲಾಗಿತ್ತು. ಮುಸ್ಲಿಮ್ ಬಾಹುಳ್ಯ ಪ್ರದೇಶವಾದ ನೆಹರೂ ನಗರದ ಬ್ಯಾಂಕ್ ಗ್ರಾಹಕರು ಈ ನೋಟೀಸಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರತಿಭಟನೆಯನ್ನೂ ವ್ಯಕ್ತಪಡಿಸಿದರು. ಬಳಿಕ ನವೆಂಬರ್ 3ರಂದು ಬ್ಯಾಂಕ್ ತನ್ನ ಈ ನೋಟೀಸನ್ನು ಹಿಂಪಡೆಯಿತು. ಹಾಗಂತ, ಇದು ಮೊದಲ ಪ್ರಕರಣ ಅಲ್ಲ.

2019 ಮೇನಲ್ಲಿ ಬ್ಯಾಂಕ್ ಆಫ್ ಬರೋಡಾದ ಸೂರತ್ ಶಾಖೆಯೂ ಇಂಥದ್ದೇ ಒಂದು ನೋಟೀಸನ್ನು ತನ್ನ ಮುಖ್ಯ ಪ್ರವೇಶ ದ್ವಾರದಲ್ಲಿ ಅಂಟಿಸಿತ್ತು. ಹೆಲ್ಮೆಟ್ ಮತ್ತು ಬುರ್ಖಾವನ್ನು ಕಳಚಿ ಬ್ಯಾಂಕ್ ಪ್ರವೇಶಿಸಿ ಎಂದು ಆ ನೋಟೀಸಿನಲ್ಲಿ ಹೇಳಲಾಗಿತ್ತು. ಕಾ ಪಾಬಿಡಾ ಚೆಕ್ಲಾ ಎಂಬ ಮುಸ್ಲಿಮ್ ಬಾಹುಳ್ಯ ಪ್ರದೇಶದಲ್ಲಿ ಈ ನೋಟೀಸನ್ನು ಪ್ರದರ್ಶಿಸಲಾಗಿತ್ತು. ಗ್ರಾಹಕರು ಪ್ರತಿಭಟಿಸಿದರು. ಬಳಿಕ ಬುರ್ಖಾವನ್ನು ಕೈಬಿಟ್ಟು ಆ ಜಾಗದಲ್ಲಿ ನಕಾಬನ್ನು (ಮಾಸ್ಕ್) ಸೇರಿಸಲಾಗಿತ್ತು. ಇದರ ಜೊತೆಗೇ ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಸಂಸ್ಕಾರದ ಕುರಿತಂತೆ ಟಿ.ವಿ. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದ ಲೈವ್ ವಿವರಗಳನ್ನೂ ಎತ್ತಿಕೊಳ್ಳಬಹುದು. ವೈದಿಕ ಆಚರಣೆಯಿಲ್ಲದೆ ಮತ್ತು ಪುರೋಹಿತರಿಲ್ಲದೇ ಅಂತ್ಯಸಂಸ್ಕಾರ ನಡೆಯುತ್ತಿರುವುದಕ್ಕೆ ಟಿ.ವಿ. ನಿರೂಪಕ ಅಚ್ಚರಿ ವ್ಯಕ್ತ ಪಡಿಸಿದ್ದೂ ಆ ಬಳಿಕ ಚರ್ಚೆಗೆ ಒಳಗಾಗಿತ್ತು. ಅಂದರೆ, ಪುರೋಹಿತರು, ಹೋಮ, ಹವನ, ದರ್ಬೆ ಕಟ್ಟುವುದು, ಕಳಶ ಪ್ರದರ್ಶನ ಇತ್ಯಾದಿಗಳಿಲ್ಲದ ಅಂತ್ಯಸಂಸ್ಕಾರ ಅಸಾಧ್ಯ ಮತ್ತು ಅವುಗಳು ಪ್ರತಿ ಅಂತ್ಯಸಂಸ್ಕಾರದಲ್ಲೂ ಕಡ್ಡಾಯ ಎಂಬಂಥ ಭಾವ ಅದು. ನಿಜವಾಗಿ

ಈಡಿಗ, ದ್ರಾವಿಡ ಸಂಸ್ಕೃತಿಯಲ್ಲಿ ಅಂತ್ಯಸಂಸ್ಕಾರ ನಡೆಸುವುದು ಪುರೋಹಿತರಲ್ಲ. ಪುನೀತ್ ರಾಜ್‌ಕುಮಾರ್ ಕುಟುಂಬ ನಡಕೊಂಡದ್ದೂ ಹೀಗೆಯೇ. ಆದರೆ,

ಇವತ್ತಿನ ಭಾರತದ ಆಲೋಚನಾ ಕ್ರಮ ನಿಧಾನಕ್ಕೆ ಹೇಗೆ ಬೆಳೆಯುತ್ತಾ ಇದೆಯೆಂದರೆ, ಎಲ್ಲವೂ ಮತ್ತು ಎಲ್ಲರೂ ಒಂದೇ ರೀತಿಯಲ್ಲಿ ಇರಬೇಕು ಎಂಬಂತೆ. ಆಹಾರ, ಬಟ್ಟೆ, ಆಚರಣೆ, ಭಾಷೆ ಇತ್ಯಾದಿ ಎಲ್ಲವೂ ಏಕಪ್ರಕಾರವಾಗಿರುವುದೇ ಭಾರತೀಯತೆ ಎಂದು ನಂಬಿಸುವ ಶ್ರಮ ನಡೆಯುತ್ತಿದೆ. ಅದರಲ್ಲೂ ಮುಸ್ಲಿಮರ ಪ್ರತಿಯೊಂದು ನಡೆ-ನುಡಿಗಳನ್ನೂ ಪ್ರಶ್ನಿಸುವ ಮತ್ತು ಅನ್ಯರಂತೆ ನಡೆಸಿಕೊಳ್ಳುವ ಕ್ರಮ ಚಾಲ್ತಿಯಲ್ಲಿದೆ. ನಿಜವಾಗಿ,

ಸಮಸ್ಯೆ ಇರುವುದು ಬುರ್ಖಾದಲ್ಲಲ್ಲ- ಬುರ್ಖಾದೊಳಗಿನ ಮನುಷ್ಯರನ್ನು ಓದುವುದರಲ್ಲಿ ಮತ್ತು ಅರ್ಥೈಸುವುದರಲ್ಲಿ. ನಕಾಬ್ ಧರಿಸಿ ಬ್ಯಾಂಕ್ ಪ್ರವೇಶಿಸಬೇಡಿ ಎಂದು ಹೇಳುವ ಅವೇ ಬ್ಯಾಂಕುಗಳು ಕೊರೋನಾ ಮಾಸ್ಕ್ ಧರಿಸದೇ ಒಳ ಪ್ರವೇಶಿಸುವುದನ್ನು ಅಪರಾಧವಾಗಿ ಕಾಣುತ್ತವೆ. ಮಾಸ್ಕ್ ಧರಿಸದವರಿಗೆ ಸೇವೆ ಒದಗಿಸುವುದಕ್ಕೂ ಅವು ನಿರಾಕರಿಸುತ್ತವೆ. ಸಾಮಾನ್ಯವಾಗಿ ನಕಾಬ್ ಮತ್ತು ಮಾಸ್ಕ್ನ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಮೂಗು ಮತ್ತು ಬಾಯಿಯನ್ನು ಮುಚ್ಚುವ ನಕಾಬ್‌ನಿಂದ ಯಾರಿಗೆ ತೊಂದರೆಯಾಗುತ್ತೋ ಅವರಿಗೆ ಕೊರೋನಾ ಮಾಸ್ಕ್ ನಿಂದಲೂ ತೊಂದರೆಯಾಗಬೇಕು. ಗುರುತು ಪತ್ತೆಹಚ್ಚುವಿಕೆಗೆ ತೊಂದರೆ ಎನ್ನುತ್ತಾ ಕೊಡುವ ಎಲ್ಲ ಕಾರಣಗಳೂ ನಕಾಬ್‌ನಂತೆಯೇ ಮಾಸ್ಕ್ ಗೂ ಅನ್ವಯಿಸುತ್ತದೆ. ಕೊರೋನಾದ ಈ ಎರಡು ವರ್ಷಗಳಲ್ಲಿ ಮಾಸ್ಕ್ ಧರಿಸಿದ್ದಕ್ಕಾಗಿ ಯಾವ ಬ್ಯಾಂಕ್‌ಗಳೂ ಯಾವುದೇ ವ್ಯಕ್ತಿಯನ್ನೂ ಆಕ್ಷೇಪಿಸಿಲ್ಲ. ಗುರುತು ಪತ್ತೆ ಹಚ್ಚುವಿಕೆಗೆ ಅಡ್ಡಿ ಎಂದು ಹೇಳಿ ಮಾಸ್ಕ್ ಧರಿಸದಂತೆ ನೋಟೀಸು ಅಂಟಿಸಿಲ್ಲ. ಹೀಗಿರುವಾಗ, ಕಳೆದ ಎರಡು ವರ್ಷಗಳಿಂದ ಮಾಸ್ಕ್ ನಿಂದಾಗದ ತೊಂದರೆಯು ಆಗಾಗ ನಕಾಬ್‌ನಿಂದ ಮತ್ತು ಬುರ್ಖಾದಿಂದ ಮಾತ್ರ ಯಾಕಾಗುತ್ತಿದೆ? ನಿಜಕ್ಕೂ ಸಮಸ್ಯೆಯಿರುವುದು ನಕಾಬ್ ಮತ್ತು ಬುರ್ಖಾದಲ್ಲೋ ಅಥವಾ ಅದನ್ನು ನೋಡುವ ಕಣ್ಣು ಮತ್ತು ಮನಸ್ಸುಗಳಲ್ಲೋ?

ಈ ದೇಶದ ಹೆಚ್ಚುಗಾರಿಕೆಯೇ ಸಾಂಸ್ಕೃತಿಕ ವೈವಿಧ್ಯತೆ. ಬಹುಸಂಸ್ಕೃತಿಯ ನಾಡು ಎಂಬ ಮಾತಿನಲ್ಲಿಯೇ ಇದು ಸ್ಪಷ್ಟವಿದೆ. ರೊಟ್ಟಿ, ಚಟ್ನಿ, ಸಾಂಬಾರು, ಉಪ್ಪಿಟ್ಟು, ಶಾವಿಗೆ, ಜೋಳದ ರೊಟ್ಟಿ, ಪೊಂಗಲ್, ಸಾರು, ಹುಳಿ, ಗೊಜ್ಜು, ಅನ್ನ, ಮುದ್ದೆ, ಹಪ್ಪಳ, ಚಿತ್ರಾನ್ನ, ಮೊಸರನ್ನ, ತುಪ್ಪದನ್ನ ದಂತೆಯೇ ಮೀನು, ಮಾಂಸ ಪದಾರ್ಥಗಳೂ, ಬಿರಿಯಾನಿ ಊಟಗಳೂ ಇಲ್ಲಿವೆ. ಉಡುಗೆಯಲ್ಲೂ ಈ ವೈವಿಧ್ಯತೆಗಳಿವೆ. ಕೇರಳದಲ್ಲಿ ಒಂದು ಬಗೆಯಾದರೆ ಬಿಹಾರದಲ್ಲಿ ಇನ್ನೊಂದು ಬಗೆ. ಬುಡಕಟ್ಟುಗಳದ್ದು ಬೇರೆಯದೇ ರೀತಿ. ಆದಿವಾಸಿಗಳು ಮತ್ತು ವಿವಿಧ ಜಾತಿ ಗೋತ್ರಗಳದ್ದು ಇನ್ನೊಂದು ರೀತಿ. ಸಾವಿಗೆ ವ್ಯಕ್ತಪಡಿಸುವ ದುಃಖದಲ್ಲೂ ತರಹೇವಾರಿ. ಸಾವಿನ ಮನೆಯಲ್ಲಿ ಮೌನವಾಗಿ ಅಳುವವರೂ ಅಟ್ಟಹಾಸದಿಂದ ಕೂಗುವವರೂ ಇರುವಂತೆಯೇ ನೃತ್ಯ ಮಾಡುತ್ತಾ ದುಃಖ ವ್ಯಕ್ತಪಡಿಸುವ ಇರುಳರ್ ಎಂಬ ಬುಡಕಟ್ಟುಗಳೂ ಇವೆ. ಹಾಗೆಯೇ ಮೃತದೇಹವನ್ನು ಹೂಳುವ ಮತ್ತು ಅಗ್ನಿಗರ್ಪಿಸುವ ಸಂಪ್ರದಾಯಗಳೂ ಇವೆ. ಹಾಗಂತ,

ಇವೆಲ್ಲ ಇತ್ತೀಚೆಗೆ ನುಸುಳಿಕೊಂಡ ಹೊಸ ಕ್ರಮಗಳೇನೂ ಅಲ್ಲ. ತಲೆತಲಾಂತರದಿಂದ ಇಂಥ ವೈವಿಧ್ಯಮಯ ಆಚರಣೆಗಳು ಈ ದೇಶದ ಮಣ್ಣಿನಲ್ಲಿ ಬೆರೆತುಕೊಂಡಿವೆ. ಆದರೆ, ಮುಸ್ಲಿಮರ ಬುರ್ಖಾ, ಕುರ್‌ಆನ್, ನಮಾಝï, ಅದಾನ್‌ಗಳನ್ನೆಲ್ಲ ಸಮಸ್ಯೆ ಎಂಬಂತೆ ಬಿಂಬಿಸುತ್ತಿರುವುದಕ್ಕೆ ಇಷ್ಟು ದೀರ್ಘ ಇತಿಹಾಸವಿಲ್ಲ. ಮಾತ್ರವಲ್ಲ, ‘ಬುರ್ಖಾ ಧರಿಸಿ ಬ್ಯಾಂಕ್ ಪ್ರವೇಶಿಸಬೇಡಿ’ ಎಂದು ಬೋರ್ಡ್ ತಗುಲಿಸಿದವರೊಂದಿಗೆ ಬುರ್ಖಾದ ಬಗ್ಗೆಯೋ ಅಥವಾ ನಕಾಬ್‌ಗೂ ಬುರ್ಖಾಕ್ಕೂ ನಡುವೆ ಇರುವ ವ್ಯತ್ಯಾಸದ ಕುರಿತೋ ಪ್ರಶ್ನಿಸಿದರೆ, ಸಮರ್ಪಕ ಉತ್ತರ ಲಭಿಸೀತೆಂದು ನಿರೀಕ್ಷಿಸುವ ಹಾಗೂ ಇಲ್ಲ. ಬುರ್ಖಾ ಯಾಕೆ ಬೇಡ ಎಂದರೆ ಅದನ್ನು ಮುಸ್ಲಿಮ್ ಮಹಿಳೆಯರು ಧರಿಸುತ್ತಾರೆ ಎಂಬುದೊಂದೇ ಈ ವಿರೋಧಕ್ಕೆ ಬಹುಮುಖ್ಯ ಕಾರಣ. ಉಳಿದೆಲ್ಲವೂ ತಮ್ಮ ಅಸಹನೆಯನ್ನು ಅಡಗಿಸುವುದಕ್ಕಾಗಿ ಮುಂದಿಡುತ್ತಿರುವ ಕೃತಕ ನೆವನಗಳು ಮಾತ್ರ. ಇದೊಂದು ರಾಜಕೀಯ ಷಡ್ಯಂತ್ರ. ಮುಸ್ಲಿಮರ ಪ್ರತಿಯೊಂದನ್ನೂ ಗುರಿ ಮಾಡುವುದು ಮತ್ತು ಅವರನ್ನು ಹಿಂದೂಗಳ ಶತ್ರುಗಳಂತೆ ಬಿಂಬಿಸುವುದು. ಮುಸ್ಲಿಮರ ಆಹಾರ, ಆಚಾರ, ವಿಚಾರ, ಉಡುಗೆ, ಆರಾಧನೆ, ಸಂಪ್ರದಾಯ… ಹೀಗೆ ಎಲ್ಲವನ್ನೂ ಹಿಂದೂ ವಿರೋಧಿಯಾಗಿ ಬಿಂಬಿಸುತ್ತಾ ಅವಕ್ಕೆಲ್ಲಾ ಸುಳ್ಳು ವ್ಯಾಖ್ಯಾನಗಳನ್ನು ತೇಲಿ ಬಿಡುವುದು. ಇದು ಇವತ್ತಿನ ದಿನಗಳಲ್ಲಿ ಬಹಳ ವ್ಯವಸ್ಥಿತವಾಗಿ ಮತ್ತು ಯೋಜಿತವಾಗಿ ನಡೆಯುತ್ತಿದೆ. ಜೊತೆಗೇ, ಅತ್ಯಂತ ವಿದ್ಯಾವಂತರೂ ಇಂಥ ಪ್ರಚಾರಗಳಿಗೆ ಬಲಿಯಾಗುತ್ತಿದ್ದಾರೆ. ಮಾತ್ರವಲ್ಲ, ಹೊಸ ತಲೆಮಾರುಗಳಿಗೆ ನಿರ್ದಿಷ್ಟವಾದ ಸ್ಟೀರಿಯೋಟೈಪ್ಡ್ ವಿಚಾರಗಳನ್ನೇ ತುಂಬಿಸಲಾಗುತ್ತಿದೆ. ಪುನೀತ್ ರಾಜ್‌ಕುಮಾರ್ ಅವರ ಅಂತ್ಯಸಂಸ್ಕಾರದ ವಿಷಯವಾಗಿ ಟಿ.ವಿ. ಚಾನೆಲ್‌ನ ನಿರೂಪಕನಲ್ಲಿ ಕಂಡುಬಂದ ಅಚ್ಚರಿಗೆ ಕಾರಣ ಇದುವೇ. ವೈದಿಕರಿಲ್ಲದೇ ಅಂತ್ಯಸಂಸ್ಕಾರ ನಡೆಯಲ್ಲ, ಹೋಮ-ಹವನಗಳಿಲ್ಲದೇ ಕುಟುಂಬಸ್ಥರೇ ಅಂತ್ಯಸಂಸ್ಕಾರ ನಡೆಸುವುದು ಅಸಾಧ್ಯ ಎಂಬ ಭಾವ ಅವರಲ್ಲಿರುವುದು ಈ ಸ್ಟೀರಿಯೋಟೈಪ್ಡ್ ಮನಸ್ಥಿತಿಯನ್ನು ಸಾಬೀತುಪಡಿಸುತ್ತದೆ. ನಿಜವಾಗಿ,

ಈ ದೇಶದ ಸಮಸ್ಯೆ ಬುರ್ಖಾನೂ ಅಲ್ಲ, ನಮಾಝೂ ಅಲ್ಲ. ಅಥವಾ ಕುರ್‌ಆನ್, ಅದಾನ್, ಆಹಾರ ಕ್ರಮಗಳೂ ಅಲ್ಲ. ಸಮಸ್ಯೆ ಇರುವುದು ಇವೆಲ್ಲವನ್ನೂ ನೋಡುವ ಹೃದಯಗಳಲ್ಲಿ. ಮುಸ್ಲಿಮರನ್ನು ಅನ್ಯರೆಂದು ಬಿಂಬಿಸಿ ನಡೆಸಲಾಗುತ್ತಿರುವ ಪ್ರಚಾರ ಅಭಿಯಾನದ ಫಲಿತಾಂಶವೇ ಬ್ಯಾಂಕ್‌ನ ಎದುರು ಅಂಟಿಸಲಾದ ನೋಟೀಸು. ಹಾಗಂತ, ನೀವು ಬುರ್ಖಾ ಕಳಚಿ ಹೋದರೂ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳುವಂತಿಲ್ಲ. ‘ನಿಮ್ಮ ಹೆಸರೇ ಅರ್ಥವಾಗುತ್ತಿಲ್ಲ, ಅರಬಿ ಮೂಲದ ಹೆಸರಿನ ಬದಲು ಭಾರತೀಯ ಮೂಲದ ಹೆಸರನ್ನು ಇಟ್ಟುಕೊಳ್ಳಿ..’ ಎಂದು ಆ ಬಳಿಕ ಆ ಬ್ಯಾಂಕು ತಕರಾರು ತೆಗೆಯಬಹುದು. ಕಾರಣಗಳನ್ನು ಹುಡುಕುವವರಿಗೆ ಕಾರಣ ಸಿಕ್ಕೇ ಸಿಗುತ್ತದೆ. ಅಂದಹಾಗೆ,

ಮಾಸ್ಕ್ ನಿಂದಾಗದ ತೊಂದರೆ, ಬುರ್ಖಾ ಮತ್ತು ನಕಾಬ್‌ನಿಂದಾಗುತ್ತದೆ ಎಂದು ವಾದಿಸುವುದರಲ್ಲೇ ಅದಕ್ಕಿರುವ ನಿಜವಾದ ಕಾರಣಗಳು ಅರ್ಥವಾಗುತ್ತವೆ. ಆದ್ದರಿಂದ ಕಳಚಬೇಕಾಗಿರುವುದು ಮನಸ್ಸಿನ ಪರದೆಯನ್ನೇ ಹೊರತು ದೇಹದ ಪರದೆಯನ್ನಲ್ಲ.