ಆಸ್ಪತ್ರೆಯ ಈ ವಾರ್ಡ್ ಗಳಿಗೆ ನೀವು ಭೇಟಿ ನೀಡಿದ್ದೀರಾ?

0
228

ಸನ್ಮಾರ್ಗ ವಾರ್ತೆ

ಎನ್.ಎಂ. ಪಡೀಲ್

ಮುಆದುಬ್ನು ರಿಫಾಅ(ರ) ತನ್ನ ತಂದೆಯಿಂದ ಉದ್ಧರಿಸಿರುವರು: ಅವರು ಹೇಳಿದರು; ಅಬೂಬಕರ್ ಸಿದ್ದೀಕ್(ರ) ಮಿಂಬರ್ ಹತ್ತಿದರು. ಬಳಿಕ ಅಳುತ್ತಾ ಹೇಳಿದರು: ಹಿಜಿರಾ ಒಂದನೇ ವರ್ಷ ಪ್ರವಾದಿ(ಸ)ರು ತಮ್ಮನ್ನು ಉದ್ದೇಶಿಸಿ ಮಾತನಾಡಲು (ಇದೇ ರೀತಿ) ಎದ್ದು ನಿಂತರು. ನಂತರ ಅವರು ಅತ್ತರು. ಬಳಿಕ ಪ್ರವಾದಿ(ಸ)ರು ಹೇಳಿದರು: “ನೀವು ಅಲ್ಲಾಹನೊಂದಿಗೆ ಕ್ಷಮೆ ಮತ್ತು ಸಂಪೂರ್ಣ ಆರೋಗ್ಯವನ್ನು ಬೇಡಿರಿ. ದೃಢವಾದ ವಿಶ್ವಾಸದ ಬಳಿಕ ಸಂಪೂರ್ಣ ಆರೋಗ್ಯದಂತಹ ಅನುಗ್ರಹ ಯಾರಿಗೂ ನೀಡಲಾಗಿಲ್ಲ.”

ಆರೋಗ್ಯ ಎಂಬುದು ಅಲ್ಲಾಹನು ನಮಗೆ ನೀಡಿರುವ ಒಂದು ದೊಡ್ಡ ಅನುಗ್ರಹವಾಗಿದೆ. ಇಹಲೋಕಕ್ಕೆ ಸಂಬಂಧಿಸಿದ ಅನುಗ್ರಹಗಳಲ್ಲಿ ಆರೋಗ್ಯಕ್ಕಿಂತ ಮಹತ್ತರವಾದ ಬೇರೆ ಅನುಗ್ರಹ ಇರಲು ಸಾಧ್ಯವಿಲ್ಲ. ಜೀವನದಲ್ಲಿ ಎಲ್ಲವೂ ಇದ್ದು, ಆರೋಗ್ಯ ಮಾತ್ರ ಇಲ್ಲದಿದ್ದರೆ ಅದನ್ನು ಅನುಭವಿಸಲು ನಮಗೆ ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಏನೂ ಇಲ್ಲದಿದ್ದರೂ ಆರೋಗ್ಯವೊಂದಿದ್ದರೆ ಅದೇ ದೊಡ್ಡ ಅನುಗ್ರಹವಾಗುತ್ತದೆ.

ಆರೋಗ್ಯ ಎಂಬ ಅನುಗ್ರಹದ ಗಂಭೀರತೆ ನಮಗೆ ಮುಖ್ಯವಾಗಿ ಎರಡು ಸಂದರ್ಭಗಳಲ್ಲಿ ಮನವರಿಕೆಯಾಗುತ್ತದೆ. ಒಂದು, ಆರೋಗ್ಯ ನಷ್ಟವಾಗಿ ಅನಾರೋಗ್ಯದಿಂದ ಚಡಪಡಿಸುವಾಗ ಅದುವರೆಗೆ ಅನುಭವಿಸಿದ ಆರೋಗ್ಯದ ಬೆಲೆ ಅರ್ಥವಾಗುತ್ತದೆ. ಇನ್ನೊಂದು, ಆರೋಗ್ಯವನ್ನು ಕಳೆದುಕೊಂಡು ಜೀವನ ದುಸ್ತರವಾದ ಇತರ ವ್ಯಕ್ತಿಗಳನ್ನು ನೋಡುವಾಗ ಆರೋಗ್ಯವೆಂಬ ಅನುಗ್ರಹದ ಅರಿವಾಗುತ್ತದೆ.

ಆರೋಗ್ಯವಿರುವಾಗ ನಮ್ಮಲ್ಲಿ ಅಧಿಕ ಮಂದಿ ಆ ಕುರಿತು ನಿರ್ಲಕ್ಷ್ಯರಾಗಿರುತ್ತಾರೆ. ಅದಕ್ಕಾಗಿಯೇ ಪ್ರವಾದಿಯವರು(ಸ) ಹೇಳಿದ್ದಾರೆ: “ಎರಡು ಅನುಗ್ರಹದ ವಿಷಯದಲ್ಲಿ ಅಧಿಕ ಮಂದಿ ನಿರ್ಲಕ್ಷ್ಯರಾಗಿರುತ್ತಾರೆ? ಅಂತಹವರು ನಷ್ಟಹೊಂದಿದವರು. ಅದು ಆರೋಗ್ಯ ಮತ್ತು ಬಿಡುವಿನ ವೇಳೆ.

ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ವಾರ್ಡ್ ಗಳನ್ನು, ಡಯಾಲಿಸಿಸ್ ಸೆಂಟರ್‌ಗಳನ್ನು ಸಂದರ್ಶಿಸುವಾಗ ಮಾರಕ ರೋಗ ಪೀಡಿತರಾಗಿ ನೋವನುಭವಿಸುವ ಹಲವಾರು ಜನರನ್ನು ಕಾಣಲು ಸಾಧ್ಯವಾಗುತ್ತದೆ. ಜೀವನದಲ್ಲಿ ಬೇರೇನೂ ಇಲ್ಲದಿದ್ದರೂ ಪರವಾಗಿಲ್ಲ, ಆರೋಗ್ಯ ಮರಳಿ ದೊರೆತರೆ ಸಾಕು ಎಂದು ಅವರು ಆಗ್ರಹಿಸುತ್ತಿರುತ್ತಾರೆ. ಬದುಕಿರುವ ವರೆಗೆ ಆರೋಗ್ಯದಿಂದ ಬದುಕಲು ಸಾಧ್ಯವಾದರೆ ಸಾಕು ಎಂದು ಆ ದೃಶ್ಯಗಳನ್ನು ಕಾಣುವಾಗ ನಾವು ಹೇಳಿ ಬಿಡುತ್ತೇವೆ.

ಹೊಸ ಕಾಲ, ಹೊಸ ಲೋಕ, ಎಲ್ಲವೂ ಬದಲಾಣೆಯಾಗುತ್ತಾ ಇದೆ. ಆಹಾರ ಶೈಲಿ, ದುಡಿಮೆ, ನಿದ್ದೆಯ ಸಮಯ ಎಲ್ಲದರಲ್ಲೂ ಬದಲಾವಣೆ ಸಂಭವಿಸುತ್ತಲೇ ಇದೆ. ಅಸಂತುಲಿತವಾದ ಜೀವನ ಶೈಲಿಯ ಕಾರಣದಿಂದ ಹಲವರು ದೈಹಿಕ ಕ್ಷಮತೆಯನ್ನು ಕಳೆದುಕೊಳ್ಳುತ್ತಾರೆ. ರೋಗಗಳು ಹೆಚ್ಚಾಗುತ್ತದೆ. ಯೌವನದಲ್ಲಿಯೇ ಶರೀರವು ದುರ್ಬಲವಾಗುತ್ತದೆ. ಒಬ್ಬ ವ್ಯಕ್ತಿಯ ದೇಹ ಮತ್ತು ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಬಹುದು. ಆರೋಗ್ಯವೆಂದರೆ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿಯೂ ಹೌದು. ಕೇವಲ ರೋಗ ಬಾಧೆಗಳ ಗೈರು ಹಾಜರಿ ಮಾತ್ರ ಅಲ್ಲ ಎಂಬುದನ್ನೂ ನಾವು ತಿಳಿದಿರಬೇಕು.

ಆರೋಗ್ಯವನ್ನು ಕಾಪಾಡಲು ಮತ್ತು ಉತ್ತಮ ಪಡಿಸಲು ದೈನಂದಿನ ಜೀವನದಲ್ಲಿ ಹಲವು ಶಿಷ್ಟಾಚಾರಗಳನ್ನು ಇಸ್ಲಾಮ್ ನಿರ್ದೇಶಿಸಿದೆ. ಆಹಾರ, ನಿದ್ದೆ, ವ್ಯಾಯಾಮ, ಶುಚಿತ್ವ, ಮನರಂಜನೆ. ಇದು ಈ ಐದು ವಿಷಯಗಳಿಗೆ ಸಂಬಂಧಿಸಿದೆ.
ಆದ್ದರಿಂದ ಸಮತೋಲನವಾದ ಆಹಾರ, ಹಿತಮಿತವಾದ ನಿದ್ದೆ, ನಿಯಮಿತ ವ್ಯಾಯಾಮ ದೇಹ ಮತ್ತು ಪರಿಸರದ ಶುಚಿತ್ವ ಹಾಗೂ ಮನಸ್ಸಿಗೆ ಆನಂದ, ಸಾಂತ್ವನ ನೀಡುವಂತಹ ಮನೋರಂಜನೆಗಳು ಆರೋಗ್ಯಕ್ಕೆ ಅತಿ ಅಗತ್ಯವಾಗಿದೆ.

ಆದ್ದರಿಂದ ಪ್ರವಾದಿ(ಸ)ರು ಈ ಹದೀಸ್‌ನಲ್ಲಿ ಅಲ್ಲಾಹನೊಂದಿಗೆ ಕ್ಷಮೆಯನ್ನು ಬೇಡುವುದರೊಂದಿಗೆ ಆರೋಗ್ಯಪೂರ್ಣ ಜೀವನಕ್ಕಾಗಿಯೂ ಪ್ರಾರ್ಥಿಸಬೇಕು ಎಂದು ತಿಳಿಸಿದ್ದಾರೆ. ರೋಗಗಳು ಬರದಂತೆ ಬಹಳ ಜಾಗ್ರತೆಯಿಂದ ನಮ್ಮ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕು. ಯಾವಾಗಲೂ ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಂಡು ಆಲಸಿಗಳಾಗದೆ ಆರೋಗ್ಯವಂತರಾಗಿರಲು ಪ್ರಯತ್ನಿಸಬೇಕು.