ಸಮಾನತೆಯನ್ನು ಬೋಧಿಸಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ ಪ್ರವಾದಿ ಮುಹಮ್ಮದ್ (ಸ): ಪ್ರೊ. ಪರಮೇಶ್ವರ

0
239

ಸನ್ಮಾರ್ಗ ವಾರ್ತೆ

ಬೀದರ್: ಭಾರತದಲ್ಲಿ ಪ್ರಚಲಿತವಿದ್ದ ಜಾತಿ ಪದ್ದತಿಯ ಹಾಗೆ ಅರಬ್ ದೇಶದಲ್ಲಿ ಜಾರಿಯಲ್ಲಿದ್ದ ಮೇಲು ಕೀಳು ಬುಡಕಟ್ಟುಗಳ ಭೇದವನ್ನು ಸಂಪೂರ್ಣವಾಗಿ ತೊಡೆದು ಹಾಕಿ ಎಲ್ಲಾ ಮಾನವರು ಒಂದೇ ತಂದೆ ತಾಯಿಯ ಮಕ್ಕಳು ಎಂಬ ಸಂದೇಶ ನೀಡಿ ಸಮಾನತೆ ಬೋಧಿಸಿ ನಮಾಝ್ ಮತ್ತು ಒಂದೇ ತಟ್ಟೆಯಲ್ಲಿ ಊಟ ಮಾಡುವ ಪದ್ದತಿ ಜಾರಿ ಮಾಡಿದ ಸಮಾನತೆಯ ಹರಿಕಾರ ಪ್ರವಾದಿ ಮುಹಮ್ಮದ್(ಸ) ಎಂದು ಬೀದರ್ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ. ಪರಮೇಶ್ವರ ನಾಯಕ ನುಡಿದರು.

ಅವರು ಬೀದರ್ ನಗರದ ರಂಗ ಮಂದಿರದಲ್ಲಿ ಪ್ರವಾದಿ ಮುಹಮ್ಮದ್ (ಸ) ಮಹಾನ್ ಜಾರಿತ್ರ್ಯವಂತ ಎನ್ನುವ ವಿಷಯದ ಮೇಲೆ ಏರ್ಪಡಿಸಿದ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ, ಆಸ್ತಿಯಲ್ಲಿ ಪಾಲು ನೀಡಿ 6ನೇ ಶತಮಾನಯದಲ್ಲಿಯೇ ಮಹಿಳಾ ಹಕ್ಕುಗಳನ್ನು ನೀಡಿ ಗೌರವ ನೀಡಿದರು.

ಪ್ರವಾದಿಯವರ ಮೊದಲನೇ ಮದುವೆ 40 ವರ್ಷದ 3 ಮಕ್ಕಳಿದ್ದ ವಿಧವೆ ಹ. ಖತೀಜಾ ಜತೆ ಆಯಿತು. ಅವರು ತೀರಿಕೊಂಡ ನಂತರ 53ನೇ ವಯಸ್ಸಿನಲ್ಲಿ ಬೇರೆ ಮದುವೆ ಮಾಡಿಕೊಂಡರು. ಅವರಲ್ಲಿ ಎಲ್ಲರೂ ವಯಸ್ಸಾದ ವಿಧವೆಯರು, ಒಬ್ಬಳು ಮಾತ್ರ ಕನ್ಯೆಯಾಗಿದ್ದು, ಹೆಚ್ಚು ಮದುವೆಯಾದದ್ದು, ಧರ್ಮ ಸಂದೇಶ ತಲುಪಿಸುವ ಉದ್ದೇಶದಿಂದಾಗಿತ್ತು ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡುತ್ತ ಪ್ರವಾದಿ ಪ್ರೀತಿಯ ಸಂದೇಶ ಸಾರಿ ಜನರ ಮಧ್ಯೆ ಪ್ರೀತಿಯ ಸೇತುವೆ ಕಟ್ಟಿದರು. ಕ್ಷಮಾದಾನ, ಸಹನೆ, ವಿನಮೃತೆ ಪ್ರವಾದಿಯವರ ಪ್ರಮುಖ ಗುಣಗಳು ಎಂದು ಅವರ ಜೀವನದ ಘಟನೆಗಳೊಂದಿಗೆ ತಿಳಿಸಿದರು. ಎಲ್ಲಾ ಪ್ರವಾದಿಗಳು ಹಾಗೂ ಮಹಾ ಪುರುಷರಂತೆ ಪ್ರವಾದಿಯವರು ವೈರಿಯನ್ನು ಪ್ರೀತಿಸಿ ಎಂಬ ಸಂದೇಶ ನೀಡಿದ್ದಾರೆ. ಇದು ನಮ್ಮ ಇಂದಿನ ಅವಶ್ಯಕತೆ ಎಂದು ಹೇಳಿ ಜನರಿಗೆ ಪಾಲಿಸಲು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಹಜ್ ಸಚಿವ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರು ” ಪ್ರವಾದಿ ಮುಹಮ್ಮದ್(ಸ) ಲೇಖನ ಸಂಕಲನ “ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತ ಪ್ರವಾದಿ ನುಡಿದಂತೆ ನಾವೆಲ್ಲಾ ನಡೆಯಬೇಕು ಎಂದು ಸಲಹೆ ನೀಡಿದರು. ಸ್ವರ್ಗ ಒಳ್ಳೆಯ ಸಂಕಲ್ಪದೊಂದಿಗೆ ಮಾಡಿದ್ದ ಉತ್ತಮ ಕರ್ಮಗಳಿಂದ ಸಿಗುತ್ತದೆ ಎಂದು ಹೇಳಿ ಸತ್ಕರ್ಮಗಳನ್ನು ಮಾಡಲು ಜನರಿಗೆ ಪ್ರೇರೆಪಿಸಿದರು. ಇದೇ ಸಂದರ್ಭದಲ್ಲಿ ಸಾಲಿಡಾರಿಟಿ ಯುಥ್ ಮುಮೆಂಟ್ ನ ಪೋಸ್ಟರ ಬಿಡುಗಡೆ ಮಾಡಿದರು.

ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜನಾಬ್ ಅಕ್ಬರ್ ಅಲಿ ಅದ್ಯಕ್ಷತೆ ವಹಿಸಿ ಮಾತನಾಡುತ್ತ ಪ್ರವಾದಿ ಅವರು ನಮ್ಮೆಲ್ಲರ ದೇವರ ಸ್ಪಷ್ಟವಾದ ಪರಿಚಯ ಮಾಡಿಸಿದ್ದಾರೆ. ಅವನೊಬ್ಬನೆ ನಮ್ಮ ಸೃಷ್ಠಿಕರ್ತ ಹಾಗೂ ಪ್ರಭು ಆಗಿದ್ದಾನೆ ಎಂದು ಏಕ ದೇವ ಸಂದೇಶ ನೀಡಿದರು. ಪ್ರವಾದಿ ಅವರು ಜನರ ಜತೆ ನಮ್ಮ ವರ್ತನೆ ಹೇಗಿರಬೇಕು ಎಂದು ತಿಳಿಸಿದ್ದಾರೆ. ಜನರ ಜತೆ, ಪತ್ನಿ, ಮಕ್ಕಳ ಜತೆ, ಮಹಿಳೆಯರ ಜತೆ, ನೆರೆಹೊರೆಯರ ಜತೆ, ಸಂಬಂಧಿಕರ ಜತೆ ಉತ್ತಮ ವರ್ತನೆ ಮತ್ತು ಸಂಬಂಧ ಇರಬೇಕೆಂದು ಹೇಳಿದರು.

ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೆ ಡ್ರಗ್ಸ್ ಸಿನೆಮಾ, ಧಾರವಾಹಿ, ಫ್ಯಾಷನ್ ಶೋ, ಸರಾಯಿಖಾನೆ ನಡೆಸುವ ಮಾಫಿಯಾ ಕಾರಣವಾಗಿದೆ ಇಂತಹ ಮಾಫಿಯಾಗಳನ್ನು ನಿಯಂತ್ರಿಸಿದಾಗ ಮಾತ್ರ ಇಂತಹ ಅಪರಾಧಗಳನ್ನು ಕಡಿಮೆಗೊಳಿಸಲು ಸಾಧ್ಯ ಎಂದರು.

ಮೌಲ್ವಿ ಮುಹಮ್ಮದ್ ಫಹೀಮುದ್ದಿನ್, ಗೀತಾ ಪಂಡಿತರಾದ ಚಿದ್ರಿ ಮಾತನಾಡಿದರು. ಮುಹಮ್ಮದ್ ಮೌಝಮ್ ಪ್ರಾಸ್ತಾವಿಕ ಬಾಷಣ ಮಾಡಿದರು. ವಿಚಾರಗೋಷ್ಠಿಯು ಸೈಯದ್ ಅತೀಕುಲ್ಲಾ ಅವರ ಪವಿತ್ರ ಕುರ್ ಆನ್ ಪಠಣದಿಂದ ಪ್ರಾರಂಭವಾಯಿತು. ಇದರ ಕನ್ನಡ ಅನುವಾದ ಸೈಯದ್ ಫುರ್ಖಾನ್ ಪಾಷಾ ಮಾಡಿದರು. ಮುಹಮ್ಮದ್ ನಿಝಾಮುದ್ದೀನ್ ಅತಿಥಿಗಳ ಸ್ವಾಗತ ಹಾಗೂ ನಿರೂಪಣೆ ಮಾಡಿದರು.

ವೇದಿಕೆ ಮೇಲೆ ಡಿಡಿಪಿಐ ಸಲಿಂ ಪಾಷಾ, ಡಾ. ಉಸಾಮೋದ್ದಿನ್ ಉಜೇರ್, ನಗರ ಸಬೆ ಅಧ್ಯಕ್ಷ ಮುಹಮ್ಮದ್ ಗೌಸ್, ಡಾ. ಕುಮಾರ್ ದೇಶಮುಖ, ಕಸಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಗುರುನಾಥ ಗಡ್ಡೆ, ಎಂ ಎಸ್ ಮನೋಹರ, ಓಂ ಪ್ರಕಾಶ ರೊಟ್ಟೆ, ಡಾ. ಸಂಜೀವ ಕುಮಾರ ಅತಿವಾಳೆ, ವೀರಭದ್ರಪ್ಪ ಉಪ್ಪನ್ ಉಪಸ್ಥಿತರಿದ್ದರು.