ಅನುಗ್ರಹಗಳನ್ನು ಪ್ರಯೋಜನಕಾರಿಯಾಗಿಸಬೇಕು

0
40

ಸನ್ಮಾರ್ಗ ವಾರ್ತೆ

ಸಂಗ್ರಹ: ಎನ್.ಎಂ. ಪಡೀಲ್

ಅಬೂಹುರೈರ(ರ)ರಿಂದ ವರದಿಯಾಗಿದೆ. ಪ್ರವಾದಿಯವರು(ಸ) ಹೇಳಿದರು: “ಬರಗಾಲ ಎಂದರೆ ಮಳೆ ಬರದಿರುವುದಲ್ಲ. ಮಳೆ ಸುರಿಯಿತು, ಪುನಃ ಪುನಃ ಸುರಿಯಿತು. ಆದರೆ ಭೂಮಿಯು ಮೊಳಕೆಯೊಡೆಯಲಿಲ್ಲ. ಇದು ಅನಾವೃಷ್ಟಿಯಾಗಿದೆ.” (ಮುಸ್ಲಿಮ್)

ನಾವು ಸಾಮಾನ್ಯವಾಗಿ ಮಳೆ ಬರೆದಿದ್ದರೆ ಬರಗಾಲ ಬಂತೆಂದು ಹೇಳುತ್ತೇವೆ. ಬರಗಾಲ ಪೀಡಿತ ಪ್ರದೇಶಗಳನ್ನು, ಅಲ್ಲಿನ ಸಂಕಷ್ಟಗಳನ್ನು ಧಾರಾಳವಾಗಿ ಅನುಭವಿಸಿದ್ದೇವೆ. ಕಂಡು ತಿಳಿದಿದ್ದೇವೆ. ಆದರೆ ಈ ಹದೀಸ್‌ನಲ್ಲಿ ಪ್ರವಾದಿಯವರು(ಸ) ಬರ ಹಾಗೂ ಕ್ಷಾಮ ಎಂಬುದು ಮಳೆಯ ಅಭಾವದಿಂದ ಉಂಟಾಗುವುದಿಲ್ಲ. ಧಾರಾಕಾರವಾಗಿ ಸುರಿದ ಮಳೆಯಲ್ಲಿ ಸ್ವಲ್ಪವೂ ಒಳಿತು ಮತ್ತು ಪ್ರಯೋಜನ ಇಲ್ಲದಿದ್ದರೆ ಅದು ಬರಗಾಲ ಎಂದು ತಿಳಿಸಲಾಗಿದೆ. ದೇವನು ಭೂಮಿಗೆ ಸುರಿಸಿದ ಮಳೆಯ ಸಂಪೂರ್ಣ ಪ್ರಯೋಜನ ಪಡೆಯದಿರುವುದು ಎಂದು ಕೂಡಾ ಹೇಳಬಹುದು.

ನಿಜವಾಗಿ ಈ ಹದೀಸ್ ಹಲವಾರು ವಿಷಯಗಳನ್ನು ನಮಗೆ ನೆನಪಿಸುತ್ತದೆ. ನಮಗೆ ಈ ಭೂಮಿಯಲ್ಲಿ ನೀಡಲಾದ ಅನುಗ್ರಹಗಳನ್ನು ನಾವು ಸಮರ್ಪಕವಾಗಿ ಉಪಯೋಗಿಸದಿರುವುದು ನಾವು ಅನುಗ್ರಹಗಳನ್ನು ನಿಷೇಧಿಸಿದಂತೆ ಆಗುತ್ತದೆ. ಹಣ, ಆರೋಗ್ಯ, ಸಂಪತ್ತು, ಆಯುಷ್ಯ ಎಲ್ಲವೂ ಕೂಡಾ ದೇವನ ಅನುಗ್ರಹವಾಗಿದ್ದು ಅದನ್ನು ಬೇಕಾಬಿಟ್ಟಿ ಪೋಲು ಮಾಡುವುದು ಅನುಗ್ರಹಗಳಿಗೆ ಮುಖ ತಿರುಗಿಸಿದಂತೆ ಆಗುತ್ತದೆ.

ಮಳೆ ಸುರಿದು ಕೂಡಾ ನಾವು ಬಿತ್ತಿದ ಬೀಜವು ಮೊಳಕೆಯೊಡೆಯದಿದ್ದರೆ ಗಿಡಗಳು ನಳ ನಳಿಸದಿದ್ದರೆ ಅದು ಮಳೆ ಬರದಿರುವುದಕ್ಕೆ ಸಮ. ಅಂದರೆ ಆ ಮಳೆಯಿಂದ ಯಾವುದೇ ಪ್ರಯೋಜನ ಸಿಗಲಿಲ್ಲ ಎಂದರ್ಥ.

ಅಲ್ಲಾಹನು ಕೆಲವರನ್ನು ಅನುಗ್ರಹಗಳನ್ನು ನೀಡದೆ ಪರೀಕ್ಷಿಸುತ್ತಾನೆ. ಇನ್ನು ಕೆಲವರನ್ನು ನೀಡಿ ಪರೀಕ್ಷಿಸುತ್ತಾನೆ. ಸಂಪತ್ತು, ಸಂತಾನವು ಲಭಿಸದಿರುವುದು ಮತ್ತು ಅದು ಫಿತ್ನವಾಗುವುದು ದೇವನ ಪರೀಕ್ಷೆಯಾಗಿದೆ.
ಅಲ್ಲಾಹನು ಹೇಳಿದನು; “ಅನಂತರ ಅವರು, ತಮಗೆ ಕೊಡಲ್ಪಟ್ಟ ಬುದ್ಧಿವಾದವನ್ನು ಮರೆತು ಬಿಟ್ಟಾಗ ನಾವು ಅವರಿಗಾಗಿ ಎಲ್ಲ ವಿಧದ ಸಂಪನ್ನತೆಯ ದ್ವಾರಗಳನ್ನು ತೆರೆದು ಬಿಟ್ಟೆವು. ಅವರಿಗೆ ದಯಪಾಲಿಸಲ್ಪಟ್ಟ ಕೊಡುಗೆಗಳಲ್ಲಿ ಅವರು ಚೆನ್ನಾಗಿ ಮಗ್ನರಾಗಿದ್ದಾಗ ನಾವು ಹಠಾತ್ತನೆ ಅವರನ್ನು ಹಿಡಿದು ಕೊಂಡೆವು. ಆಗ ಅವರು ಯಾವುದೇ ಒಳಿತಿನ ಬಗ್ಗೆ ನಿರಾಶರಾಗಿದ್ದರು.” (6: 44)

ಸನ್ಮಾರ್ಗ ಲಭಿಸಿಯೂ ಕೂಡ ಅವರು ಪ್ರಯೋಜನವನ್ನು ಪಡೆಯದಿರುವುದು ನೇರಮಾರ್ಗ ಲಭಿಸದಿರುವುದಕ್ಕಿಂತಲೂ ದೌರ್ಭಾಗ್ಯಕರವಾಗಿದೆ.

ಏಕೆಂದರೆ, ತಾನು ದುರ್ಮಾರ್ಗವನ್ನು ಸ್ವೀಕರಿಸಿದ್ದಕ್ಕೆ ಹೇಳಲು ಯಾವುದೇ ನೆಪವು ಅವನಲ್ಲಿ ಉಳಿದಿರುವುದಿಲ್ಲ. ಆದ್ದರಿಂದ ಈ ಸನ್ಮಾರ್ಗ ಎಂಬ ಅನುಗ್ರಹವನ್ನು ಪ್ರಯೋಜನಪಡಿಸಿಕೊಳ್ಳಲು ಆ ಮೂಲಕ ಸ್ವರ್ಗಕ್ಕೆ ತಲುಪಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಅಲ್ಲಾಹನು ನರಕದವರನ್ನು ಹೀಗೆ ಪರಿಚಯಪಡಿಸುತ್ತಾನೆ: “ಅನೇಕ ಯಕ್ಷ ಮತ್ತು ಮನುಷ್ಯರನ್ನು ನಾವು ನರಕಕ್ಕಾಗಿಯೇ ಸೃಷ್ಟಿಸಿದ್ದೇವೆಂಬುದು ವಾಸ್ತವ. ಅವರಿಗೆ ಹೃದಯಗಳಿವೆ ಆದರೆ ಅವರು ಅದರಿಂದ ವಿವೇಚಿಸುವುದಿಲ್ಲ. ಅವರಿಗೆ ಕಣ್ಣುಗಳಿವೆ ಆದರೆ ಅವರು ಅವುಗಳಿಂದ ವೀಕ್ಷಿಸುವುದಿಲ್ಲ. ಅವರಿಗೆ ಕಿವಿಗಳಿವೆ ಆದರೆ ಅವರು ಅವುಗಳಿಂದ ಆಲಿಸುವುದಿಲ್ಲ. ಅವರು ಪ್ರಾಣಿಗಳಂತಿದ್ದಾರೆ ಮಾತ್ರವಲ್ಲ ಅವುಗಳಿಗಿಂತಲೂ ದಾರಿಗೆಟ್ಟವರು. ಅವರು ಅಲಕ್ಷ್ಯರಾಗಿದ್ದಾರೆ.” (7: 179)

ಉಪಕಾರಪ್ರದವಲ್ಲದ ಜ್ಞಾನ, ವಿಷಯವನ್ನು ಗ್ರಹಿಸದ ಹೃದಯ ಮತ್ತು ಉತ್ತರ ನೀಡಲ್ಪಡದ ಪ್ರಾರ್ಥನೆಯಿಂದ ಅಲ್ಲಾಹನ ಪ್ರವಾದಿವರ್ಯರು(ಸ) ಅಭಯ ಯಾಚಿಸುತ್ತಿದ್ದರು.