ಸನ್ಮಾರ್ಗ ವಾರ್ತೆ
ಕೋಲ್ಕತ್ತಾ: ಡಾ. ಸಿ.ಕೆ. ಸರ್ಕಾರ್ ಎಂಬವರ ವೈದ್ಯಕೀಯ ಕ್ಲಿನಿಕ್ನಲ್ಲಿ ಗರ್ಭಿಣಿ ಮುಸ್ಲಿಂ ಮಹಿಳೆಗೆ ಚಿಕಿತ್ಸೆ ನಿರಾಕರಿಸಿ ಅವಮಾನಿಸಿರುವ ಪ್ರಕರಣವು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳೆ ದಿನನಿತ್ಯದ ತಪಾಸಣೆಗೆ ಕ್ಲಿನಿಕ್ಗೆ ಹೋಗಿದ್ದು, ವೈದ್ಯರು ಆಕೆಯ ಪೂರ್ಣ ಹೆಸರು ತಿಳಿದ ಮೇಲೆ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ “ಮದರಸಾಗಳಿಗೆ ಹೋಗಿ ಚಿಕಿತ್ಸೆ ಪಡೆಯಿರಿ” ಎಂದು ಹೇಳಿರುವುದಾಗಿ ಕುಟುಂಬದವರು ಆರೋಪಿಸಿದ್ದಾರೆ.
“ನಿಮ್ಮ ಗಂಡನನ್ನು ಹಿಂದೂಗಳು ಕೊಲ್ಲಬೇಕು” ಎಂದು ದ್ವೇಷ ಭರಿತ ಮಾತುಗಳನ್ನು ಕೂಡ ಹೇಳಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಈ ಅವಮಾನವನ್ನು ಅನುಭವಿಸಿದ ಮಹಿಳೆ ತಕ್ಷಣವೇ ಕ್ಲಿನಿಕ್ನಿಂದ ಹೊರಬಂದು ಮನೆಗೆ ಹಿಂತಿರುಗಿದ್ದು, ಬಳಿಕ ಧೈರ್ಯದಿಂದ ದೂರವಾಣಿ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿದಾಗ ಅವರು ತಮ್ಮ ಹೇಳಿಕೆಯನ್ನು ಪುನರಾವರ್ತಿಸಿ ಕರೆ ಕಡಿದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆ ಹಾಗೂ ಆರೋಗ್ಯ ಇಲಾಖೆಗೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬವು ಆರೋಪಿಸಿದೆ. ಅಲ್ಲದೆ, ವೈದ್ಯರು ಈ ಕುರಿತು ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಗರ್ಭಿಣಿ ಮಹಿಳೆ ತೀವ್ರ ಆಘಾತಕ್ಕೊಳಗಾಗಿದ್ದು, ನ್ಯಾಯಕ್ಕಾಗಿ ಶಾಂತಿಯುತವಾಗಿ ಹೋರಾಡುತ್ತೇವೆ ಎಂದು ಕುಟುಂಬವು ಹೇಳಿದೆ. “ಇದು ಕೇವಲ ವೈದ್ಯಕೀಯ ನಿರ್ಲಕ್ಷ್ಯವಲ್ಲ, ಇದು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದಿಂದ ಕೂಡಿದ ಹೇಳಿಕೆಯಾಗಿದೆ” ಎಂದು ಸಂಬಂಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












