ಗುಜರಾತ್ ನರಮೇಧ: ಬಿಲ್ಕಿಸ್ ಬಾನು, ಬ್ರಿಟಿಷ್ ಪ್ರಜೆಗಳು ಮತ್ತು ನ್ಯಾಯ

0
38

ಸನ್ಮಾರ್ಗ ಸಂಪಾದಕೀಯ

ಬಿಲ್ಕಿಸ್ ಬಾನು ಪ್ರಕರಣದ ಇಬ್ಬರು ಅಪರಾಧಿಗಳಿಗೆ ಸುಪ್ರೀಮ್ ಕೋರ್ಟ್ ಜಾಮೀನು ನೀಡಿರುವುದರ ಬೆನ್ನಿಗೇ, ಗುಜರಾತ್ ಹತ್ಯಾಕಾಂಡದ ಸುತ್ತ 2002ರಲ್ಲಿ ಬ್ರಿಟಿಷ್ ಸರಕಾರ ನಡೆಸಿದ ತನಿಖೆಯ ವರದಿಯು ಅಂದಿನ ಮುಖ್ಯಮಂತ್ರಿ ಮತ್ತು ಈಗಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ಅಧಿಕಾರಿಗಳ ಪಾತ್ರವನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ. ಈ ವರದಿಯನ್ನು ದಿ ಕಾರವಾನ್ ಪತ್ರಿಕೆಯು ಪ್ರಕಟಿಸಿದ್ದು, ಈ ಹಿಂಸಾಚಾರವನ್ನು ತಿಂಗಳ ಹಿಂದೆಯೇ ಯೋಜಿಸಲಾಗಿತ್ತು ಮತ್ತು ಇದು ರಾಜಕೀಯ ಪ್ರೇರಿತವಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಹಿಂದೂಗಳಿರುವ ಪ್ರದೇಶದಿಂದ ಮುಸ್ಲಿಮರನ್ನು ಹೊರದಬ್ಬುವುದು ಈ ಹಿಂಸಾಚಾರದ ಗುರಿಯಾಗಿದ್ದು, ಜನಾಂಗ ನಿರ್ಮೂಲನ ಸ್ವರೂಪವನ್ನು ಈ ಹಿಂಸಾಚಾರ ಹೊಂದಿತ್ತು ಎಂದೂ ವರದಿಯಲ್ಲಿ ಹೇಳಲಾಗಿದೆ. ಒಂದುವೇಳೆ ಗೋಧ್ರಾದಲ್ಲಿ ರೈಲು ದಹನ ಘಟನೆ ನಡೆಯದೇ ಇರುತ್ತಿದ್ದರೆ ಇನ್ನೊಂದು ಕಾರಣವನ್ನು ಕಂಡುಕೊಂಡು ಈ ಹಿಂಸಾಚಾರವನ್ನು ನಡೆಸಲಾಗುತ್ತಿತ್ತು ಎಂದೂ ವರದಿಯಲ್ಲಿ ಹೇಳಲಾಗಿದೆ. ಈ ಹಿಂಸಾಚಾರಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಅದರ ಬೆಂಬಲಿಗ ಸಂಘಟನೆಗಳು ನೇತೃತ್ವ ನೀಡಿರುವುದಾ ಗಿಯೂ ಮತ್ತು ಮುಸ್ಲಿಮರ ಮನೆಗಳು ಮತ್ತು ವ್ಯಾಪಾರ ಸ್ಥಳಗಳನ್ನು ಗುರುತಿಸಲು ದಂಗೆಕೋರರು ಕಂಪ್ಯೂಟರ್ ಆಧಾರಿತ ಪಟ್ಟಿಗಳನ್ನು ಬಳಸಿರುವುದಾಗಿಯೂ ವರದಿಯಲ್ಲಿ ಹೇಳಲಾಗಿದೆ. ಅಂದಿನ ಮುಖ್ಯಮಂತ್ರಿ ಮೋದಿ ಅವರ ಪಾತ್ರವನ್ನು ನೇರವಾಗಿ ಉಲ್ಲೇಖಿಸದಿದ್ದರೂ ಅವರ ಸಂಪುಟದ ಸಚಿವರು ಹಿಂಸಾಚಾರದಲ್ಲಿ ಭಾಗವಹಿಸಿದ್ದರು ಮತ್ತು ಹಿಂಸೆಯನ್ನು ತಡೆಯುವಲ್ಲಿ ಮಧ್ಯ ಪ್ರವೇಶಿಸದಂತೆ ಪೊಲೀಸರನ್ನು ತಡೆದಿದ್ದರು ಎಂದೂ ವರದಿ ಯಲ್ಲಿದೆ. ಮೋದಿ ಸರಕಾರದ ನಡವಳಿಕೆ ಮತ್ತು ವಿಹಿಂಪ ಸಹಿತ ಹಿಂಸಾಚಾರದಲ್ಲಿ ಭಾಗಿಯಾದ ಸಂಘಪರಿವಾರದ ಸಂಘಟನೆಗಳೊಂದಿಗೆ ಅವರಿಗಿರುವ ಸೈದ್ಧಾಂತಿಕ ಹೊಂದಾಣಿಕೆಯನ್ನು ಉಲ್ಲೇಖಿಸಿರುವ ವರದಿಯು, ಈ ಹಿಂಸಾಚಾರಕ್ಕೆ ಮೋದಿಯವರನ್ನೇ ನೇರ ಹೊಣೆಗಾರರನ್ನಾಗಿ ಮಾಡಿದೆ. ಈ ಬಗ್ಗೆ ‘India: The Modi Question’ ಎಂಬ ಹೆಸರಲ್ಲಿ 2023ರಲ್ಲಿ ಬಿಬಿಸಿಯು ಡಾಕ್ಯುಮೆಂಟರಿ ಪ್ರಸಾರ ಮಾಡಿತ್ತು. ಅಂದಹಾಗೆ,

2002ರ ಗುಜರಾತ್ ಹಿಂಸಾಚಾರದ ಸುತ್ತ ಬ್ರಿಟಿಷ್ ಸರಕಾರ ಆಸಕ್ತಿ ವಹಿಸುವುದಕ್ಕೆ ಒಂದು ಕಾರಣ ಇತ್ತು. ಈ ಹಿಂಸಾಚಾರದಲ್ಲಿ ಬ್ರಿಟನ್ನಿನ ಯಾರ್ಕ್ಶೈರ್ ಮೂಲದ ಸಈದ್ ದಾವೂದ್, ಶಕೀಲ್ ದಾವೂದ್ ಮತ್ತು ಅವರ ಸ್ನೇಹಿತ ಮುಹಮ್ಮದ್ ಅಶ್ವತ್ ಹತ್ಯೆಗೀಡಾಗಿದ್ದರು. ಇವರ ಜೊತೆ ಭಾರತೀಯ ಕಾರು ಚಾಲಕ ಯೂಸುಫ್ ಪಿಲಾಘರ್ ಎಂಬವರೂ ಹತ್ಯೆಗೀಡಾಗಿದ್ದರು. ಇವರೊಂದಿಗೆ ಪ್ರಯಾಣಿಸುತ್ತಿದ್ದ ಇನ್ನೋರ್ವ ಬ್ರಿಟಿಷ್ ಪ್ರಜೆ ಇಮ್ರಾನ್ ದಾವೂದ್ ತೀವ್ರವಾಗಿ ಗಾಯಗೊಂಡರೂ ಪ್ರಾಣಾಪಾಯದಿಂದ ಪಾರಾಗಿದ್ದರು. 2002 ಫೆಬ್ರವರಿ 28ರಂದು ಆಗ್ರಾ ಮತ್ತು ಜೈಪುರ ಪ್ರವಾಸ ಮುಗಿಸಿ ಗುಜರಾತ್‌ಗೆ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಸಾಬರಕಾಂತ ಜಿಲ್ಲೆಯ ಪ್ರಾಂತಿಜಾ ಬಳಿ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಗುಂಪೊಂದು ಇವರ ವಾಹನವನ್ನು ತಡೆದು ನಿಲ್ಲಿಸಿತ್ತು. ಘಟನೆ ನಡೆದ ಆರಂಭದಲ್ಲಿ ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಮುಚ್ಚಿಹಾಕಿದ್ದರು. ಆದರೆ ಬ್ರಿಟಿಷ್ ಹೈಕಮಿಷನ್ ಮಧ್ಯ ಪ್ರವೇಶಿಸಿದ ನಂತರ ಸುಪ್ರೀಮ್ ಕೋರ್ಟ್ 2003ರಲ್ಲಿ ನೇಮಿಸಿದ ವಿಶೇಷ ತನಿಖಾ ತಂಡವು ಮರುತನಿಖೆ ನಡೆಸಿತು ಮತ್ತು 6 ಮಂದಿಯ ವಿರುದ್ಧ ಕೊಲೆ ಮತ್ತು ಹಿಂಸೆಯ ಆರೋಪದಡಿ ಚಾರ್ಜ್ಶೀಟ್ ಸಲ್ಲಿಸಿತು. ಆದರೆ,

2015 ಫೆಬ್ರವರಿ 27ರಂದು ಗುಜರಾತ್‌ನ ಹಿಮ್ಮತ್ ನಗರದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಐ.ಸಿ. ಶಾ ಅವರು 182 ಪುಟಗಳ ತೀರ್ಪು ನೀಡಿ ಎಲ್ಲಾ 6 ಆರೋಪಿಗಳನ್ನೂ ದೋಷಮುಕ್ತಗೊಳಿಸಿದರು. ಆರೋಪಗಳನ್ನು ಸಾಬೀತುಪಡಿಸಲು ಬಲವಾದ ಸಾಕ್ಷö್ಯವನ್ನು ಪ್ರಾಸಿಕ್ಯೂಶನ್ ಸಲ್ಲಿಸಿಲ್ಲ ಎಂದು ತನ್ನ ತೀರ್ಪಿಗೆ ನ್ಯಾಯಾಧೀಶರು ಸಮರ್ಥನೆ ನೀಡಿದರು. ದಾಳಿಯಲ್ಲಿ ಬದುಕುಳಿದಿದ್ದ ಏಕೈಕ ಬ್ರಿಟಿಷ್ ಪ್ರಜೆ ಇಮ್ರಾನ್ ದಾವೂದ್ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. ಆದರೆ ನ್ಯಾಯಮೂರ್ತಿಗಳಾದ ಎ.ವೈ. ಕೊಗ್ವೆ ಮತ್ತು ಸಮೀರ್ ದವೆ ಅವರಿದ್ದ ವಿಭಾಗೀಯ ಪೀಠವು 2025ರಲ್ಲಿ ಈ ಮೇಲ್ಮನವಿಯನ್ನು ವಜಾಗೊಳಿಸಿತು ಮತ್ತು ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು. ಅಂದಹಾಗೆ,

ಘಟನೆ ನಡೆದು ಸುಮಾರು 6 ವರ್ಷಗಳ ವರೆಗೆ ಆರೋಪಿಗಳ ಯಾವುದೇ ಗುರುತು ಪತ್ತೆ ಪೆರೇಡನ್ನೇ ಪೊಲೀಸರು ನಡೆಸಿರಲಿಲ್ಲ. ನ್ಯಾಯಾಲಯದಲ್ಲೇ ಅದೂ 6 ವರ್ಷಗಳ ಬಳಿಕ ಗುರುತು ಪತ್ತೆ ನಡೆಸಲಾಯಿತು. ಆರಂಭಿಕ ಎಫ್‌ಐಆರ್‌ನಲ್ಲಿ ಆರೋಪಿಗಳ ಹೆಸರೇ ಇರಲಿಲ್ಲ. ಕೇವಲ ಬಟ್ಟೆ, ಎತ್ತರ ಮತ್ತು ಅಂದಾಜು ವಯಸ್ಸಿನ ಆಧಾರವನ್ನಷ್ಟೇ ನೀಡಲಾಗಿತ್ತು. ಅಲ್ಲದೇ, ಮ್ಯಾಜಿಸ್ಟ್ರೇಟ್‌ ಮುಂದೆ ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲು ತನಿಖಾಧಿಕಾರಿಗಳು ವಿಫಲರಾಗಿದ್ದರು. ದಾಳಿಯಲ್ಲಿ ಬದುಕುಳಿದಿದ್ದ ಇಮ್ರಾನ್ ದಾವೂದ್ ಅವರು ಭಾರತಕ್ಕೆ ಬಂದು ಸಾಕ್ಷö್ಯ ಹೇಳಲು ಹಿಂಜರಿದರು. ಜೀವಭಯದ ಕಾರಣವನ್ನು ನೀಡಿ ವೀಡಿಯೋ ಕಾನ್ಫರೆನ್ಸ್ ಮೂಲಕ ಇಂಗ್ಲಂಡಿನಿಂದಲೇ ವಿಚಾರಣೆಗೆ ಹಾಜರಾದರು. ಆದರೆ, ಅವರ ಬ್ರಿಟಿಷ್ ಇಂಗ್ಲಿಷ್ ಉಚ್ಛಾರಣೆಯನ್ನು ಅರ್ಥ ಮಾಡಿ ಕೊಳ್ಳಲು ಮತ್ತು ಅದನ್ನು ಲಿಖಿತ ರೂಪಕ್ಕೆ ಇಳಿಸಲು ತೊಂದರೆಯಾಗಿದೆ ಎಂದು ವಿಶೇಷ ತನಿಖಾ ತಂಡ ಹಿಮ್ಮತ್ ನಗರದ ನ್ಯಾಯಾಧೀಶರ ಗಮನಕ್ಕೆ ತಂದಿತು. ಆದ್ದರಿಂದ ಲಿಪ್ಯಂತರದ ದೋಷಗಳನ್ನು ಸರಿಪಡಿಸಲು ಇಮ್ರಾನ್ ದಾವೂದ್‌ರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಲು ಅನುಮತಿ ಕೊಡುವಂತೆ ವಿಶೇಷ ತನಿಖಾ ತಂಡ ಅರ್ಜಿ ಸಲ್ಲಿಸಿತು. ಆದರೆ, 2014 ಡಿಸೆಂಬರ್‌ನಲ್ಲಿ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತು. ಹೀಗೆ,

ಇಡೀ ವ್ಯವಸ್ಥೆಯೇ ಆರೋಪಿಗಳ ಪರ ಮತ್ತು ಸಂತ್ರಸ್ತರ ವಿರುದ್ಧ ಟೊಂಕಕಟ್ಟಿ ನಿಂತಂತೆ ಭಾಸವಾದ ಈ ಪ್ರಕರಣದಲ್ಲಿ ಆರೋಪಿಗಳು ಯಾವ ಶಿಕ್ಷೆಯೂ ಇಲ್ಲದೇ ಪಾರಾದರು. ಪ್ರತ್ಯಕ್ಷ ಸಾಕ್ಷಿಯಾದ ಇಮ್ರಾನ್ ದಾವೂದ್ ಇದ್ದೂ ಈ ಆರೋಪಿಗಳಿಗೆ ಶಿಕ್ಷೆಯಾಗಲಿಲ್ಲ ಎಂಬುದೇ ಈ ಪ್ರಕರಣವನ್ನು ಮುಚ್ಚಿ ಹಾಕುವಲ್ಲಿ ಪೊಲೀಸರ ಪಾತ್ರವೇನು ಎಂಬುದನ್ನು ಹೇಳುತ್ತದೆ. ವಿಶೇಷ ಏನೆಂದರೆ, ತನ್ನ ಮೂವರು ಪ್ರಜೆಗಳ ಹತ್ಯೆ ಮತ್ತು ಹಿಂಸಾಚಾರ ವನ್ನು ತಡೆಯುವಲ್ಲಿ ಗುಜರಾತ್ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಬ್ರಿಟಿಷ್ ಸರಕಾರವು ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ರಾಜತಾಂತ್ರಿಕ ಸಂಪರ್ಕವನ್ನೇ ಕಡಿದುಕೊಂಡಿತ್ತು. ಈ ಬಹಿಷ್ಕಾರವು 2002ರಿಂದ ಆರಂಭವಾಗಿ 2012ರ ವರೆಗೆ ಮುಂದುವರಿದಿತ್ತು. ತನ್ನ ಪ್ರಜೆಗಳ ಹತ್ಯೆಯ ಕಾರಣಕ್ಕಾಗಿಯೇ ಬ್ರಿಟಿಷ್ ಸರಕಾರ ತನ್ನ ತನಿಖಾ ತಂಡವನ್ನು ಗುಜರಾತ್‌ಗೆ ಕಳುಹಿಸಿ ವರದಿ ತಯಾರಿಸಿತ್ತು. ಅದನ್ನೇ ಇದೀಗ ಕಾರವಾನ್ ಪತ್ರಿಕೆ ಬಿಡುಗಡೆಗೊಳಿಸಿದೆ. ಒಂದುಕಡೆ,

ಬ್ರಿಟಿಷ್ ಸರಕಾರ ನಡೆಸಿದ ತನಿಖಾ ವರದಿಯು ಹೀಗೆ ಬಿಡುಗಡೆಗೊಂಡಾಗ, ಇನ್ನೊಂದು ಕಡೆ ನಮ್ಮದೇ ಸುಪ್ರೀಮ್ ಕೋರ್ಟ್ ಬಿಲ್ಕಿಸ್ ಬಾನು ಪ್ರಕರಣದ ಇಬ್ಬರು ಅಪರಾಧಿಗಳಿಗೆ ಜಾಮೀನು ನೀಡಿದೆ. 2022ರಲ್ಲಿ ಈ ಇಬ್ಬರು ಅಪರಾಧಿಗಳು ಸಹಿತ ಒಟ್ಟು 11 ಅಪರಾಧಿಗಳನ್ನು ಗುಜರಾತ್ ಸರಕಾರ ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿತ್ತು. ಆದರೆ ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಗೊಂಡ ಬಳಿಕ 2024ರಲ್ಲಿ ಸುಪ್ರೀಮ್ ಕೋರ್ಟ್ ಎಲ್ಲಾ 11 ಮಂದಿಯನ್ನೂ ಮರಳಿ ಜೈಲಿಗೆ ಕಳುಹಿಸಿತು. ಇದೀಗ ಇವರಲ್ಲಿ ಇಬ್ಬರಿಗೆ ಜಾಮೀನು ದೊರೆತಿದೆ. ಕಳೆದ 17 ವರ್ಷಗಳಿಂದ ಜೈಲಲ್ಲಿರುವ ಇವರು, ಜೀವನಪೂರ್ತಿ ಜೈಲು ಶಿಕ್ಷೆಗೆ ಒಳಗಾಗಿರುವ ಹೊರತಾಗಿಯೂ ಈ ಜಾಮೀನು ದೊರೆತಿರುವುದು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಈ ಅಪರಾಧಿಗಳು ಬಿಡುಗಡೆಗೊಂಡ ಬಳಿಕ, ಬಿಲ್ಕಿಸ್ ಬಾನು ಭಯದಿಂದ ಗುಜರಾತ್ ತೊರೆದಿದ್ದಾರೆ.
ನಿಜಕ್ಕೂ ಇದು ನ್ಯಾಯದ ಅಣಕ. ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಅವರನ್ನು ಅತ್ಯಾಚಾರ ಮಾಡಿದ್ದಲ್ಲದೇ ಅವರ ಮಗಳೂ ಸಹಿತ ಕುಟುಂಬದ 7 ಮಂದಿಯನ್ನು ಹತ್ಯೆ ಮಾಡಿದ ಅಪರಾಧಿಗಳು ಜಾಮೀನು ಪಡೆದು ಹೊರ ಬರುತ್ತಾರೆಂದರೆ, ಅದನ್ನು ಸಂತ್ರಸ್ತೆ ಸಹಿಸಿಕೊಳ್ಳುವುದು ಹೇಗೆ? ಬಿಲ್ಕಿಸ್ ಬಾನು ಕೂಡ ಇತರ ಏಳು ಮಂದಿಯಂತೆ ಸತ್ತಿದ್ದಾರೆ ಎಂದು ಭಾವಿಸಿಯೇ ಈ ಅಪರಾಧಿಗಳು ಅವರನ್ನು ಬಿಟ್ಟು ಹೋಗಿದ್ದರು. ನಗ್ನರಾಗಿದ್ದ ಬಿಲ್ಕಿಸ್ ಪ್ರಜ್ಞೆ ಬಂದ ಬಳಿಕ ಓಡಿ ಹೋಗಿ ತಪ್ಪಿಸಿಕೊಂಡಿದ್ದರು. ಇದೀಗ ಅವರನ್ನು ನ್ಯಾಯಾಲಯ ಮತ್ತೊಮ್ಮೆ ಬೆತ್ತಲೆ ಮಾಡಿದಂತಾಗಿದೆ.ಟಿ