ಸನ್ಮಾರ್ಗ ವಾರ್ತೆ
ಎರಡು ದಶಕಗಳಿಗೂ ಹೆಚ್ಚು ಕಾಲ ಗಾಝಾದಲ್ಲಿ ಆಡಳಿತವನ್ನು ಮುನ್ನಡೆಸುತ್ತಿದ್ದ ಹಮಾಸ್ ಇದೀಗ ಹಿಂದಕ್ಕೆ ಸರಿದಿದೆ. ಆಡಳಿತವನ್ನು ಅಧಿಕೃತವಾಗಿ ವಿಸರ್ಜಿಸಲಾಗಿದೆ. ಇಸ್ರೇಲ್ ನ ನಿರಂತರ ದಾಳಿ ಮತ್ತು ಜನಾಂಗೀಯ ಹತ್ಯೆಯ ಕೊನೆಗೊಳಿಸುವ ಉದ್ದೇಶದಿಂದ ಹಮಾಸ್ ಈ ನಿರ್ಣಾಯಕ ರಾಜಕೀಯ ನಿರ್ಧಾರವನ್ನು ಮಾಡಿದೆ. ಇನ್ನು ಮುಂದೆ ಗಾಝಾದ ಆಡಳಿತವನ್ನು ತಾಂತ್ರಿಕ ತಜ್ಞರನ್ನು ಒಳಗೊಂಡ ಗಾಝಾ ಆಡಳಿತಕ್ಕಾಗಿ ರಾಷ್ಟ್ರೀಯ ಸಮಿತಿಗೆ ಅದು ಬಿಟ್ಟುಕೊಟ್ಟಿದೆ.
ಇಸ್ರೇಲ್ ಆಕ್ರಮಣಕ್ಕೆ ಇರುವ ಎಲ್ಲಾ ನೆಪಗಳನ್ನು ತೆಗೆದುಹಾಕುವ ಗುರಿಯನ್ನು ಈ ಕ್ರಮ ಹೊಂದಿದೆ ಎಂದು ಹಮಾಸ್ ವಕ್ತಾರ ಖಾಸಿಂ ಹೇಳಿದ್ದಾರೆ.
ಆದರೆ ಸರ್ಕಾರ ಬದಲಾದರೂ ಗಾಝಾದಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಾಸಗಳು ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಹಮಾಸ್ ವಿಶೇಷ ಗಮನಹರಿಸಲಿದೆ. ಭದ್ರತಾ ನಿರ್ವಾತವನ್ನು ತಪ್ಪಿಸಲು ಆಂತರಿಕ ಸಚಿವಾಲಯದ ಎಲ್ಲಾ ಉದ್ಯೋಗಿಗಳು ತಮ್ಮ ಪ್ರಸ್ತುತ ಕೆಲಸಗಳಲ್ಲಿ ಮುಂದುವರೆಯುತ್ತಾರೆ ಎಂದು ಹಮಾಸ್ ಹೇಳಿದೆ.
2006ರ ಚುನಾವಣೆಯಲ್ಲಿ ಜಯಗಳಿಸಿದ ನಂತರ 2007 ರಿಂದ ಗಾಝಾವನ್ನು ಹಮಾಸ್ ನಿಯಂತ್ರಿಸುತ್ತಿದೆ. ಆದರೆ ಕಳೆದ ಅಕ್ಟೋಬರ್ ನಲ್ಲಿ ಇಸ್ರೇಲ್ ನೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ತಾನು ಆಡಳಿತಾತ್ಮಕ ಜವಾಬ್ದಾರಿಯಿಂದ ಕೆಳಗಿಳಿಯಲು ಸಿದ್ದ ಎಂದು ಹಮಾಸ್ ಪದೇಪದೇ ಹೇಳಿತ್ತು.
ಹಮಾಸ್ ನಿಯಂತ್ರಿತ ಸರ್ಕಾರಿ ಕಚೇರಿಯ ಮುಖ್ಯಸ್ಥ ಇಸ್ಮಾಯಿಲ್ ಅಲ್ ತವಾಬ್ ತಾ ಮತ್ತು ಸರ್ಕಾರದ ತುರ್ತು ಸಮಿತಿಯ ಮುಖ್ಯಸ್ಥ ಮೊಹಮ್ಮದ್ ಅಲ್ ಫರಾ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.












