ಪರೀಕ್ಷೆಯ ಪ್ರತಿಫಲ

0
89

ಸನ್ಮಾರ್ಗ ವಾರ್ತೆ

ಸಂಗ್ರಹ: ಎನ್.ಎಂ. ಪಡೀಲ್

ಜಾಬಿರ್(ರ)ರಿಂದ ವರದಿಯಾಗಿದೆ: ಅಲ್ಲಾಹನ ಸಂದೇಶವಾಹಕರು ಹೇಳಿದರು, ಕಷ್ಟಗಳನ್ನು ಎದುರಿಸಿ ಬದುಕಿದವರಿಗೆ ಪರಲೋಕದಲ್ಲಿ ಸಿಗುವ ಪ್ರತಿಫಲವನ್ನು ಕಾಣುವಾಗ, ಸುಖ ಸೌಕರ್ಯಗಳೊಂದಿಗೆ ಬಾಳಿದವರು, “ಇಹಲೋಕದಲ್ಲಿ ತಮ್ಮ ಚರ್ಮವನ್ನು ಕತ್ತರಿಯಿಂದ ತುಂಡರಿಸುತ್ತಿದ್ದರೆ ಎಷ್ಟು ಚೆನ್ನಾಗಿತ್ತೆಂದು ಭಾವಿಸುತ್ತಾರೆ.” (ತಿರ್ಮಿದಿ)

ಇಹಲೋಕದಲ್ಲಿ ಧಾರಾಳ ಸಂಕಷ್ಟ, ವಿಪತ್ತುಗಳಿಗೆ ತುತ್ತಾಗಿದ್ದರೂ ಅದಕ್ಕಾಗಿ ಕ್ಷಮೆ, ಸಹನೆಯನ್ನು ಅವಲಂಬಿಸಿದವರಿಗೆ ಪರಲೋಕದಲ್ಲಿ ಸಿಗುವ ಪ್ರತಿಫಲದ ಮಹತ್ವವನ್ನು ಈ ಪ್ರವಾದಿ ವಚನದಲ್ಲಿ ತಿಳಿಸಲಾಗಿದೆ.

ಈ ಪ್ರಪಂಚದಲ್ಲಿ ಸಂತೋಷದಿಂದ ಜೀವಿಸಿದವರು ಮರ್ದಿತರಿಗೆ ಪರಲೋಕದಲ್ಲಿ ಸಿಗುವ ಪ್ರತಿಫಲವನ್ನು ಕಾಣುವಾಗ ತಮಗೂ ಜಗತ್ತಿನಲ್ಲಿ ತುಂಬಾ ಸಂಕಷ್ಟಗಳು ಸಿಗುತ್ತಿದ್ದರೆ ಎಂದು ಭಾವಿಸುವರು.

ಸಮಸ್ಯೆಗಳು ಈಮಾನಿನ ಭಾಗವೆಂದು ಪ್ರವಾದಿ(ಸ) ತಿಳಿಸಿರುವರು. ಅದು ಸತ್ಯವಿಶ್ವಾಸಿಗಳ ತಪ್ಪುಗಳನ್ನು ನೀಗಿಸುವುದು. “ಸತ್ಯವಿಶ್ವಾಸಿ ಮತ್ತು ಸತ್ಯವಿಶ್ವಾಸಿನಿಯರಿಗೆ ಅವರಿಂದ ಮತ್ತು ಅವರ ಮಕ್ಕಳಿಂದಲೂ ಸಂಪತ್ತಿನ ಮೂಲಕವೂ ಸಮಸ್ಯೆಗಳು ಉಂಟಾಗುತ್ತಲೇ ಇರುವುದು. ಒಂದೇ ಒಂದು ಪಾಪವೂ ಇಲ್ಲದೇ ಅಲ್ಲಾಹನನ್ನು ಸಮೀಪಿಸುವವರೆಗೆ.” (ತಿರ್ಮಿದಿ)

ವಿಶ್ವಾಸಿಗಳು ಭೌತಿಕ ಜಗತ್ತಿನ ಸುಖಾಡಂಬರಗಳ ಬದಲು ಪರಲೋಕದ ಶಾಶ್ವತ ಜೀವನದ ನೆಮ್ಮದಿಗಾಗಿ ಆಶಿಸುತ್ತಾರೆ.
ಜನರನ್ನು ಉದ್ದೇಶಿಸಿ ಖಲೀಫ ಉಸ್ಮಾನ್(ರ) ಹೇಳಿದರು, “ಪರಲೋಕ ಜೀವನಕ್ಕೆ ಬೇಕಾದ ಪುಣ್ಯವನ್ನು ಗಳಿಸಲು ಅಲ್ಲಾಹನು ನಿಮಗೆ ಈ ಲೋಕವನ್ನು ನೀಡಿರುವನು. ಅದರಲ್ಲಿ ಸಿಲುಕಿ ಜೀವನವನ್ನು ವ್ಯರ್ಥಗೊಳಿಸಬಾರದು. ಪ್ರಪಂಚವು ನಾಶ ಹೊಂದುವುದು. ಪರಲೋಕ ಜೀವನ ಮಾತ್ರ ಶಾಶ್ವತವಾಗಿರುವುದು. ನಾಶ ಹೊಂದುವುದರ ಬಗ್ಗೆ ಆಸಕ್ತಿ ವಹಿಸಬೇಕಾಗಿಲ್ಲ. ಅದೇ ರೀತಿ ಎಂದೆಂದಿಗೂ ಅಮರವಾಗಿರುವುದರ ಬಗ್ಗೆ ಅಶ್ರದ್ಧೆ ವಹಿಸದಿರಿ.”
(ಅಲ್ ಬಿದಾಯ ವನ್ನಿಹಾಯ)

ಕಳೆದು ಹೋದುದರ ಬಗ್ಗೆ ಚಿಂತಿಸುವುದರಲ್ಲಿ ಯಾವುದೇ ಒಳಿತು ಇಲ್ಲವೆಂದು ಪ್ರವಾದಿ(ಸ) ಎಚ್ಚರಿಸುತ್ತಿದ್ದರು. ದುಃಖ ಹಾಗೂ ಸಂಕಷ್ಟಗಳಿಂದ ಅಲ್ಲಾಹನೊಂದಿಗೆ ಯಾವಾಗಲೂ ರಕ್ಷೆಯನ್ನು ಬೇಡಬೇಕು.

ಪ್ರವಾದಿ(ಸ) ಈ ರೀತಿ ಪ್ರಾರ್ಥಿಸುತ್ತಿದ್ದರು, “ಓ ಅಲ್ಲಾಹ್! ನಾನು ದುಃಖ ದುಮ್ಮಾನದಿಂದ, ಅಸಹಾಯಕತೆ ಮತ್ತು ಮೈಗಳ್ಳತನದಿಂದ, ಲೋಭ ಮತ್ತು ಹೇಡಿತನದಿಂದ, ಸಾಲದ ಹೊರೆ ಮತ್ತು ಜನರ ದೌರ್ಜನ್ಯದಿಂದ ನಿನ್ನ ಅಭಯ ಕೋರುತ್ತೇನೆ.” (ಬುಖಾರಿ)

ಈ ಹದೀಸನ್ನು ವಿವರಿಸುತ್ತಾ ಇಮಾಮ್ ಇಬ್ನ್ ಖಯ್ಯಿಂ(ರ) ಬರೆಯುತ್ತಾರೆ, “ಪ್ರವಾದಿ(ಸ) ದುಃಖ ಉಂಟಾಗುವ ಕಾರ್ಯಗಳನ್ನು ಎಣಿಸಿ ತಿಳಿಸಿದ್ದಾರೆ. ಏಕೆಂದರೆ, ದುಃಖವು ಹೃದಯವನ್ನು ದುರ್ಬಲಗೊಳಿಸುವುದು. ಮನೋಸ್ಥೈರ್ಯ ಕುಗ್ಗಿಸುವುದು, ಸ್ವತೀರ್ಮಾನದ ಶಕ್ತಿಯನ್ನು ಕುಂದಿಸುವುದು. ವಿಶ್ವಾಸಿಯು ದುಃಖಪಡುವುದಕ್ಕಿಂತ ಶೈತಾನನಿಗೆ ಸಂತೋಷದ ವಿಷಯ ಬೇರೆ ಇಲ್ಲ. ಅಲ್ಲಾಹನು ಹೇಳಿದನು, ಗೂಢಾಲೋಚನೆಯು ಸಂಪೂರ್ಣ ಪೈಶಾಚಿಕವಾಗಿದೆ. ಅದು ವಿಶ್ವಾಸಿಯನ್ನು ದುಃಖಿತರನ್ನಾಗಿಸಲಿಕ್ಕಾಗಿದೆ.” (58:10) (ತ್ವರೀಖುಲ್ ಹಿಜಿರತೈನ್)

ಆದ್ದರಿಂದ ಜೀವನದಲ್ಲಿ ಸಂಭವಿಸುವ ಎಲ್ಲ ಸಂಕಷ್ಟ ಹಾಗೂ ದುಃಖದ ಸಂದರ್ಭದಲ್ಲಿ ವಿಶ್ವಾಸಿಯು ಸಹನೆಯನ್ನು ವಹಿಸಬೇಕು. ಆ ಮೂಲಕ ಅವರ ಪರಲೋಕದ ಉನ್ನತಿ ಸಾಧ್ಯವಾಗುವುದು.

ಇನ್ನೊಂದು ಪ್ರವಾದಿ ವಚನ ಹೀಗಿದೆ, ಅಲ್ಲಾಹನು ಓರ್ವ ದಾಸನಿಗೆ ಅವನ ಕರ್ಮದಿಂದ ಗಳಿಸಲಾಗದ ಪದವಿಯನ್ನು ನೀಡಬಯಸಿದರೆ ಅವನಲ್ಲೂ ಅವನ ಸಂತಾನ ಹಾಗೂ ಸೊತ್ತಿನಲ್ಲಿ ಪರೀಕ್ಷೆಗಳನ್ನು ನೀಡುತ್ತಾನೆ. ಅವನು ಆಗ ಸಹನೆಯನ್ನು ಅವಲಂಬಿಸಿದರೆ ಅಲ್ಲಾಹನು ಇಚ್ಛಿಸಿದ ಪದವಿಗೆ ಅವನನ್ನು ತಲುಪಿಸುತ್ತಾನೆ.