ಡಾ| ಪಿ.ಎ. ಇಬ್ರಾಹೀಮ್ ಹಾಜಿಯವರ ಹಜ್ಜ್

0
166

ಸನ್ಮಾರ್ಗ ವಾರ್ತೆ

4 ದಶಕಗಳ ಹಿಂದಿನ ಮಕ್ಕಾ, ವರ್ಷಗಳ ಹಿಂದೆ ನಿಧನರಾದ ಪ್ರಮುಖ ಕೈಗಾರಿಕೋದ್ಯಮಿಯೂ ಸಮಾಜ ಸೇವಾ ರಂಗದ ದಿಗ್ಗಜರೂ ಆದ ಪಿಎ ಸಂಸ್ಥೆಗಳ ರೂವಾರಿ ಡಾ| ಪಿ.ಎ. ಇಬ್ರಾಹೀಮ್ ಹಾಜಿಯವರ ಆರಂಭ ಹಜ್ಜ್ ಯಾತ್ರೆಯ ಅನುಭವವು ಕಾಲದ ಬದಲಾವಣೆಯನ್ನು ಸ್ಪಷ್ಟಪಡಿಸುತ್ತದೆ.

1974ರಲ್ಲಿ ಅವರು ನಡೆಸಿದ ಹಜ್ಜ್ ಯಾತ್ರೆಯ ವಿವರಣೆಯು ಮಾಧ್ಯಮಮ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈಗಿನ ಹಜ್ಜ್ ಯಾತ್ರೆಗೂ, ಅಂದಿನ ಸ್ಥಿತಿಗೂ ಉಂಟಾದ ಬದಲಾವಣೆಯನ್ನು ತಿಳಿದುಕೊಳ್ಳಲು ಇಬ್ರಾಹೀಮ್ ಹಾಜಿಯವರ ಅನುಭವಗಳು ಸಹಾಯಕವಾಗಿವೆ.

ಶ್ರೀಮಂತ ವ್ಯಕ್ತಿಯಾಗಿ ಬೆಳೆದ ಅನಿವಾಸಿಯೂ, ಸಮಾಜ ಸೇವಾ ಕಾರ್ಯಕರ್ತರೂ ಆದ ಇಬ್ರಾಹೀಮ್ ಹಾಜಿ, ಸೌದಿ ಅರೇಬಿಯಾದಲ್ಲಿ ಪೆಟ್ರೋಲ್ ಡಾಲರ್‌ನ ಹರಿಯುವಿಕೆ ಉಂಟಾಗುವ ಮೊದಲು ನಡೆಸಿದ ಹಜ್ಜ್ ಯಾತ್ರೆಯ ಅನುಭವವು ಹಳೇ ಕಾಲದ ಹಜ್ಜ್ ಅನ್ನು ಕಣ್ಣ ಮುಂದೆ ಅನಾವರಣಗೊಳಿಸುತ್ತದೆ. ಮೆದುಳಿನ ಆಘಾತದಿಂದ 2021 ಡಿಸೆಂಬರ್ 21ಕ್ಕೆ ಆಸ್ಪತ್ರೆಗೆ ದಾಖಲಾದ ಇಬ್ರಾಹೀಮ್ ಹಾಜಿ ಬಳಿಕ ಈ ಲೋಕಕ್ಕೆ ವಿದಾಯ ಹೇಳಿದರು.

1974 ಡಿಸೆಂಬರ್ 6 ಕ್ಕೆ ಅವರು ಹಜ್ಜ್ ಯಾತ್ರೆ ನಡೆಸಿದ್ದರು. ಅದು ಸ್ವಂತ ವ್ಯಾಪಾರ ಆರಂಭಿಸುವ ಬಯಕೆ ಮೊಳಕೆಯೊಡೆದ ಕಾಲವಾಗಿತ್ತು. ಅಬ್ದುಲ್ ಕರೀಮ್ ತವಕ್ಕಲಿಯವರ ಹಳೆಯ ಕಟ್ಟಡದಲ್ಲಿ ಅಗಲ ಕಿರಿದಾದ ಸ್ಥಳದ ಪಕ್ಕ ಒಂದು ಅಂಗಡಿಯು ಮಾರಾಟಕ್ಕಿದೆಯೆಂದು ಗೆಳೆಯ ವೆಲಮ್ ಅಬೂಬಕರ್ ಅವರು ಇಬ್ರಾಹೀಮರಿಗೆ ವಿಷಯ ತಿಳಿಸಿದ್ದರು. 17,000 ದಿರ್‌ಹಮ್ ಬಾಡಿಗೆ ನೀಡಬೇಕು. 500 ದಿರ‍್ಹಮ್ ಅಡ್ವಾನ್ಸ್ ನೀಡಿ ಹಜ್ಜ್ ಯಾತ್ರೆಯನ್ನೂ ಆರಂಭಿಸಿದರು. ಎಗ್ರಿಮೆಂಟ್ ಬರೆಯಬೇಡವೇ ಎಂದು ಅಬೂಬಕರ್ ಕೇಳಿದರು. ಆ ಕಾಲದಲ್ಲಿ ಒಂದು ಅಂಗಡಿಯನ್ನು ಪಡೆಯಲು ಇರುವಂತಹ ಕಷ್ಟವನ್ನು ಲೆಕ್ಕ ಹಾಕಿಯೇ ಇದನ್ನು ಕೇಳಿದ್ದರು. “ಹಜ್ಜ್ ಯಾತ್ರೆಗೆ ಉದ್ದೇಶಿಸಿದ ನಾನು ಎಲ್ಲವನ್ನೂ ಅಲ್ಲಾಹನಿಗೆ ತವಕ್ಕಲ್ ಮಾಡಿದ್ದೇನೆ, ಎಗ್ರಿಮೆಂಟ್‌ನ ಅಗತ್ಯವಿಲ್ಲ” ಎಂದು ಇಬ್ರಾಹೀಮ್ ಹಾಜಿ ಉತ್ತರಿಸಿದರು.
ಮುತವ್ವಫ್ ಯಾರೆಂದು ತೀರ್ಮಾನಿಸಿದ ಬಳಿಕ ಒಂದು ದಿನ ಕಳೆದು ಮಕ್ಕಾಗೆ ಹೋಗಲು ಅನುಮತಿ ಲಭಿಸಿತ್ತು. ನಾಲ್ಕು ಜನ ಇದ್ದೆವು. ಎಲ್ಲರೂ ಶಾರ್ಜದ ವೆಜಿಟೇಬಲ್, ಗ್ರೋಸರಿ ಮೊದಲಾದ ಸಣ್ಣ ವ್ಯಾಪಾರಿಗಳು. ಹರಮ್‌ನಿಂದ 750 ಮೀಟರ್ ದೂರದಲ್ಲಿ ಅವರ ವಸತಿಯಿತ್ತು.

ಹರಮ್ ಪ್ರವೇಶಿಸಿದ ಕೂಡಲೇ ಮುಹಮ್ಮದ್ ಕುಂಞ ಮೌಲವಿ ಕೈ ತೋರಿಸಿ ಆ ಕಪ್ಪಗಿನ ಭವನವೇ ಕಅಬಾ ಎಂದು ಹೇಳಿದ ನೆನಪಿದೆ. ಮತಾಫ್ ಸಣ್ಣ ಸ್ಥಳವಾಗಿತ್ತು. ಆದ್ದರಿಂದ ತುಂಬಾ ರಶ್ ಇತ್ತು. ಅದರಿಂದಾಗಿ ನಂತರ ಅದನ್ನು ವಿಸ್ತಾರಗೊಳಿಸಲಾಯಿತು. ಆ ಕಾಲದಲ್ಲಿ ನಾಲ್ಕು ಮದ್‌ಹಬ್‌ಗಳ ಮುಸಲ್ಲ ಇತ್ತು. ನಾಲ್ಕು ದಿಕ್ಕಿನಿಂದಲೂ ಒಟ್ಟಿಗೆ ಅದಾನ್ ಕೊಡಲಾಗುತ್ತಿತ್ತು. ಬಿಡುವಿನ ವೇಳೆಯಲ್ಲಿ ಇತಿಹಾಸ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿದೆವು.

ಹಿರಾ ಗುಹೆಗೆ ಹತ್ತಿ ಆರಾಧನಾ ಮಗ್ನರಾಗುತ್ತಿದ್ದೆವು. ಸ್ಥಳದಲ್ಲಿ ನಿಂತು ಎರಡು ರಕಅತ್ ನಮಾಝ್ ಮಾಡಿದೆ. ಅಲ್ಲಿಯೂ ಸ್ವಲ್ಪ ರಶ್ ಇತ್ತು.

ಉಸ್ಮಾನಿಯಾ ಖಿಲಾಫತ್‌ನ ಕಾಲದಲ್ಲಿ ಸ್ಥಾಫಿಸಿದ ಹರಮ್‌ನ ತುರ್ಕಿ ಮಸೀದಿಯ ಭಾಗಗಳು (ಇಂದು ಕ್ಲಾಕ್‌ ಟವರ್, ಹೋಟೆಲ್ ಸಮುಚ್ಛಯಗಳಿರುವ ಸ್ಥಳ) ತುರ್ಕಿ ಕೋಟೆಯೆಲ್ಲವೂ ಕಾಣೆಯಾಗಿತ್ತು. ಅಂದಿನ ಪ್ರಮುಖ ಹೋಟೆಲ್ ಮಕ್ಕಾ ಹೋಟೆಲ್ ಆಗಿತ್ತು. ಇಂದಿನ ಅಜ್‌ಮಾನ್ ಆಡಳಿತಾಧಿಕಾರಿ ಶೈಖ್ ಹುಮೈದ್ ಬಿನ್ ರಾಶಿದ್ ಅಲ್ ನುಐಮಿಯವರ ತಂದೆ ಶೈಖ್ ರಾಶಿದ್‌ರನ್ನು ಮಕ್ಕಾ ಹೋಟೆಲ್‌ನಲ್ಲಿ ಅವರು ಸಂಜೆ ಸಮಯದಲ್ಲಿ ಕುಳಿತುಕೊಳ್ಳುವ ಮೆಸನೆನ್ ಫ್ಲೋರಿನಲ್ಲಿರುವ ಮಜ್ಲಿಸ್‌ನಲ್ಲಿ ನಾವು ನೋಡಿದ್ದೆವು.

ಮಕ್ಕಾದಲ್ಲಿ ಅಗಲ ಕಿರಿದಾದ ಹಲವು ದಾರಿಗಳಿದ್ದವು. ಟಾರು ಹಾಕಿದ ರಸ್ತೆಗಳಲ್ಲದ್ದರಿಂದ ಸಣ್ಣ ಸಣ್ಣ ಗುಂಡಿಗಳು ಇದ್ದವು. ಹರಮ್‌ಗೆ ತಲುಪುವ ಮೊದಲು ಇಕಾಮತ್ ಕೊಟ್ಟರೆ ಜನರು ದಾರಿಗಳಲ್ಲಿ ರಸ್ತೆಗಳಲ್ಲಿ ನಮಾಝ್ ನಿರ್ವಹಿಸುತ್ತಿದ್ದರು.

1974ರ ಮೊದಲು ಸೌದಿ ಅರೇಬಿಯಾವು ಇಂದಿನಂತೆ ತೈಲಭರಿತ ದೇಶವಾಗಿರಲಿಲ್ಲ. ಭಾರತದಿಂದ ಕಾಲ್ನಡಿಗೆಯಲ್ಲೂ ಇತರ ರೀತಿಯಲ್ಲೂ ಹಜ್ಜ್ ಗೆ ಹೋದ ಹಿರಿಯರ ಚರಿತ್ರೆಯನ್ನು ಕೇಳಿದ್ದೇನೆ. ಕೆಲವರು ಪ್ರಯಾಣದ ಮಧ್ಯೆ ಸಾವನ್ನಪ್ಪುತ್ತಾರೆ, ಕೆಲವರು ಊರಿಗೆ ತಲುಪುತ್ತಾರೆ. ಇರಾನ್, ಇರಾಕ್ ಮೊದಲಾದ ರಾಷ್ಟ್ರಗಳಿಂದಲೂ ಪ್ರಯಾಣ ಮಾಡುತ್ತಿದ್ದರು. ದಾರಿ ಮಧ್ಯೆ ಸಿಗುವ ದರೋಡೆಕೋರರೊಂದಿಗೆ ಸೆಣಸಿಯೇ ಮಕ್ಕಾ ತಲುಪಬೇಕಾಗಿತ್ತು. ಇಂದಿನಂತೆ ಅಗಲವಾದ ರಸ್ತೆಗಳು, ಸೌಕರ್ಯಗಳು ಇಲ್ಲದ ಕಾರಣ ಅರಫಾದಿಂದ ಮುಝ್ದಲಿಫ ಯಾತ್ರೆಯ ನಡುವೆ ದಾರಿಯಲ್ಲಿ ಬಸ್ಸು ಕೆಟ್ಟು ನಿಂತಿತು. ಎರಡು ಗಂಟೆಯವರೆಗೆ ಕಾದರೂ ಏನೂ ಪ್ರಯೋಜನವಾಗಲಿಲ್ಲ.

ಮುಝ್ದಲಿಫದಲ್ಲಿ ರಾತ್ರಿ ಕಳೆಯುವ ಅವಕಾಶ ಸಿಗುವುದಿಲ್ಲವೆಂದು ಭಾವಿಸಿ, ಇತರರಂತೆಯೇ ನಾವೂ ಬಸ್ಸು ಇಳಿದು ನಡೆಯಲು ಆರಂಭಿಸಿದೆವು. ನಮ್ಮ ಜೊತೆ ಬೆಡ್ ಮತ್ತು ಅಗತ್ಯ ಸಾಮಾನಿನ ಲಗ್ಗೇಜೂ ಇತ್ತು. ಅದನ್ನು ಹೊತ್ತುಕೊಂಡೇ ನಮ್ಮ ಯಾತ್ರೆ ಸಾಗಿತು. ಮುಝ್ದಲಿಫದಿಂದ ಮಿನಾಕ್ಕೆ ನಮ್ಮ ಬಸ್ಸು ಕೈ ಕೊಟ್ಟದ್ದರಿಂದ ನಡೆಯಬೇಕಾಗಿ ಬಂತು.

ಜಮ್ರಾಕ್ಕೆ ಕಲ್ಲೆಸೆಯುವುದು ಅತ್ಯಂತ ಕಷ್ಟದ ಕೆಲಸವಾಗಿತ್ತು. ಇಂದಿನಂತೆ ರಸ್ತೆಗಳು, ಸಮತಟ್ಟಾದ ಸ್ಥಳಗಳೂ ಇಲ್ಲದ ದಿನಗಳವು. ವಿಶಾಲವಾದ ಮೈದಾನದೊಳಗೆ ಪ್ರವೇಶಿಸಿದರೆ ಜನ ದಟ್ಟಣೆಯಿಂದ ಕಾಲು ನೆಲಕ್ಕೆ ತಾಗದೇ ಜನ ಪ್ರವಾಹದೊಂದಿಗೆ ಚಲಿಸುತ್ತಿದ್ದೆವು. ದುರ್ಬಲ ವ್ಯಕ್ತಿಗಳು ಅಂತಹ ಸ್ಥಳಗಳಲ್ಲಿ ಬಿದ್ದು ಮರಣ ಹೊಂದುವಂತಹ ಪರಿಸ್ಥಿತಿಯೂ ಇತ್ತು. ಅಂದು ಮೂರು ದಿನ ಕಲ್ಲೆಸಲಾಗುತ್ತಿದ್ದರೆ, ಇಂದು 95% ಜನರೂ ಎರಡು ದಿನದಲ್ಲೇ ಕಲ್ಲೆಸೆದು ಮಕ್ಕಾಕ್ಕೆ ಮರಳುತ್ತಾರೆ.

ಎಲ್ಲಾ ಕೆಲಸವೂ ಮುತವ್ವಫ್‌ರ ಮೂಲಕ ನಡೆಯುತ್ತಿತ್ತು. ಪಾಸ್‌ಪೋರ್ಟ್ ಗಾಗಿ ಅವರ ಆಫೀಸ್‌ಗೆ ಹೋದಾಗ ಮರುದಿನ ಬರಲು ತಿಳಿಸಿದರು. ಮರುದಿನ ನೂರಕ್ಕಿಂತಲೂ ಅಧಿಕ ಪಾಸ್‌ಪೋರ್ಟ್ ಗಳನ್ನು ಒಂದು ಗೋಣಿಯಲ್ಲಿ ಹಾಕಿ ಅದರಲ್ಲಿ ಹೆಸರನ್ನು ನೋಡಿ ಆಯ್ದುಕೊಳ್ಳಲು ಹೇಳಿದರು. ಅದೂ ಕೂಡ ತಾಸುಗಟ್ಟಲೆ ಕಾದ ಬಳಿಕ. ಜಿದ್ದಾ ಏರ್‌ಪೋರ್ಟ್ ನಲ್ಲಿ ಅಂದು ಹಾಜಿಗಳಿಗೆ ವಾಸ್ತವ್ಯ ನೀಡಲಾಗಿತ್ತು. ವಿಮಾನದ ವಿವರ ತಿಳಿಯಲೂ ಉದ್ದದ ಸರತಿ ಸಾಲಿನಲ್ಲಿ ನಿಲ್ಲಬೇಕು. ಮೂರೋ ನಾಲ್ಕೋ ಕೌಂಟರ್‌ಗಳು ಮಾತ್ರ ಇರುತ್ತಿತ್ತು. ಹಲವು ಬಾರಿ ಪ್ರಯತ್ನಿಸಿದ ಬಳಿಕ ಮೂರನೇ ದಿನ ದುಬೈಗೆ ಹೋಗುವ ವಿಮಾನ ಲಭಿಸಿತು.

1978ರಲ್ಲಿ ತಂದೆ ಮತ್ತು ತಾಯಿಯವರು ಹಜ್ಜ್ ಗೆ ಹೋಗಬೇಕೆಂಬ ಇರಾದೆ ವ್ಯಕ್ತಪಡಿಸಿದರು. ವಿಸಿಟಿಂಗ್ ವೀಸಾದಲ್ಲಿ ಅವರು ದುಬೈ ತಲುಪಿದರು. ಅವರಿಗೆ ಸಹಾಯ ಮಾಡಲು ನಾನೂ ಹಜ್ಜ್ ಯಾತ್ರೆಗೆ ಹೊರಟೆ. ಮಕ್ಕಾ ಹೋಟೆಲ್‌ಗೆ ಸಮೀಪದ ಅಲ್ ಅನ್ಸಾರ್ ಹೋಟೆಲ್ ನಲ್ಲಿ ನಮ್ಮ ವಾಸ್ತವ್ಯ ಹಜರಲ್ ಅಸ್ವದ್ ಅನ್ನು ಚುಂಬಿಸಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

13 ಪುರುಷರು ಮತ್ತು 13 ಮಹಿಳೆಯರಿರುವ ಬಸ್ ಮಿನಾಕ್ಕೂ ಬಳಿಕ ದುಲ್‌ಹಜ್ಜ್ 9ಕ್ಕೆ ಅರಫಾಕ್ಕೂ ಹೋಗುವುದೆಂದು ತೀರ್ಮಾನವಾಯಿತು. ನನ್ನ ನೆನಪು ಸರಿಯೆಂದಾದರೆ 3000 ರಿಯಾಲ್ ಬಾಡಿಗೆ ನಿಶ್ಚಯಿಸಿದ ಸ್ಪೆಷಲ್ ಬಸ್. ನಿರೀಕ್ಷೆಯಂತೆ ಮಿನಾಕ್ಕೆ 8 ನೇ ತಾರೀಕು ತಲುಪಿ ಒಂಭತ್ತರ ಬೆಳಿಗ್ಗೆ ಫಜ್ರ್ ನಮಾಝ್‌ನ ಬಳಿಕ ಅರಫಾಕ್ಕೆ ಹೋಗುವ ಸಿದ್ಧತೆಯಲ್ಲಿದ್ದೆವು.
ವುಝೂ ಮಾಡಲು, ಮತ್ತಿತರ ಅಗತ್ಯಗಳಿಗಾಗಿ ಸಣ್ಣ ಪಾತ್ರೆ ಹಿಡಿದು ಹೊರಟ ಸಾಧಾರಣ 70 ವರ್ಷದ ಕಳೆದ ಅಹಮ್ಮದ್ ಅಲಿಯವರ ತಂದೆಯವರು ಕಾಣೆಯಾದರು. ಸಮೀಪದ ಡೇರೆಯಲ್ಲೆಲ್ಲಾ ಹುಡುಕಾಡಿದ ಬಳಿಕ `ಲಾಸ್ಟ್ ಆನ್ಡ್ ಫೌಂಡ್’ ಸೆಕ್ಷನ್‌ಗೆ ದೂರು ನೀಡಿದೆ. ಒಂದೆರಡು ಗಂಟೆ ಕಾದೆವು. ನಮ್ಮ ಹಜ್ಜ್ ನಷ್ಟವಾಗುತ್ತದೋ ಎಂಬ ಭಯದಿಂದ ಅವರನ್ನು ಬಿಟ್ಟು ನಾವೆಲ್ಲರೂ ಅರಫಾಕ್ಕೆ ಹೊರೆಟೆವು. ಮನಸ್ಸು ಬಹಳ ಭಾರವಾಗಿತ್ತು.

ಸಂಜೆ ಐದು ಗಂಟೆಗೆ ನಾವು ಅರಫಾದ ಟೆಂಟ್‌ಗೆ ತಲುಪಿದೆವು. ಆಗ ಆಹಾರವೆಲ್ಲಾ ಮುಗಿದಿತ್ತು. ಇಂದಿನಂತೆ ಹಣ ನೀಡಿ ಆಹಾರಕೊಳ್ಳುವ ವ್ಯವಸ್ಥೆಯೂ ಇರಲಿಲ್ಲ. ಬಹಳ ಹಸಿವಿನೊಂದಿಗೆಯೇ ಅರಫಾದ ಕರ್ಮಗಳನ್ನೆಲ್ಲಾ ಮುಗಿಸಿ ಮುಝ್ದಲಿಫಾಕ್ಕೆ ಹೊರಟೆವು. ತಂದೆಯನ್ನು ಹುಡುಕುತ್ತಾ ಹೋದ ಅಹ್ಮದ್ ಅಲಿಗೆ ಮಕ್ಕಾ ಹೋಟೆಲ್‌ನ ಕೋಣೆಯಲ್ಲಿ ಸಿಕ್ಕಿದರು. ಹಜ್ಜ್ ನ ಬಳಿಕ ತಂದೆ-ತಾಯಿಯೊಂದಿಗೆ ನಾವು ದುಬೈಗೆ ಮರಳಿದೆವು.