ಸನ್ಮಾರ್ಗ ವಾರ್ತೆ
ಅಮೆರಿಕ: ಈ ಸುದ್ದಿ ಅಮೆರಿಕದ್ದು. ನೂಹ ಎಂಬ ನಾಲ್ಕು ವರ್ಷದ ಬಾಲಕ ಇಲ್ಲೊಂದು ಎಡವಟ್ಟು ಮಾಡಿ 1 ಲಕ್ಷದ 91 ಸಾವಿರ ರೂಪಾಯಿಯ ಚಾಕ್ಲೇಟಿಗೆ ಅಮೆಝಾನ್ ನಲ್ಲಿ ಆರ್ಡರ್ ಮಾಡಿದ್ದಾನೆ. ಚಾಕಲೇಟೂ ಬಂದಿದೆ.
ಅಮೇರಿಕಾದಲ್ಲಿ ಸ್ಪಾಂಜ್ ಬಾಬ್ ಇದು ಮಕ್ಕಳ ಅತ್ಯಂತ ಇಷ್ಟದ ಕಾರ್ಟೂನ್ ಪಾತ್ರವಾಗಿದೆ. ನೋಹನಿಗೆ ಸ್ಪಾಂಜ್ ಬಾಬ್ ಅಂದರೆ ಬಹಳ ಇಷ್ಟ. ಈ ಇಷ್ಟದಿಂದ ಈ ಬಾಲಕ ಸ್ಪಾಂಜ್ ಬಾಬ್ ಚಾಕಲೇಟ್ ಗೆ ಆರ್ಡರ್ ಮಾಡಿದ್ದಾನೆ. ಹೀಗೆ 918 ಚಾಕಲೇಟುಗಳುಳ್ಳ 52 ಪೆಟ್ಟಿಗೆಗಳು ನೋಹನ ಕುಟುಂಬದವರ ಮನೆಗೆ ಬಂದಿದೆ.
ಆತನ ತಾಯಿ ಜನಿಫರ್ ಕಕ್ಕಾಬಿಕ್ಕಿಯಾಗಿದ್ದು, ನನ್ನ ಮಗ ಪ್ರಮಾದದಿಂದ ಆರ್ಡರ್ ಮಾಡಿದ್ದಾನೆ ಎಂದು ಅಮೆಝಾನ್ ಗೆ ಹೇಳಿದರೂ ಅವರು ಸರಕನ್ನು ಹಿಂಪಡೆಯಲು ಒಪ್ಪಲಿಲ್ಲ.
ನ್ಯೂಯೋರ್ಕ್ ಯೂನಿವರ್ಸಿಟಿಯ ಸಿಲ್ವರ್ ಸ್ಕೂಲ್ ಸೋಶಿಯಲ್ ವರ್ಕ್ ವಿದ್ಯಾರ್ಥಿ ಮತ್ತು ಮೂರು ಮಕ್ಕಳ ತಾಯಿಯಾಗಿರುವ ಜನಿಫರ್ ಗೆ ಇಷ್ಟು ದೊಡ್ಡ ಮೊತ್ತವನ್ನು ಹೇಗೆ ಪಾವತಿಸುವುದು ಎಂದು ಚಿಂತೆಯಾಯಿತು. ಇದರಿಂದಾಗಿ ಅವರು ಈ ವಿಶ್ವವಿದ್ಯಾಲಯದ ಸೋಶಿಯಲ್ ವರ್ಕ್ ಪದವೀಧರ ವಿದ್ಯಾರ್ಥಿಗಳಿಗಾಗಿ ಇರುವ ಫೇಸ್ಬುಕ್ ಪೇಜಿನಲ್ಲಿ ವಿಷಯವನ್ನು ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಹಣದ ನೆರವು ಹರಿದುಬಂದಿದೆ. 24 ಗಂಟೆಯಲ್ಲಿ ಒಟ್ಟು 600 ಮಂದಿ ಈ ಹಣವನ್ನು ಭರಿಸಿದ್ದಾರೆ.












