ಎನ್‍ ಪಿ ಆರ್ ಗೂ ಎನ್ ಆರ್ ಸಿಗೂ ನಡುವೆ ಸಂಬಂದ ಇಲ್ಲ ಎಂದ ಸರಕಾರ; ಸಂಬಂಧ ಇದೆ ಎಂದು ತೋರಿಸುತ್ತಿರುವ ದಾಖಲೆಗಳು

0
1061

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 25: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿ ಆರ್) ಮತ್ತು ಎನ್ ಆರ್ ಸಿಗೂ ನಡುವೆ ಸಂಬಂಧ ಇಲ್ಲ ಎಂದು ಸರಕಾರ ಹೇಳುತ್ತಿದೆ. ಅಂತಹ ದಾಖಲೆಗಳನ್ನು ಕೊಡಬೇಕಿಲ್ಲ ಎಂದು ಎನ್ನುತ್ತಿದೆ. ಆದರೆ ಜನರು ಸರಕಾರವನ್ನು ನಂಬುತ್ತಿಲ್ಲ. ಸರಕಾರದ ಉದ್ದೇಶ ಶುದ್ಧಿಯೇ ಈಗ ಪ್ರಶ್ನಿಸಲ್ಪಡುತ್ತಿದೆ.

ಎನ್‍ ಪಿ ಆರ್ ವಿವರ ಸಂಗ್ರಹಿಸಲು ಬರುವವರಿಗೆ ಪುರಾವೆ ಕೊಡಬೇಕಾಗಿಲ್ಲ ಎಂದು ಸರಕಾರ ಹೇಳುತ್ತಿದೆ. ಆದರೆ, ಹಾಗೆ ನೀಡುವ ವಿವರಗಳ ಆಧಾರದಲ್ಲಿ ವ್ಯಕ್ತಿಯ ಹಿನ್ನಲೆಯನ್ನು ಸಂಶಯಾಸ್ಪದವೇ ಎಂದು ಫಾರಂನಲ್ಲಿ ಬರೆಯುವ ಹೊಣೆಯನ್ನು ಮಾಹಿತಿ ಸಂಗ್ರಹಿಸುವ ಅಧಿಕಾರಿಗಳಿಗೆ ನೀಡಲಾಗುತ್ತದೆ. ಇಲ್ಲಿ ಸಮಸ್ಯೆ ಆರಂಭವಾಗಲಿದೆ. ಎನ್‍ ಪಿ ಆರ್ ತಯಾರಿಸುವಾಗ ದಾಖಲೆ ಬೇಡ. ಎನ್ ಆರ್ ಸಿ ತಯಾರಿಸುವಾಗ ಈ ಸಂಶಯ ದೂರ ಮಾಡುವ ದಾಖಲೆಯನ್ನು ವ್ಯಕ್ತಿ ನೀಡಬೇಕಾಗುತ್ತದೆ.

2010 ಮನ್‍ಮೋಹನ್ ಸಿಂಗ್ ಸರಕಾರ ಎನ್‍ ಪಿ ಆರ್ ಸಂಗ್ರಹಿಸಲು ಮೊದಲು ಯೋಜನೆ ಹಾಕಿತ್ತು ಅನ್ನುವುದು ಸಂಪೂರ್ಣ ನಿಜವಲ್ಲ. 2003ರ ಡಿಸೆಂಬರ್ ನಲ್ಲಿ ವಾಜಪೇಯಿ ಸರಕಾರ ಎನ್‍ ಪಿ ಆರ್ ಗೆ ಪ್ರಕಟಣೆ ಹೊರಡಿಸಿತ್ತು. ವ್ಯಕ್ತಿ ನೀಡುವ ವಿವರಗಳಲ್ಲಿ ಸಂದೇಹ ಇದ್ದರೆ ಇನ್ಯುಮೇಟರ್ ಗಳು ತಿಳಿಸಬೇಕೆಂದು ಅದರಲ್ಲಿ ಹೇಳಲಾಗಿತ್ತು. ಎನ್‍ ಪಿ ಆರ್ ಆಧಾರದಲ್ಲಿ ಎನ್‍ಆರ್ ಸಿ ತಯಾರಿಸುವ ಯೋಜನೆ ಮೊದಲು ಘೋಷಿಸಿದ್ದು ಮೋದಿ ಸರಕಾರವಾಗಿದೆ.

2014 ಜುಲೈಯಲ್ಲಿ ರಾಜ್ಯಸಭೆಯಲ್ಲಿ ಇಂದಿನ ಗೃಹ ಸಹಾಯಕ ಸಚಿವ ಕಿರಣ್ ರಿಜಿಜು ನೀಡಿದ ವಿವರಣೆಯಲ್ಲಿ ಸರಕಾರದ ಉದ್ದೇಶ ಸ್ಪಷ್ಟವಾಗುತ್ತದೆ. ಎನ್‍ ಪಿ ಆರ್ ನಿಂದ ವಿವರಗಳನ್ನು ಪಡೆದು ಅದರ ಆಧಾರದಲ್ಲಿ ವ್ಯಕ್ತಿಯ ಪೌರತ್ವ ಸ್ಥಿತಿ ಪರಿಶೀಲನೆ ನಡೆಸಿ ಎನ್‍ಆರ್ ಸಿ ತಯಾರಿಸಲಾಗುವುದು ಎಂದು ಅಂದು ಅವರು ಹೇಳಿದ್ದರು.

ಎನ್‍ ಪಿ ಆರ್ ಈ ಹಿಂದೆಯೇ ತಯಾರಿಸಿದ್ದರೂ ಅಂದು ಇಲ್ಲದ ಪೌರತ್ವ ಪಟ್ಟಿಯ ಗುರಿ ಈಗ ಸರಕಾರ ಹೇಳುತ್ತಿದೆ. ಎನ್‍ ಪಿ ಆರ್ ನವೀಕರಣಕ್ಕೆ ಸಹಕರಿಸುವುದಿಲ್ಲ ಎಂದು ಕೇರಳ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಈಗಾಗಲೇ ಘೋಷಿಸಿದ್ದಾರೆ.

ಎನ್‍ ಪಿ ಆರ್ ವಿವರಗಳು ಇಷ್ಟರಲ್ಲೇ ಡಿಜಿಟಲ್ ರೂಪಕ್ಕೆ ಬಂದಿದೆ. ಆಧಾರ್ ಮೂಲಕ ವ್ಯಕ್ತಿಯ ಜೈವಿಕ ದಾಖಲೆಯ ವಿವರಗಳು ಮತ್ತು ಡೇಟಾ ಸರಕಾರದ ಬಳಿ ಇವೆ.