ದಾದಿ ಮುಸ್ಲಿಂ ಧರ್ಮಗುರುವಿನ ಕಾಲು ತೊಳೆದರೆ? ಚಿತ್ರದ ಅಸಲಿಯತ್ತು ಏನು? ದಾದಿ ಏನು ಹೇಳುತ್ತಾರೆ?

0
1922

ಸನ್ಮಾರ್ಗ ವಾರ್ತೆ

ಕರ್ನೂಲ್ ಏಪ್ರಿಲ್ 26- ಸುಳ್ಳು ಸುದ್ದಿಗಳು ಲಾಕ್ ಡೌನ್ ಕಾಲದಲ್ಲೂ ಕಡಿಮೆಯಾಗಿಲ್ಲ. ಸಮಾಜದ ನಡುವೆ ದ್ವೇಷವನ್ನು ಬಿತ್ತುವುದಕ್ಕೆ ಈ ಕಷ್ಟ ಕಾಲವೂ ಸುಳ್ಳು ಸುದ್ದಿ ಉತ್ಪಾದಕರಿಗೆ ತಡೆಯಾಗಿಲ್ಲ. ಇಂಥದೊಂದು ಸುಳ್ಳು ಸುದ್ದಿ ಆಂಧ್ರಪ್ರದೇಶದ ಕರ್ನೂಲ್ ನಿಂದ ವರದಿಯಾಗಿದೆ.

ಕರ್ನೂಲ್ ನ ಶಾಸಕ ಹಫೀಸ್ ಖಾನ್ ಅವರು ಓರ್ವ ಮುಸ್ಲಿಂ ಧರ್ಮಗುರುವಿನ ಕಾಲುಗಳನ್ನು ತೊಳೆಯುವಂತೆ ದಾದಿಗೆ ಆದೇಶಿಸಿದ್ದಾರೆ ಅನ್ನುವ ಸುದ್ದಿಯೊಂದು ಚಿತ್ರಸಮೇತ ಇತ್ತೀಚಿಗೆ ವರದಿಯಾಗಿತ್ತು. ಟ್ವಿಟರ್ ಫೇಸ್ಬುಕ್ ವಾಟ್ಸ್ಅಪ್ ಗಳಲ್ಲಿ ಸಾವಿರಾರು ಮಂದಿ ಈ ಫೋಟೋ ಮತ್ತು ಅದರ ಜೊತೆಗಿರುವ ಒಕ್ಕಣೆಯನ್ನು ಶೇರ್ ಮಾಡಿದ್ದರು.

ಆದರೆ ಆಲ್ಟ್ ನ್ಯೂಸ್ ಡಾಟ್ ಕಾಮ್ ಎಂಬ ವೆಬ್ ಪತ್ರಿಕೆಯು ಈ ಸುದ್ದಿಯ ಸತ್ಯಾಸತ್ಯತೆಯನ್ನು ಇದೀಗ ಬಹಿರಂಗಪಡಿಸಿದೆ.

ರಾಯಲ್ ಸೀಮಾ ವಿಶ್ವವಿದ್ಯಾಲಯದಲ್ಲಿ ಕ್ವಾರಂಟೈನ್ ನಲ್ಲಿ ಶಂಕಿತರನ್ನು ಇರಿಸಲಾಗಿದ್ದು, ಇಲ್ಲಿ ಮಾರ್ಚ್ 23ರಂದು ಈ ಘಟನೆ ನಡೆದಿದೆ. ಇಲ್ಲಿ ಇರಿಸಲಾದ ವಯೋವೃದ್ಧ ಮಧುಮೇಹಿ ರೋಗಿಯ ಕಾಲು ಗೇಟಿಗೆ ತಾಗಿ ರಕ್ತ ಸೋರಿಕೆಯಾಗಿದೆ. ಕೂಡಲೇ ದಾದಿಯೋರ್ವರು ಬಂದ ಅವರ ಕಾಲಿನ ರಕ್ತವನ್ನು ಒರೆಸಿ ಪ್ರಥಮ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಹಫೀಸ್ ಖಾನ್ ಅವರು ಸ್ಥಳದಲ್ಲಿದ್ದರು.

ಈ ನಡುವೆ ಯಾರೋ ಇದನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಅದಕ್ಕೆ ಧರ್ಮದ ವೈರಸನ್ನು ಲೇಪಿಸಿ ಮುಸ್ಲಿ ಧಾರ್ಮ ಗುರುವಿನ ಕಾಲು ತೊಳೆಸುವ ದೃಶ್ಯ ಎಂದು ಸುಳ್ಳು ಪ್ರಚಾರವನ್ನು ನಡೆಸಿದ್ದಾರೆ. ಈ ಕಾರಣದಿಂದಾಗಿ ಎಪ್ರಿಲ್ 5ರಂದು ಕರ್ನೂಲ್ ಪೊಲೀಸ್ ಠಾಣೆಯಲ್ಲಿ ತಾನು ಕೇಸು ದಾಖಲಿಸಿರುವುದಾಗಿ ಶಾಸಕ ಹೇಳಿದ್ದಾರೆ.

ರಕ್ತ ಹರಿಯುವುದನ್ನು ತಡೆಯುವುದಕ್ಕೆ ದಾದಿ ಅವರ ಕರ್ತವ್ಯವನ್ನು ನಿಭಾಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಯದಗಿರಿ ಪ್ರಾಥಮಿಕ ಆರೋಗ್ಯ ಶಾಲೆಯ ಎನ್ ಸರಸ್ವತಿ ಚಿಕಿತ್ಸೆ ನೀಡಿದ ದಾದಿಯಾಗಿದ್ದಾರೆ. ತಾನು ತನ್ನ ಕರ್ತವ್ಯ ನಿರ್ವಹಿಸುವುದಾಗಿ ಅವರು ಹೇಳಿದ್ದಾರೆ. ಗಾಯಗೊಂಡ ಕಾಲಿಗೆ ತಾನು ಔಷಧಿ ಲೇಪಿಸಿದೆ. ಈ ಕುರಿತಂತೆ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಬೇಡಿ ಎಂದು ಸರಸ್ವತಿ ವಿನಂತಿಸಿದ್ದಾರೆ. ಈ ಕುರಿತಂತೆ ಅವರು ಒಂದು ವಿಡಿಯೋವನ್ನು ಕೂಡ ಮಾಡಿ ಸಾರ್ವಜನಿಕರೊಂದಿಗೆ ಮನವಿ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಶಾಸಕ ಹಫೀಸ್ ಅವರು ತನ್ನ ಫೇಸ್ ಬುಕ್ ಖಾತೆಯಲ್ಲಿ ಏಪ್ರಿಲ್ 23ರಂದು ಹಂಚಿಕೊಂಡಿದ್ದಾರೆ.

blob:https://www.facebook.com/23e2dc05-1875-4aec-8e98-0962a7867dc1

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.