ಹರ್ಯಾಣ: ಮುದುಡಲಿದೆಯೇ ಕಮಲ? ಚುನಾವಣಾ ವಿಶ್ಲೇಷಣೆ

0
76

ಸನ್ಮಾರ್ಗ ವಾರ್ತೆ

✍️ ಅಮಾನ್ ಕೆ.

ಹರಿಯಾಣ ವಿಧಾನಸಭಾ ಚುನಾವಣೆಯ ಪ್ರಚಾರದ ಕೊನೆಯ ದಿನದಂದು ಬಿಜೆಪಿಗೆ ಭಾರಿ ಆಘಾತವಾಗಿದೆ. ಪರಿಶಿಷ್ಟ ಜಾತಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಮಾಜಿ ಸಿರ್ಸಾ ಲೋಕಸಭಾ ಸದಸ್ಯ ಬಿಜೆಪಿಯ ಅಶೋಕ್ ತನ್ವಾರ್ ಅವರು ರಾಹುಲ್ ಗಾಂಧಿ ಸಮಕ್ಷಮ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಈ ಪಕ್ಷಾಂತರವನ್ನು ನಿರೀಕ್ಷಿಸಿಯೇ ಇರಲಿಲ್ಲ. ಇನ್ನೊಂದು ಕಡೆ ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಪ್ರಚಾರ ಕಣಕ್ಕೆ ಇಳಿದಿದ್ದಾರೆ. ತೋಶಾಮ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ಸಿನ ಅನಿರುದ್ಧ ಚೌಧರಿಗೆ ಮತ ಹಾಕುವಂತೆ ಅವರು ಬಹಿರಂಗ ಭಾಷಣದಲ್ಲಿ ಜನರೊಂದಿಗೆ ವಿನಂತಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಗಳು ಹೋದಲ್ಲೆಲ್ಲ ಜನರಿಂದ ತೀವ್ರ ಪ್ರತಿಭಟನೆಯನ್ನ ಎದುರಿಸುತ್ತಿದ್ದಾರೆ. ರಾದಿಯ ಮತ್ತು ಹಿಸ್ಸಾರ್ ಎಂಬ ಎರಡು ಕ್ಷೇತ್ರಗಳು ಇದಕ್ಕೆ ಇತ್ತೀಚಿನ ಸೇರ್ಪಡೆ. ರಾದಿಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸುನಿತಾ ದುಗ್ಗಲ್ ಅವರು ಚುನಾವಣಾ ಪ್ರಚಾರಕ್ಕೆಂದು ಕ್ಷೇತ್ರಕ್ಕೆ ಹೋಗಿದ್ದರು. ಆದರೆ ಜನರು ಅವರನ್ನು ಪ್ರಶ್ನಿಸಿದ್ದಾರೆ. ಶಂಭೂ ಮತ್ತು ಕನೋರಿ ಗಡಿ ಪ್ರದೇಶದಲ್ಲಿ ರೈತರು ನಡೆಸ್ತಾ ಇರುವ ಹೋರಾಟವನ್ನು ನ್ಯಾಯಯುತ ಎಂದು ನೀವು ಹೇಳಬೇಕು ಎಂದವರು ಒತ್ತಾಯಿಸಿದ್ದಾರೆ. ಹಾಗೆಯೇ ಕನೋರಿ ಗಡಿಯಲ್ಲಿ ಪಂಜಾಬಿನ ರೈತ ಶುಭಕರನ್ ಸಿಂಗ್ ಅವರ ಭತ್ಯೆ ನಡೆಸಿರುವುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ನ ರೈತರು ಈ ಅಗ್ರಹದಲ್ಲಿ ಮುಂದಿದ್ದರು. ದುಗ್ಗಲ್ ಇದಕ್ಕೆ ಸ್ಪಷ್ಟವಾಗಿ ಪ್ರತಿಕ್ರಿಯಿಸಲಿಲ್ಲ. ಜನರು ಸಿಡಿದೆದ್ದರು.ಅವರನ್ನು ಭಾಷಣ ಮಾಡದಂತೆ ತಡೆದು ಓಡಿಸಿದರು.

ಹಿಸ್ಸಾರ್ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಡಾ| ಕಮಲ್ ಗುಪ್ತ ಅವರಿಗೂ ರೈತರಿಂದ ಸಿಕ್ಕಿದ್ದು ಇಂಥದ್ದೇ ಪಾರಿತೋಷಕ. ಸಭೆಯಲ್ಲಿ ಪ್ರಚಾರ ಭಾಷಣ ಮಾಡ್ತಾ ಇದ್ದಾಗ ಜನ್ರು ಚಪ್ಪಲಿ ಎಸೆದರು.

ಅದಂಪುರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಭವ್ಯ ಬಿಶ್ ನೋಯ್ ಅವರನ್ನು ಕಣಕ್ಕಿಳಿಸಿದೆ. ಇವರು ಹಾಲಿ ಎಂಎಲ್ಎ. ಆದರೆ ಮೊನ್ನೆ ಅವರು ಚುನಾವಣಾ ಪ್ರಚಾರಕ್ಕೆಂದು ಹೋದಾಗ ಜನರು ತಿರುಗಿ ಬಿದ್ದರು. ಊರವರು ಮತ್ತು ಇವರ ಬೆಂಬಲಿಗರ ನಡುವೆ ಮಾರಾಮಾರಿ ನಡೆಯಿತು. ಕೊನೆಗೆ ಭಾಷಣ ಮಾಡದೆ ಈ ಭವ್ಯ ಅಲ್ಲಿಂದ ಕಾಲ್ಕಿತ್ತರು.

ಇಂಥದ್ದೇ ಪರಿಸ್ಥಿತಿಯನ್ನು ಬಿಜೆಪಿ ಅಂಬಾಲಾದ ನಾರಾಯಣಘರ್ ನಲ್ಲಿ ಎದುರಿಸಬೇಕಾಯಿತು. ಪವನ್ ಸೈನಿ ಎಂಬ ಬಿಜೆಪಿ ಅಭ್ಯರ್ಥಿಯನ್ನು ಜನರು ಮುತ್ತಿಗೆ ಹಾಕಿದ್ರು. ಜನರು ಕಪ್ಪು ಬಾವುಟ ಪ್ರದರ್ಶಿಸಿದರು. ಬಿಜೆಪಿ ವಿರೋಧಿ ಘೋಷಣೆ ಕೂಗಿದರು. ಎಲ್ಲಿಯವರೆಗೆ ಎಂದರೆ ಕೊನೆಗೆ ಅವರು ತನ್ನ ದಾರಿಯನ್ನೇ ಬದಲಿಸಿ ತಿರುಗಿ ಹೋಗಬೇಕಾಯಿತ್ತು. ಈ ಕ್ಷೇತ್ರದಲ್ಲಿ ಈಗಿನ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಅವರು 2014ರಲ್ಲಿ ಗೆದ್ದಿದ್ದರು.

ಫರೀದಾಬಾದ್ ನ ಬಡಕಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಾನೇಶ್ ಅಡಲ್ಕ ಅವರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಅವರನ್ನು ಜನರು ತಡೆದರು. ಮುತ್ತಿಗೆ ಹಾಕಿದ್ರು. ಘೋಷಣೆ ಕೂಗಿದರು. ಕೊನೆಗೆ ಅವರು ಕೂಡ ದಾರಿ ಬದಲಿಸಿ ಬೇರೆಡೆಗೆ ಹೊರಟು ಹೋಗಬೇಕಾಯಿತು. ಎಲ್ಲಿಯವರೆಗೆ ಎಂದರೆ ಜನರು ಅವರನ್ನು ಕಾರಿನಿಂದ ಹಿಡಿದು ಹೊರಗೆಳೆಯಲು ಪ್ರಯತ್ನಿಸಿದ್ರು. ರಸ್ತೆಯಲ್ಲಿ ನಡೆಯಿರಿ, ಗುಂಡಿಗಳನ್ನು ನೋಡಿ. ಮಳೆಯಲ್ಲಿ ನೆನೆದು ಕ್ಷೇತ್ರದ ರಸ್ತೆಯ ಪರಿಸ್ಥಿತಿಯನ್ನು ನೋಡಿ ಎಂದು ಬಲವಂತ ಪಡಿಸಿದ್ದರು.

ಇದಕ್ಕಿಂತಲೂ ಆಘಾತಕಾರಿ ಏನು ಅಂದರೆ ಬಿಜೆಪಿಯಿಂದ ಆರು ಬಾರಿ ಗೆದ್ದಿರುವ ಮತ್ತು ಗೃಹ ಸಚಿವರಾಗಿರುವ ಅನಿಲ್ ವಿಜ್ ಅವರೇ ಸಾರ್ವಜನಿಕ ಸಭೆಯಲ್ಲಿ ಮಾತಾಡದೆ ಹಿಂತಿರುಗಿ ಹೋಗಬೇಕಾಗಿ ಬಂದದ್ದು. ಭಾರತೀಯ ಕಿಸಾನ್ ಯೂನಿಯನ್ ನ ರೈತರು ಅವರ ವಿರುದ್ಧ ಘೋಷಣೆ ಕೂಗಿದರು. ರೈತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶುಭಕರನ್ ಸಿಂಗ್ ಅವರನ್ನು ಹತ್ಯೆ ಮಾಡಿದ್ದನ್ನು ಪ್ರಶ್ನಿಸಿ ರೈತರು ಅವರ ವಿರುದ್ಧ ಮುತ್ತಿಗೆ ಹಾಕಿದ್ರು. ಕೊನೆಗೆ ಅವರು ಬೇರೆ ದಾರಿ ಕಾಣದೆ ಹೊರಟು ಹೋದರು. ಇದೇ ರೀತಿಯಲ್ಲಿ ಬಿಜೆಪಿ ಸಚಿವ ಕೃಷ್ಣ ಬೇಡಿ ಅವರನ್ನು ಜನರು ತರಾಟೆಗೆತ್ತಿಕೊಂಡು ಮುತ್ತಿಗೆ ಹಾಕಿದ್ದರು.

ಹರಿಯಾಣದಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಮತ್ತು ದುಶ್ಯಂತ ಚೌಟಾಲ ಅವರ ಜೆಜೆಪಿ ಬೇರೆ ಬೇರೆಯಾಗಿಯೇ ಸ್ಪರ್ಧಿಸುತ್ತಿದೆ. ಬಿಜೆಪಿಗೆ ಭರವಸೆ ಇರುವುದು ಈ ಮೂರು ಪಕ್ಷಗಳ ಪ್ರತ್ಯೇಕ ಸ್ಪರ್ಧೆಯ ಮೇಲೆ ಮಾತ್ರ. ಈ ಪಕ್ಷಗಳಿಗೆ ಮತ ಹಂಚಿಕೆಯಾದರೆ ತನ್ನ ಅಭ್ಯರ್ಥಿ ಗೆಲ್ಲಬಹುದು ಎಂಬ ಸಣ್ಣ ನಿರೀಕ್ಷೆ ಬಿಜೆಪಿಯಲ್ಲಿದೆ. ಅದರ ಹೊರತಾಗಿ ಈ ಚುನಾವಣೆಯಲ್ಲಿ ಗೆಲ್ಲುವ ಬಹುತೇಕ ಆಸೆಯನ್ನು ಬಿಜೆಪಿ ಕೈ ಬಿಟ್ಟಿದೆ.

ಇದಕ್ಕೆ ಒಂದು ಕಾರಣ ಜಾಟ್ ಸಮುದಾಯ ಬಿಜೆಪಿಯೊಂದಿಗೆ ಮುನಿಸಿಕೊಂಡಿರುವುದು. ಇನ್ನೊಂದು ರೈತ ಪ್ರತಿಭಟನೆಯನ್ನು ನಿರ್ಲಕ್ಷಿಸಿದ್ದು. ಅದರ ಜೊತೆಗೆ ಕುಸ್ತಿಪಟುಗಳ ಬಗ್ಗೆ ಬಿಜೆಪಿ ಅತ್ಯಂತ ಅನ್ಯಾಯವಾಗಿ ನಡಕೊಂಡಿರುವುದು ಕೂಡ ಬಿಜೆಪಿಗೆ ಇದೀಗ ಮುಳುವಾಗಿ ಪರಿಣಮಿಸಿದೆ. ಈ ಪರಿಸ್ಥಿತಿಯನ್ನು ಕಾಂಗ್ರೆಸ್ ಅತ್ಯಂತ ಬುದ್ದಿವಂತಿಕೆಯಿಂದ ಬಳಸಿಕೊಳ್ಳುತ್ತಿರುವುದು ಕೂಡ ಮಾಧ್ಯಮಗಳ ವರದಿಯಿಂದ ತಿಳಿದು ಬರುತ್ತಿದೆ. ಮುಖ್ಯವಾಗಿ ವಿನೇಶ್ ಪೊಗಟ್ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದ್ದು ಅತ್ಯಂತ ಬುದ್ಧಿವಂತಿಕೆಯ ನಡೆ ಎಂದು ಹೇಳಲಾಗುತ್ತಿದೆ. ಅವರ ಜೊತೆಗೆ ಇತರ ಕುಸ್ತಿಪಟುಗಳು ಕಾಂಗ್ರೆಸ್ ನ ಬೆಂಬಲಕ್ಕೆ ನಿಂತಿದ್ದಾರೆ.

ಇನ್ನೊಂದು ಕಡೆ ವೀರೇಂದ್ರ ಸೆಹ್ವಾಗ್ ಅವರೇ ಕಾಂಗ್ರೆಸ್ ಪರ ಬ್ಯಾಟ್ ಬೀಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ 10ರಲ್ಲಿ 10 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಕೇವಲ ಐದನ್ನು ಮಾತ್ರ ಗೆದ್ದಿರುವುದು ಕೂಡ ಬಿಜೆಪಿಯ ವಿರುದ್ಧ ಜನರ ಆಕ್ರೋಶದ ಮಟ್ಟವನ್ನು ಹೇಳುತ್ತದೆ.

ಅಕ್ಟೋಬರ್ ಎಂಟರ ಮತ ಎಣಿಕೆಗಿಂತಲೂ ಮೊದಲೇ ಬಿಜೆಪಿ ಶಸ್ತ್ರಾಸ್ತ್ರ ಕೆಳಗಿಟ್ಟಂತೆ ಕಾಣಿಸುತ್ತಿದೆ.