ಹಣ್ಣು ಹಂಪಲಿನ ಗಾಡಿ ಇಟ್ಟು ಆತ ಹೋಗುತ್ತಿದ್ದ…

0
52

ಸನ್ಮಾರ್ಗ ವಾರ್ತೆ

✍️ಅನು: ಸಾದಿಕ್ ಪಳ್ಳಿಕೆರೆ

ಒಂದು ಬೋರ್ಡ್. ಅದು ಅಳುವಂತೆ ಮಾಡುವ ಬೋರ್ಡ್. ತಳ್ಳುಗಾಡಿಯಲ್ಲಿ ಹಣ್ಣು ಹಂಪಲುಗಳನ್ನು ಜೋಡಿಸಿ ಇಡಲಾಗಿತ್ತು. ಅದರ ಬೆಲೆಗಳ ಜೊತೆಗೇ ಒಂದು ರಟ್ಟಿನಲ್ಲಿ ಈ ರೀತಿ ಬರೆದಿಡಲಾಗಿತ್ತು- ವಯಸ್ಸಾದ ನನ್ನ ತಾಯಿ ಒಬ್ಬಂಟಿಯಾಗಿ ಮನೆಯಲ್ಲಿದ್ದಾಳೆ. ತಾಯಿಯ ಆರೈಕೆ ಮಾಡಲಿಕ್ಕಾಗಿ ನನಗೆ ಆಗಾಗ ಮನೆಗೆ ಹೋಗಬೇಕಾಗುತ್ತದೆ. ನಿಮಗೆ ಅವಸರವಿದ್ದರೆ ಅಗತ್ಯವಿರುವುದನ್ನು ತೆಗೆದು ಹಣವನ್ನು ಬದಿಯಲ್ಲಿರುವ ಸಣ್ಣ ಪೆಟ್ಟಿಗೆಯಲ್ಲಿ ಹಾಕಿರಿ. ನಿಮ್ಮ ಕೈಯಲ್ಲಿ ಹಣವಿಲ್ಲದಿದ್ದರೆ ನನ್ನ ವತಿಯಿಂದ ಅಗತ್ಯವಿರುವುದನ್ನು ತೆಗೆದುಕೊಳ್ಳಿರಿ.

ಅವನು ಆಚೆ ಈಚೆ ನೋಡಿ ಆರೆಂಜ್ ಮತ್ತು ನೇಂದ್ರ ಬಾಳೆಹಣ್ಣನ್ನು ತಕ್ಕಡಿಯಲ್ಲಿ ಹಾಕಿದ. ಹಣವನ್ನು ಹಾಕಲಿಕ್ಕಾಗಿ ಪೆಟ್ಟಿಗೆಯನ್ನು ತೆರೆದು ನೋಡಿದ. ಅದರಲ್ಲಿ 50ರ ಮತ್ತು ನೂರುಗಳ ನೋಟುಗಳಿದ್ದವು. ಇತರ ನೋಟುಗಳೂ ಇದ್ದವು. ಆತ ವಸ್ತುಗಳನ್ನು ತೂಕ ಮಾಡಿ ಲೆಕ್ಕವನ್ನು ಹಾಕಿ ಹಣವನ್ನು ಪೆಟ್ಟಿಗೆಯಲ್ಲಿ ಹಾಕಿದ. ಬಳಿಕ ಮನೆಗೆ ತಲುಪಿದಾತ ನಾನೀಗ ಬರುತ್ತೇನೆಂದು ತಮ್ಮನೊಂದಿಗೆ ಹೇಳಿ ಹೊರಟ. ಮರಳಿ ಬಂದ ಮೇಲೆ ತಮ್ಮ’ಈ ರೀತಿ ಕೇಳಿದ, ನೀನು ಎಲ್ಲಿಗೆ ಹೋಗಿದ್ದೆ? ನಾನು ಒಬ್ಬರಿಗೆ ಒಂದು ವಸ್ತುವನ್ನು ಕೊಡಲು ಹೋದೆ. ನಂತರ ಅವನು ಹೇಳಿದ, ನಮಗೆ ಸ್ವಲ್ಪ ಸಮಯದ ನಂತರ ಒಂದು ಕಡೆ ಹೋಗಬೇಕು. ನಾನು ನಿನಗೆ ಒಬ್ಬರನ್ನು ತೋರಿಸುತ್ತೇನೆ. ಸಂಜೆಯಾದ ಬಳಿಕ ಆತ ತಮ್ಮನನ್ನು ಕರೆದುಕೊಂಡು ಮಾರ್ಕೆಟ್‌ಗೆ ಹೋದ. ಆ ತಳ್ಳುಗಾಡಿಯ ಸ್ವಲ್ಪ ದೂರ ನಿಂತು ವೀಕ್ಷಿಸುತ್ತಿದ್ದ. ಸ್ವಲ್ಪ ಕಳೆದ ಮೇಲೆ ಅಲ್ಲಿಗೆ ಮಧ್ಯ ವಯಸ್ಕರೊಬ್ಬರು ಆಗಮಿಸಿದರು. ಅವರ ಗಡ್ಡ ಅರ್ಧದಷ್ಟು ಬಿಳಿಯಾಗಿತ್ತು. ಲುಂಗಿ ಮತ್ತು ಉದ್ದವಾದ ಅಂಗಿಯೊಂದನ್ನು ಧರಿಸಿದ್ದರು. ಅವರು ತಳ್ಳುಗಾಡಿಯನ್ನು ಎಳೆದುಕೊಂಡು ಹೋಗಲು ತಯಾರಿ ನಡೆಸುತ್ತಿದ್ದರು. ಇವರು ಅವರಲ್ಲಿಗೆ ನಡೆದರು. ಇವರನ್ನು ಕಂಡು ಮುಗುಳ್ನಗುತ್ತಾ ಅವರು ಹೇಳಿದರು, ತಮ್ಮ ಹೆಸರೇನು’.

‘ನನ್ನ ಹೆಸರು ಹುಸೇನ್’. ನಿಮ್ಮ ಮತ್ತು ತಳ್ಳುಗಾಡಿಯ ಕಥೆ ಏನು? ತಳ್ಳುಗಾಡಿ ಎಳೆಯುತ್ತಾ ಅವರು ಹೇಳಿದರು. ಸರ್. ಕಳೆದ ಆರು ವರ್ಷಗಳಿಂದ ನನ್ನ ತಾಯಿ ಹಾಸಿಗೆ ಹಿಡಿದಿದ್ದಾರೆ. ಅವರಿಗೆ ಏನು ಮಾಡಲು ಆಗುವುದಿಲ್ಲ. ಮಾನಸಿಕವಾಗಿಯೂ ಅವರಿಗೆ ತೊಂದರೆಗಳಿವೆ. ನನ್ನ ತಾಯಿಗೆ ನಾನೊಬ್ಬನೇ ಮಗ. ನನಗೆ ಮಕ್ಕಳು ಇಲ್ಲ. ನನ್ನ ಹೆಂಡತಿ ಮರಣ ಹೊಂದಿದ್ದಾಳೆ. ತಾಯಿ ಹಾಸಿಗೆ ಹಿಡಿದ ಮೇಲೆ ಎಲ್ಲರೂ ಕೂಡ ವಿವಾಹವಾಗುವಂತೆ ಒತ್ತಾಯಿಸುತ್ತಿದ್ದರು. ಆದರೆ ನಾನು ಮದುವೆಯಾಗಲಿಲ್ಲ. ನನಗೆ ಭಯವಿದೆ. ಅವರು ನನ್ನ ತಾಯಿಯನ್ನು ಗಮನಿಸದಿದ್ದರೆ ಏನು ಮಾಡುವುದು? ತಾಯಿಯ ಆರೈಕೆ ನಾನೇ ಮಾಡುತ್ತಿದ್ದೇನೆ. ಇನ್ನು ಬೋರ್ಡಿನ ಕಥೆ ಹೇಳುವುದಾದರೆ ತಾಯಿ ಹಾಸಿಗೆ ಹಿಡಿದಳು. ಸ್ವಲ್ಪ ದಿನಗಳ ನಂತರ ನಾನು ಒಮ್ಮೆ ತಾಯಿಯ ಕಾಲುಗಳನ್ನ ಒತ್ತುತ್ತಿದ್ದೆ. ಆ ಸಂದರ್ಭದಲ್ಲಿ ತಾಯೊಂದಿಗೆ ಹೇಳಿದೆ, ಯಾವುದಾದರೂ ಕೆಲಸಕ್ಕೆ ಹೋಗಬೇಕೆಂದಿದ್ದೇನೆ. ಕೈಯಲ್ಲಿ ಏನೂ ಇಲ್ಲ.
ತಾಯಿಯಾದರೋ ಎಲ್ಲಿಗೂ ಹೋಗಲು ಒಪ್ಪುವುದಿಲ್ಲ. ತಾಯಿಯ ಬಳಿ ಯಾರೂ ಇಲ್ಲದಿದ್ದರೆ ತಾಯಿಗೆ ಹೆದರಿಕೆಯಾಗುತ್ತದೆಂದು ಹೇಳುತ್ತಾರೆ.

ಅಮ್ಮ, ನಾನು ಏನು ಮಾಡಲಿ? ನಡುಗುವ ಕೈಯನ್ನು ಮೇಲಕ್ಕೆತ್ತಿದರು. ಕಣ್ಣುಗಳು ತೇವಗೊಂಡಿದ್ದವು. ಅಮ್ಮ ಪ್ರಾರ್ಥಿಸುತ್ತಿರುವಂತೆ ಭಾಸವಾಯಿತು.

ಪ್ರಾರ್ಥನೆಯ ಬಳಿಕ ಅಮ್ಮ ಹೇಳಿದರು, ನೀನು ತಳ್ಳುಗಾಡಿಯಲ್ಲಿ ಹಣ್ಣು ಹಂಪಲುಗಳನ್ನು ತುಂಬಿಸಿ ಪೇಟೆಯಲ್ಲಿ ಇಡು. ಅದರ ಬೆಲೆಯನ್ನು ಬೋರ್ಡಿನಲ್ಲಿ ಬರೆದಿಡು. ರಾತ್ರಿಯಾದೊಡನೆ ತೆಗೆದು ಕೊಂಡು ಬಾ. ಅಲ್ಲಾಹನು ನಮ್ಮನ್ನು ನಿರಾಶೆಗೊಳಿಸಲಾರನು.

ನಾನು ಹೇಳಿದೆ, ಅಮ್ಮ, ನೀವು ಏನು ಹೇಳುತ್ತಿದ್ದೀರಿ? ಹಾಗೆ ಇಟ್ಟರೆ ಹಣ್ಣು ಹಂಪಲುಗಳು ಖಾಲಿಯಾಗಬಹುದು. ಹಣವೂ ಇರಲಿಕ್ಕಿಲ್ಲ. ಹಾಗೆ ಮಾಡಲು ಯಾರು ಸಿದ್ಧರಾಗುತ್ತಾರೆ ಅಮ್ಮ.

ಆಗ ಅಮ್ಮ ಈ ರೀತಿ ಹೇಳಿದರು, ನೀನು ನಾನು ಹೇಳುವುದನ್ನು ಕೇಳು? ನನ್ನನ್ನು ಅನುಸರಿಸಿದರೆ ಸಾಕು. ನಿನಗೇನು ನಷ್ಟವಾಗದು.

ಅಮ್ಮ ಹಾಗೇ ಹೇಳಿ ಆರು ವರ್ಷವಾಯಿತು ಅಮ್ಮ ಹೇಳಿದಂತೆ ಮುಂಜಾನೆಯಾದಾಗ ಹಣ್ಣು ಹಂಪಲುಗಳನ್ನು ತುಂಬಿ ತಳ್ಳುಗಾಡಿಯನ್ನು ಪೇಟೆಯಲ್ಲಿ ಇಡುತ್ತೇನೆ. ರಾತ್ರಿಯಾದಾಗ ತಳ್ಳುಗಾಡಿಯನ್ನು ತೆಗೆದುಕೊಂಡು ಬರುತ್ತೇನೆ. ಇದೇ ವ್ಯಾಪಾರವನ್ನು ಮಾಡುವ ಒಬ್ಬ ಸಹೋದರ ಎಲ್ಲಾ ದಿನವೂ ನನಗೆ ಅಗತ್ಯ ಇರುವ ಹಣ್ಣು ಹಂಪಲುಗಳನ್ನು ಮಾರ್ಕೆಟ್‌ನಿಂದ ತಂದುಕೊಡುತ್ತಾನೆ.

ಯಾವಾಗಲೂ ಲೆಕ್ಕ ಮಾಡಿ ನೋಡಿದರೆ ಹಣ ಹೆಚ್ಚೇ ಇರುತ್ತದೆ. ಜನರು ಹಣ್ಣು ಹಂಪಲಿನ ಬೆಲೆಗಿಂತ ದುಪ್ಪಟ್ಟು ಹಣವನ್ನು ಆ ಪೆಟ್ಟಿಗೆಯಲ್ಲಿ ಹಾಕುತ್ತಿದ್ದರು. ಕೆಲವೊಂದು ದಿನ ಪೆಟ್ಟಿಗೆಯಲ್ಲಿ ತುಂಡು ಕಾಗದಗಳಿರುತ್ತಿದ್ದವು. ಆ ಕಾಗದದಲ್ಲಿ ಅಮ್ಮನೊಡನೆ ಪ್ರಾರ್ಥಿಸಲು ವಿನಂತಿಸಬೇಕೆಂದು ಬರೆಯಲಾಗಿತ್ತು. ಕೆಲವು ದಿನಗಳ ಮುಂಚೆ ಯಾರೋ ಒಬ್ಬರು ಆಹಾರದ ಪೊಟ್ಟಣವೊಂದನ್ನು ಇಟ್ಟು ಹೋಗಿದ್ದರು. ಅದರಲ್ಲಿ ಹೀಗೆ ಬರೆಯಲಾಗಿತ್ತು, ಪ್ರೀತಿಯ ತಾಯಿ ಮತ್ತು ಮಗನಿಗೆ.
ಮಾರನೆಯ ದಿನ ಮೊಬೈಲ್ ನಂಬರ್ ಬರೆದ ಕಾಗದವೊಂದಿತ್ತು. ಅದರಲ್ಲಿ ಈ ರೀತಿ ಬರೆಯಲಾಗಿತ್ತು, ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾದರೆ ಈ ನಂಬರಲ್ಲಿ ಡಯಲ್ ಮಾಡಿರಿ. ನಾನು ಕರೆದುಕೊಂಡು ಹೋಗುತ್ತೇನೆ.

ಮರುದಿನ ಮೆಡಿಕಲ್ ಅಂಗಡಿಯಾತ ಮೊಬೈಲ್ ನಂಬರ್ ಬರೆದಿಟ್ಟಿದ್ದ. ತಾಯಿಗೆ ಔಷಧಿ ಅಗತ್ಯವಿದ್ದರೆ ಈ ನಂಬರಿಗೆ ಡಯಲ್ ಮಾಡಿ ಎಂದು ಬರೆಯಲಾಗಿತ್ತು. ನೀವು ಹಣವೇನೂ ನೀಡುವುದು ಬೇಡ, ನಾನು ತಲುಪಿಸುತ್ತೇನೆ ಎಂದು ಬರೆಯಲಾಗಿತ್ತು.

ಮರುದಿನ ತಾಯಿಗೆ ಕೊಡಬೇಕೆಂದು ಒಂದು ಸೀರೆಯನ್ನು ಯಾರೋ ಇಟ್ಟು ಹೋಗಿದ್ದರು. ಹೀಗೆ ಒಂದೊಂದು ದಿವಸವು ಏನಾದರೂ ಒಂದು ಅಲ್ಲಿರುತ್ತಿತ್ತು…

ಆ ವ್ಯಾಪಾರಸ್ಥ ಹೇಳುವುದನ್ನು ನಿಲ್ಲಿಸಿದನು ಮತ್ತು ಹೇಳಿದನು, ಇದು ನೋಡಿ ಸರ್, ಇವತ್ತು ಯಾರೋ ಒಬ್ಬರು ತಂದಿಟ್ಟದ್ದು ಇದು. ಉತ್ಕೃಷ್ಟ ದರ್ಜೆಯ ಖರ್ಜೂರ. ರಮಝಾನ್ ಆಗಿದ್ದರಿಂದ ಇಟ್ಟು ಹೋಗಿದ್ದಾರಷ್ಟೆ ಎಂದು ಹೇಳಿದರು.
(ಮೂಲ: ಮಲಯಾಳಮ್)