ಯುದ್ಧಭೀತಿ: ವಿದೇಶಕ್ಕೆ ಭಾರಿ ಪ್ರಮಾಣದಲ್ಲಿ ವಲಸೆ ಹೋಗುತ್ತಿರುವ ಇಸ್ರೇಲಿಗರು

0
178

ಸನ್ಮಾರ್ಗ ವಾರ್ತೆ

ಇಸ್ರೇಲ್ ನಿಂದ ವಿದೇಶಿ ರಾಷ್ಟ್ರಗಳಿಗೆ ವಲಸೆ ಹೋಗುವವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಫೆಲೆಸ್ತೀನ್ ಮೇಲೆ ಇಸ್ರೇಲ್ ದಾಳಿ ನಡೆಸುವುದಕ್ಕಿಂತ ಮುಂಚೆ ಎಷ್ಟು ಪ್ರಮಾಣದಲ್ಲಿ ವಿದೇಶಕ್ಕೆ ವಲಸೆ ಹೋಗಲಾಗುತ್ತಿತ್ತೋ ಅದಕ್ಕಿಂತ ಮೂರು ಪಟ್ಟು ಹೆಚ್ಚು ವಲಸೆ 2024 ರಲ್ಲಿ ಆಗಿದೆ ಎಂದು ವರದಿಯಾಗಿದೆ.

ಕಳೆದ ಏಳು ತಿಂಗಳಲ್ಲಿ 40,000 ಕ್ಕಿಂತಲೂ ಅಧಿಕ ಇಸ್ರೇಲಿಯರು ಸುರಕ್ಷಿತ ಸ್ಥಳವನ್ನು ಹುಡುಕಿ ವಿದೇಶಕ್ಕೆ ಪ್ರಯಾಣಿಸಿದ್ದಾರೆ. ಪ್ರತಿ ತಿಂಗಳು2000 ಕ್ಕಿಂತಲೂ ಅಧಿಕ ಮಂದಿ ಇಸ್ರೇಲನ್ನು ಬಿಟ್ಟು ವಿದೇಶಕ್ಕೆ ವಲಸೆ ಹೋಗುತ್ತಿದ್ದಾರೆ ಎಂದು ಇಸ್ರೇಲ್ ನ ಪತ್ರಿಕೆ ಮಾರಿವು ವರದಿ ಮಾಡಿದೆ.

ಯುದ್ಧ ಸ್ಫೋಟವಾಗಲಿದೆ ಎಂದು ಅಂದುಕೊಂಡು 10 ಲಕ್ಷಕ್ಕಿಂತ ಅಧಿಕ ಇಸ್ರೇಲಿಗರು ಇತ್ತೀಚಿನ ದಿನಗಳಲ್ಲಿ ಪಾಸ್ಪೋರ್ಟ್ ಮಾಡಿಸಿಕೊಂಡಿದ್ದಾರೆ. ಅಲ್ಲದೆ ದೊಡ್ಡ ಮಟ್ಟದಲ್ಲಿ ಹಣವನ್ನು ವಿದೇಶದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. 2024ರ ಆರಂಭದ ಏಳು ತಿಂಗಳಲ್ಲಿ ಏಳು ಬಿಲಿಯನ್ ಡಾಲರ್ ಮೊತ್ತವನ್ನು ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ವೈದ್ಯರು ಫಾರ್ಮಾಸಿಸ್ಟ್ ಗಳು ಹೈಟೆಕ್ ತಂತ್ರಜ್ಞರು ಮುಂತಾದವರು ಇಸ್ರೇಲ್ ಬಿಟ್ಟು ವಿದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ಹಾಗೆಯೇ ಗಾಝಾದ ವಿರುದ್ಧ ದಾಳಿ ಆರಂಭವಾದ ಬಳಿಕ ವಿದೇಶದಿಂದ ಇಸ್ರೇಲ್ ಗೆ ಬರುವವರ ಸಂಖ್ಯೆಯಲ್ಲಿ ಭಾರಿ ಕುಸಿತ ಉಂಟಾಗಿದೆ..2023ಕ್ಕೆ ಹೋಲಿಸಿದರೆ 2024ರಲ್ಲಿ ವಿದೇಶದಿಂದ ಬರುವವರಲ್ಲಿ 42 ಶೇಕಡ ಸಂಖ್ಯೆ ಕಡಿಮೆಯಾಗಿದೆ. ಹೀಗೆ ಇಸ್ರೇಲ್ ಗೆ ಬಂದವರಲ್ಲಿ ಹೆಚ್ಚಿನವರು ರಷ್ಯಾದವರಾಗಿದ್ದಾರೆ ಎಂದು ವರದಿ ತಿಳಿಸಿದೆ.