ಎಪ್‌ಸ್ಟೀನ್ ಸಾವು ಒಂದು ಕೊಲೆ: ವಿಧಿವಿಜ್ಞಾನ ತಜ್ಞ ಪ್ರೊ. ಮೈಕೆಲ್ ಫ್ರೀಮನ್

0
7

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್: ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಾಗಿ ಅವರನ್ನು ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ವಿಧಿವಿಜ್ಞಾನ ತಜ್ಞರೊಬ್ಬರು ಹೇಳಿದ್ದಾರೆ. ನ್ಯೂಯಾರ್ಕ್ ವೈದ್ಯಕೀಯ ಪರೀಕ್ಷಕರ ದಾಖಲೆಗಳು ಮತ್ತು ಚಿತ್ರಗಳನ್ನು ಪರಿಶೀಲಿಸಿದ ಬ್ರಿಟಿಷ್ ತಜ್ಞ ಪ್ರೊ. ಮೈಕೆಲ್ ಫ್ರೀಮನ್ ಈ ಹೊಸ ಮೌಲ್ಯಮಾಪನ ಮಾಡಿದ್ದಾರೆ.

ಎಪ್‌ಸ್ಟೀನ್ ಅವರನ್ನು ಹಿಂದಿನಿಂದ ಕತ್ತು ಹಿಸುಕಿ ಕೊಂದಿರುವ ಸಾಧ್ಯತೆಯಿದೆ ಎಂದು ಅವರು ತೀರ್ಮಾನಿಸಿದ್ದಾರೆ. ಆದಾಗ್ಯೂ, ಈ ಅಧ್ಯಯನವು ಸಹ-ತಜ್ಞರಿಂದ ವಿಮರ್ಶಿಸಲ್ಪಟ್ಟಿಲ್ಲ (ಪೀರ್-ರಿವ್ಯೂಡ್) ಮತ್ತು ಮೃತದೇಹವನ್ನು ನೇರವಾಗಿ ಪರೀಕ್ಷಿಸಲಾಗಿಲ್ಲ.

ಎಪ್‌ಸ್ಟೀನ್ ಅವರ ಎಡ ಭುಜದ ಮೇಲೆ ಆಳವಾದ ರಕ್ತಸ್ರಾವ, ಮುಖದ ಮೇಲೆ ಥಳಿಸಿದ ಗುರುತುಗಳು, ಕುತ್ತಿಗೆಯ ಗಾಯದ ಮೇಲ್ಭಾಗದಲ್ಲಿ ಕತ್ತರಿಸಿದ ಗಾಯಗಳು ಮತ್ತು ಉಗುರಿನ ಗುರುತುಗಳು ಕಂಡುಬಂದಿವೆ ಎಂದು ಮೈಕೆಲ್ ಫ್ರೀಮನ್ ಹೇಳಿದ್ದಾರೆ.

ಸಂಘರ್ಷದ ಸಮಯದಲ್ಲಿ ಕುತ್ತಿಗೆಯ ಸುತ್ತಲಿನ ಕುಣಿಕೆಯನ್ನು ತೆಗೆಯಲು ಪ್ರಯತ್ನಿಸಿರುವುದರ ಸಂಕೇತ ಇದಾಗಿರಬಹುದು ಎಂದೂ ಅವರು ಅಂದಾಜಿಸಿದ್ದಾರೆ. ಕತ್ತು ಹಿಸುಕಿ ಕೊಂದ ನಂತರ ಮೃತದೇಹವನ್ನು ಹಾಸಿಗೆಯಿಂದ ನೇತುಹಾಕಿರಬಹುದು ಎಂದು ಅವರು ಹೇಳಿದ್ದಾರೆ.

ಲೈಂಗಿಕ ಕಳ್ಳಸಾಗಣೆ ಪ್ರಕರಣದಲ್ಲಿ ವಿಚಾರಣೆಗೆ ಕಾಯುತ್ತಿದ್ದ ಎಪ್‌ಸ್ಟೀನ್, ಆಗಸ್ಟ್ 10, 2019 ರಂದು ನ್ಯೂಯಾರ್ಕ್ ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯ ಅಧಿಕೃತ ತೀರ್ಮಾನವಾಗಿತ್ತು.

ಅಂದಿನ ನ್ಯೂಯಾರ್ಕ್ ಮುಖ್ಯ ವೈದ್ಯಕೀಯ ಪರೀಕ್ಷಕಿ ಡಾ. ಬಾರ್ಬರಾ ಸ್ಯಾಂಪ್ಸನ್ ಕೂಡ, ಸಾವಿಗೆ ಆತ್ಮಹತ್ಯೆಯೇ ಕಾರಣ ಎಂಬ ತಮ್ಮ ನಿಲುವಿಗೆ ತಾವು ಬದ್ಧರಾಗಿರುವುದಾಗಿ ತಿಳಿಸಿದ್ದರು. ಕತ್ತು ಹಿಸುಕಿ ಮಾಡುವ ಕೊಲೆಗಳಲ್ಲಿ ಕಂಡುಬರುವ ರಕ್ಷಣಾತ್ಮಕ ಗಾಯಗಳು ಎಪ್‌ಸ್ಟೀನ್ ಅವರ ದೇಹದ ಮೇಲಿರಲಿಲ್ಲ ಎಂದೂ ಅಧಿಕಾರಿಗಳು ಬೆಟ್ಟು ಮಾಡಿದ್ದರು.

ಎಪ್‌ಸ್ಟೀನ್ ಅವರನ್ನು ಯಾರು ಕೊಂದರು ಎಂಬ ಬಗ್ಗೆ ತಮಗೆ ಯಾವುದೇ ಅಭಿಪ್ರಾಯವಿಲ್ಲ ಮತ್ತು ಇತರ ತಜ್ಞರು ಈ ಸಂಶೋಧನೆಗಳನ್ನು ಪರಿಶೀಲಿಸಬೇಕು ಎಂದು ಪ್ರೊ. ಮೈಕೆಲ್ ಫ್ರೀಮನ್ ಹೇಳಿದ್ದಾರೆ.