ಮೊದಲು ಮಾನವೀಯತೆ, ನಂತರ ಧಾರ್ಮಿಕತೆ: ಪಂಜು ಗಂಗೂಲಿ

0
246

ಸನ್ಮಾರ್ಗ ವಾರ್ತೆ

ಮೊನ್ನೆ ಸೋಮವಾರ ಬೆಳಗ್ಗೆ 8.55 ಕ್ಕೆ ಕೊಲ್ಕೋತ್ತಾದತ್ತ ಪ್ರಯಾಣಿಸುತ್ತಿದ್ದ ಕಾಂಚನಜುಂಗ ಎಕ್ಸ್ ಪ್ರೆಸ್ ರೈಲಿಗೆ ಒಂದು ಗೂಡ್ಸ್ ಟ್ರೈನು ಹಿಂದಿನಿಂದ ಢಿಕ್ಕಿ ಹೊಡೆದು ಹತ್ತು ಜನ ಸತ್ತು, ನಲವತ್ತೊಂದು ಜನ ಗಾಯಗೊಂಡರು. ಗಾಯಗೊಂಡವರಲ್ಲಿ ಒಂಭತ್ತು ಜನ ಗಂಭೀರ ಸ್ಥಿತಿಯಲ್ಲಿದ್ದಾರೆ.

ಅಪಘಾತ ನಡೆದುದು ಚೋಟೋನಿರ್ಮಲ್ ಜೋತೋ ಎಂಬ ಗ್ರಾಮದ ಬಳಿ. ಚೋಟೋನಿರ್ಮಲ್ ಗ್ರಾಮದಲ್ಲಿ 88 ಕುಟುಂಬಗಳಿವೆ. ಅವುಗಳಲ್ಲಿ ಹೆಚ್ಚಿನವರು ಮುಸ್ಲಿಮರು. ಸೋಮವಾರ ಬಕ್ರೀದ್ ಹಬ್ಬ. ಗ್ರಾಮದ ಮಸೀದಿಯಲ್ಲಿ ಸೇರಿದ್ದ ಮುಸ್ಲಿಮರು ಆಗ‍ಷ್ಟೇ ಬೆಳಗ್ಗಿನ ಪ್ರಾರ್ಥನೆ ಮುಗಿಸಿ ಹಬ್ಬದ ಸಡಗರಕ್ಕೆ ತಯಾರಾಗುತ್ತಿದ್ದರು. ಅಪಘಾತದ ಸದ್ದು ಕೇಳುತ್ತಿದ್ದಂತೆ ಅವರು ಅದೆಲ್ಲವನ್ನು ಮರೆತು, ಮಸೀದಿಯಿಂದ ಹೊರಗೋಡಿ, ಗದ್ದೆಗಳನ್ನು ಹಾರಿ ರೈಲ್ವೇ ಹಳಿಗೆ ದೌಡಾಯಿಸಿದರು.

ಅವರಲ್ಲಿ ಇಪ್ಪತ್ತರ ಆಸುಪಾಸಿನ ಹನ್ನೆರಡು ಜನ ಯುವಕರು ತಮ್ಮ ತಮ್ಮಲ್ಲೆ ತಂಡಗಳನ್ನು ಮಾಡಿಕೊಂಡು, ಒಂದು ತಂಡ ರೈಲು ಡಬ್ಬಿಗಳ ಅಡಿಯಲ್ಲಿ ಸಿಕ್ಕಿಕೊಂಡವರನ್ನು ಪಾರು ಮಾಡಿತು. ಇನ್ನೊಂದು ತಂಡ ಕಿಟಕಿಗಳನ್ನು ಮುರಿದು ರೈಲಿನ ಒಳಗಡೆ ಗಾಯಗೊಂಡವರನ್ನು ಹೊರ ತಂದಿತು. ಮತ್ತೊಂದು ತಂಡ ಗಾಯಗೊಂಡವರನ್ನು ಅಂಬ್ಯುಲೆನ್ಸ್ ಹಾಗೂ ಇತರ ವಾಹನಗಳಲ್ಲಿ ಹಾಕಿ ಆಸ್ಪತ್ರೆಗೆ ಸಾಗಿಸಿತು. ಇನ್ನೊಂದು ತಂಡ ಗಾಯಗೊಂಡವರ ಬ್ಯಾಗೇಜ್ ಗಳನ್ನು ತಂದು ಸುರಕ್ಷಿತವಾಗಿ ಒಂದೆಡೆ ಸಾಲಾಗಿಟ್ಟು, ಅವುಗಳು ಕಳ್ಳರ ಪಾಲಾಗದಂತೆ ನೋಡಿಕೊಂಡಿತು. ರೈಲು ಅಪಘಾತಗಳಲ್ಲಿ ಬ್ಯಾಗೇಜ್ ಗಳ ಕಳವು ನಮ್ಮಲ್ಲಿ ಸಾಮಾನ್ಯ ಸಂಗತಿ. ಅರ್ಧ ಗಂಟೆಯ ನಂತರ ಪೊಲೀಸ್ ಮತ್ತು ರೈಲ್ವೇ ಅಧಿಕಾರಿಗಳು ಬಂದ ನಂತರ ಆ ಬ್ಯಾಗೇಜ್ ಗಳನ್ನು ಅವರ ವಶಕ್ಕೆ ಕೊಟ್ಟರು.

ಸೋಮವಾರ ಅವರಿಗೆ ಇತರರಂತೆ ಬಕ್ರೀದ್ ಆಚರಿಸಲಾಗಲಿಲ್ಲ. ಸೋಮವಾರದ ಬದಲಿಗೆ ಅವರು ಮಂಗಳವಾರ ಹಬ್ಬ ಆಚರಿಸಿದರು. ಮಂಗಳವಾರವೂ ಅವರು ಆಸ್ಪತ್ರೆಗೆ ಹೋಗಿ ಗಾಯಾಳುಗಳ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಮರೆಯಲಿಲ್ಲ.

ಪಂಜು ಗಂಗೂಲಿ