ಫರ್ಹಾನಾಜ್ ಮಸ್ಕಿ ರವರ ಕವಿತೆ ಬಳ್ಳಾರಿ ವಿವಿಯ ಪಠ್ಯಕ್ಕೆ ಆಯ್ಕೆ

0
1207

ಸನ್ಮಾರ್ಗ ವಾರ್ತೆ

ಯುವ ಬರಹಗಾರ್ತಿಯಾದ ಫರ್ಹಾನಾಜ್ ಮಸ್ಕಿರವರ “ಅಪ್ಪ” ಕವಿತೆಯು ಬಳ್ಳಾರಿ ವಿಶ್ವವಿದ್ಯಾಲಯದ ನಾಲ್ಕನೇ ಸೆಮಿಸ್ಟರ್ ಬಿ.ಎ., ಬಿ.ಎಸ್. ಡಬ್ಲ್ಯೂ, ತರಗತಿಗಳ ಕನ್ನಡ ಭಾಷಾ ಪಠ್ಯಕ್ಕೆ ಆಯ್ಕೆಯಾಗಿ ಪುಸ್ತಕದಲ್ಲಿ ಮುದ್ರಣಗೊಂಡಿದೆ. ಈ ಕವಿತೆಯು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆಯ್ಕೆ ಆದ ಫರ್ಹಾನಾಜ್‌ರವರ ಚೊಚ್ಚಲ ಕೃತಿ ‘ ಮೌನ ಮನದ ಮಾತುಗಳು’ ಎಂಬ ಕವನ ಸಂಕಲನದಿಂದ ಆಯ್ಕೆ ಮಾಡಲಾಗಿದೆ.

“ಅಪ್ಪ” ಕವಿತೆಯು ಲಿಂಗ ತಾರತಮ್ಯವಿಲ್ಲದ ಕೌಟುಂಬಿಕ ಸಂಬಂಧಗಳಲ್ಲಿ ಅಪ್ಪ ಸಹ ಅಮ್ಮನಾಗಿ, ಗುರುವಾಗಿ, ಗೆಳೆಯನಾಗಿ ಹಲವು ಪಾತ್ರ ನಿರ್ವಹಿಸುವ ಮೂಲಕ ಮಗಳನ್ನೂ ಮಗನಾಗಿ ಬೆಳೆಸುತ್ತಾರೆ ಎಂಬುದನ್ನು ಹಾಗೂ ಗಂಡಿನ ಗಡಸುತನವಿಲ್ಲದೇ ಜವಾಬ್ದಾರಿಯುತವಾಗಿ ಅಪ್ಪ ನಿರ್ವಹಿಸುವ ಕರ್ತವ್ಯಗಳ ಮೇಲೆ ಈ ಕವಿತೆ ಬೆಳಕು ಚೆಲ್ಲುತ್ತದೆ. ‌

ಖ್ವಾಜಾ ಗೇಸುದರಾಜ್ ಹುಸೇನ್( ಕಿರನ್ ಬ್ಯಾಟರೀಜ಼್ ಮಸ್ಕಿ) ಹಾಗೂ ಸೈಯದ್ ಅನೀಸ್ ಫಾತಿಮಾರವರ ಮಗಳಾದ ಫರ್ಹಾನಾಜ್ ಮಸ್ಕಿ ರವರು ಗುಲ್ಬರ್ಗಾದಲ್ಲಿ ಹುಟ್ಟಿ ಆರಂಭಿಕ‌ ಶಿಕ್ಷಣವನ್ನು ಮಸ್ಕಿಯ‌ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಶಹಾಪುರದ ಸರ್ಕಾರಿ ಪ್ರೌಢ ಶಾಲೆ ಯಲ್ಲಿ ಪಡೆದು ನಂತರ ಪಿಯುಸಿ ಬೆಂಗಳೂರಿನ ಸ.ಪ.ಪೂ. ಕಾಲೇಜು ವರ್ತೂರು ಹಾಗೂ ಸ್ನಾತಕ ಪದವಿಯನ್ನು ಮಹಾರಾಣಿ ಕಾಲೇಜಿನಲ್ಲಿ, ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯನಲ್ಲಿ ಪಡೆದುಕೊಂಡು ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೆಲಮಂಗಲದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‌

ಇವರು ನೂತನ ಶಿಕ್ಷಣ ನೀತಿಯನುಸಾರ ಪದವಿ ತರಗತಿಗಳಿಗಾಗಿ ಗಣಿತಾತ್ಮಕ ಅರ್ಥಶಾಸ್ತ್ರ ಎಂಬ ಪಠ್ಯ ಪುಸ್ತಕವನ್ನೂ ಬರೆದಿದ್ದಾರೆ. ನಿರಂತರ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಇವರು ಹಲವಾರು ಸಾಹಿತ್ಯ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿದ್ದಾರೆ.

ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಸಾಹಿತ್ಯ ಬರಹಗಳಲ್ಲಿ ಆಸಕ್ತಿ ಹೊಂದಿದ್ದು, ಪದವಿ ಓದುತ್ತಿರುವಾಗಲೇ ಆಲ್ ಇಂಡಿಯಾ ರೇಡಿಯೋ ಯುವ ವಿಭಾಗದಲ್ಲಿ ತಮ್ಮ ಕವನ ಲೇಖನಗಳನ್ನು ರೆಕಾರ್ಡ್ ಮಾಡಿಸುತ್ತಿದ್ದರು. ಜೊತೆಗೆ ಅಗ್ನಿ ಅಸ್ತ್ರ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿಯಾಗಿಯೂ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ. ಹಲವು ಸಾಹಿತ್ಯಿಕ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. ಆನ್ಲೈನ್ ಕಾರ್ಯಕ್ರಮಗಳಲ್ಲಿ ಚಿರಪರಿಚಿತರಾಗಿದ್ದಾರೆ. ಇವರು ನಿರಂತರ ಸಾಹಿತ್ಯಿಕ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಬೆಳಕು ಸಂಸ್ಥೆಯಿಂದ ರಾಜ್ಯ ಮಟ್ಟದ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕರುನಾಡು ಸೇವಾ ಟ್ರಸ್ಟ್ ಯಿಂದ ರಾಜ್ಯ ಮಟ್ಟದ ಕರುನಾಡು ವಿಭೂಷಣ ಪ್ರಶಸ್ತಿಗಳಲ್ಲದೇ ಎನ್ ಎಸ್ ಎಸ್ ಅಧಿಕಾರಿಯಾಗಿ ಸ್ಪಿಟ್ ಫ್ರೀ ಇಂಡಿಯಾ ಆಂದೋಲನವನ್ನು ಯಶಸ್ವಿಯಾಗಿ ನೆರವೇರಿಸಿ ಚಿನ್ನದ ಪದಕ ಹಾಗೂ ಲೀಡರ್‌ಷಿಪ್ ಸರ್ಟಿಫಿಕೇಟ್ ಅನ್ನು ಸಂಬಂಧ್ ಹೆಲ್ತ್ ಫೌಂಡೇಶನ್ ಇಂದ ಪಡೆದಿದ್ದಾರೆ.

2022 ರ ದರಸಾ ಯುವ ಕವಿಗೋಷ್ಠಿಯಲ್ಲೂ ಆಯ್ಕೆಯಾಗಿದ್ದಾರೆ. ಜೊತೆಗೆ ಖಿದ್ಮಾ ಫೌಂಡೇಶನ್ ಕೊಡಮಾಡುವ ಖಿದ್ಮಾ ಕಾವ್ಯ ಪ್ರಶಸ್ತಿಗೂ ಭಾಜನರಾಗಿದ್ದು, ಮೈಸೂರಿನ ನಾಟ್ಯ(ರೀ) ಸಂಸ್ಥೆಯ ಸ್ತ್ರೀ ರತ್ನ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಪಠ್ಯಗಳ ಜೊತೆಗೆ ಸಾಹಿತ್ಯ ಕೃತಿಗಳನ್ನೂ ಬರೆಯುತ್ತಿದ್ದು ಕರ್ನಾಟಕ ಸೂಫಿ ಸಂತರ ಸಂಶೋಧನಾ ಗ್ರಂಥವನ್ನೂ ಉರ್ದುವಿನಿಂದ ಕನ್ನಡಕ್ಕೆ ಅನುವಾದಿಸಿದ್ದು ಪ್ರಕಟಣೆಯ ಹಂತದಲ್ಲಿದೆ ಎಂದು ತಿಳಿಸಲಾಗಿದೆ.‌