ಹಿಜಾಬ್ ಒಂದು ರಕ್ಷಾ ಕವಚ

0
468

ಖದೀಜ ನುಸ್ರತ್ ಅಬುಧಾಬಿ

ಭಾರತವು ಒಂದು ಬಹುಸಂಸ್ಕೃತಿಯ ಜಾತ್ಯತೀತ ರಾಷ್ಟ್ರವಾಗಿದೆ. ಪ್ರತಿಯೊಂದು ಧರ್ಮ ಮತ್ತು ಸಮುದಾಯಕ್ಕೂ ಅದರದ್ದೇ ಆದ ವಸ್ತ್ರಧಾರಣೆ, ಆಚಾರ, ವಿಚಾರ, ಆರಾಧನಾ ವಿಧಿಗಳಿವೆ. ಭಾರತದ ಪ್ರತಿಯೊಂದು ಪ್ರಜೆಗೊ ತನಗೆ ಇಷ್ಟವಿರುವ ಧರ್ಮವನ್ನು ಆಯ್ಕೆ ಮಾಡುವ, ಇಷ್ಟವಿರುವ ಆಹಾರವನ್ನು ಸೇವಿಸುವ, ಇಷ್ಟವಿರುವ ಉಡುಪನ್ನು ಧರಿಸುವ ಮತ್ತು ಧರ್ಮದ ಎಲ್ಲಾ ಆದೇಶಗಳನ್ನು ಅನುಸರಿಸಿಕೊಂಡು ವಿದ್ಯಾಭ್ಯಾಸ ಪಡೆಯುವ ಹಕ್ಕು ಸಂವಿಧಾನ ನೀಡಿದೆ.

ಹಿಜಾಬ್ ಧರಿಸಬೇಕೆಂಬುದು ಸತ್ಯ ವಿಶ್ವಾಸಿನಿಯರಿಗೆ ಅಲ್ಲಾಹನ ಆದೇಶವಾಗಿದೆ ಮತ್ತು ಅದು ಸ್ತ್ರೀಯರ ಸತ್ಯ ವಿಶ್ವಾಸದ ಭಾಗವಾಗಿದೆ. ಇದು ಸ್ತ್ರೀಯರಿಗೆ ಅಭಿಮಾನ, ಗೌರವ ಮತ್ತು ರಕ್ಷಾ ಕವಚವಾಗಿದೆ. ಸ್ತ್ರೀಯರ ಶರೀರವನ್ನು ವಸ್ತ್ರ ಧರಿಸಿ ಮುಚ್ಚಬೇಕೆಂಬುದು ಪ್ರಕೃತಿ ಧರ್ಮವಾಗಿದೆ. ಅತ್ಯುತ್ತಮವಾಗಿ ವಸ್ತ್ರಧಾರಣೆ ಮಾಡುವುದು ದೇವನಿಷ್ಠೆಯ ಚಿಹ್ನೆಯಾಗಿದೆ. ಇನ್ನೊಬ್ಬರ ಕೆಟ್ಟ ದೃಷ್ಟಿ, ಕೆಟ್ಟ ಆಲೋಚನೆ, ಪ್ರಲೋಭನೆಗಳು ಸ್ತ್ರಿಯರು ತಮ್ಮ ಶರೀರವನ್ನು ಸರಿಯಾಗಿ ಮುಚ್ಚದಿರುವುದರಿಂದ ಉಂಟಾಗುವ ಅನಾಹುತಗಳಾಗಿರುತ್ತದೆ. ಇಂತಹ ಅನಾಹುತ ಮತ್ತು ಕ್ಷೋಭೆಗಳಿಂದ ರಕ್ಷಿಸಿ ತನ್ನ ಮಾನ ಮತ್ತು ಗೌರವವನ್ನು ಕಾಪಾಡುವುದೇ ಹಿಜಾಬ್ ನ ಉದ್ದೇಶ.

“ಪೈಗಂಬರರೇ ತಮ್ಮ ಪತ್ನಿಯರೊಡನೆಯೂ ಪುತ್ರಿಯರೊಡನೆಯೂ ಸತ್ಯವಿಶ್ವಾಸಿನಿಯರೊಡನೆಯೂ ತಮ್ಮ ಮೇಲೆ ತಮ್ಮ ಚಾದರಗಳ ಸೆರಗನ್ನು ಇಳಿಸಿಕೊಳ್ಳಬೇಕೆಂದು ಹೇಳಿಬಿಡಿರಿ. ಅವರು ಗುರುತಿಸಲ್ಪಡುವಂತಾಗಲಿಕ್ಕೂ ಸತಾಯಿಸಲ್ಪಡದಿರಲಿಕ್ಕೂ ಇದು ಹೆಚ್ಚು ಸೂಕ್ತವಾದ ವಿಧಾನ. ಅಲ್ಲಾಹ್ ಅತ್ಯಂತ ಕ್ಷಮಾಶೀಲನೂ ಕರುಣಾಳುವೂ ಆಗಿರುತ್ತಾನೆ.” (ಸೂರ ಅಲ್ ಅಹ್ ಝಾಬ್ : 59)

ಸ್ತ್ರೀಯ ಮುಖ ಮತ್ತು ಕೂದಲಿನಲ್ಲಿ ಸೌಂದರ್ಯದ ರಹಸ್ಯಗಳು ಅಡಗಿರುತ್ತದೆ ಎಂದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಶಿರವಸ್ತ್ರದ ಉದ್ದೇಶ ಸೌಂದರ್ಯ, ಅಲಂಕಾರ ಮತ್ತು ಶರೀರದ ಭಾಗಗಳನ್ನು ಪರಪುರುಷರಿಂದ ಮರೆಸುವುದಾಗಿದೆ. ಹಿಜಾಬ್ ಎಂಬುದು ತಲೆಗೆ ಸುತ್ತಿಕೊಳ್ಳುವ ಕೇವಲ ಒಂದು ತುಂಡು ಬಟ್ಟೆ ಮಾತ್ರವಲ್ಲ, ಶಿರವಸ್ತ್ರವು ತಮ್ಮ ಶರೀರದಲ್ಲಿ ಇನ್ನೊಬ್ಬರಿಗೆ ಆಕರ್ಷಿತವಾಗುವ ಕುತ್ತಿಗೆ, ಎದೆಯ ಎಲ್ಲಾ ಭಾಗಗಳನ್ನು ಮರೆಸುವಂತದ್ದಾಗಿದೆ.
“…..ಅವರು (ಮಹಿಳೆಯರು)ತಮ್ಮ ಶಿರವಸ್ತ್ರಗಳನ್ನು ತಮ್ಮ ಎದೆಗಳ ಮೇಲೆ ಎಳೆದುಕೊಳ್ಳಲಿ….”(ಅನ್ನೂರ್ :31)

ಧಾರ್ಮಿಕ ವಿಧಿಗಳನ್ನು ಅನುಸರಿಸುತ್ತಾ ಯಾವುದೇ ಪ್ರದೇಶದ ಸಂಸ್ಕೃತಿ ಹಾಗೂ ಹವಾಮಾನಕ್ಕೆ ಅನುಗುಣವಾಗಿ ವಸ್ತ್ರಗಳನ್ನು ಧರಿಸಬಹುದಾಗಿದೆ. ಇದು ಉತ್ತಮ ನಾಗರೀಕತೆಯ ಪ್ರತೀಕ ಹಾಗೂ ಉನ್ನತ ಸಂಸ್ಕೃತಿಯಾಗಿದೆ. ದೇಹದ ಆಕೃತಿ, ಉಬ್ಬುತಗ್ಗುಗಳು ಕಾಣುವಂತಹ ಮತ್ತು ಒಳಗಿನಿಂದ ತನ್ನ ಸೌಂದರ್ಯವನ್ನು ಪ್ರತಿಬಿಂಬಿಸುವ ತೆಳು ವಸ್ತ್ರ ಮತ್ತು ಬಿಗಿ ಉಡುಪನ್ನು ಸ್ತ್ರೀಯರು ಧರಿಸಬಾರದು. ವಸ್ತ್ರವು ಪರಪುರುಷರನ್ನು ಆಕರ್ಷಿಸುವಂತಿರಬಾರದು. ಸ್ತ್ರೀಯರು ಪುರುಷರ ಉಡುಪು ಮತ್ತು ಉಡುಪು ಧರಿಸಿದರೂ ಅರೆನಗ್ನಾವಸ್ಥೆಯಲ್ಲಿರುವಂತಹ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಿಸುವಂತಿರಬಾರದು. ಸ್ತ್ರೀ ತನ್ನ ಶರೀರವನ್ನು ಸಂಪೂಣ೯ವಾಗಿ ಮರೆಸಬೇಕೆಂಬುದು ಕೂಡಾ ಲಜ್ಜೆಯ ಭಾಗ ಆಗಿದೆ.
ಆಯಿಶಾ(ರ) ವರದಿ ಮಾಡಿರುವಂತೆ, ಒಮ್ಮೆ ಅವರ ಸಹೋದರಿ ಅಸ್ಮಾ ಬಿಂತಿ ಅಬೂಬಕರ್(ರ) ಪ್ರವಾದಿವರ್ಯರ(ಸ) ಸನ್ನಿಧಿಗೆ ಬಂದಾಗ ತೆಳು ಉಡುಪು ಧರಿಸಿದ್ದರು. ತಕ್ಷಣ ಪ್ರವಾದಿ(ಸ) ಮುಖವನ್ನು ಬೇರೆಡೆಗೆ ತಿರುಗಿಸುತ್ತಾ “ಅಸ್ಮಾ, ಸ್ತ್ರೀಯು ಪ್ರೌಢೆಯಾದ ಬಳಿಕ ಆಕೆಯ ಮುಖ ಮತ್ತು ಮುಂಗೈಗಳ ಹೊರತು ದೇಹದ ಯಾವ ಭಾಗವೂ ಹೊರಗೆ ಕಾಣಿಸುವಂತಿರಬಾರದು.” (ಅಬೂ ದಾವೂದ್)

ಹಿಜಾಬ್ ಎಂಬುದು ನಿಂದ್ಯತೆ, ಅಭಿವೃದ್ಧಿಗೆ ತಡೆಯೂ, ಸ್ತ್ರೀ ಸ್ವಾತಂತ್ರ್ಯದ ನಿಷೇಧವೂ ಅಲ್ಲ. ಇಂದು ದೇಶಭಾಂಧವರಲ್ಲಿ ಹಿಜಾಬ್ ನ ಬಗ್ಗೆ ತುಂಬಾ ತಪ್ಪು ಕಲ್ಪನೆಗಳಿವೆ. ಅದನ್ನು ಹೋಗಲಾಡಿಸಲು ಪ್ರಯತ್ನಿಸಬೇಕಾಗಿರುವುದು ಪ್ರತಿಯೊಬ್ಬ ಮುಸ್ಲಿಮರ ಕರ್ತವ್ಯವಾಗಿದೆ. ಇದೀಗ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಕಠಿಣ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಒಂದೋ ವಿದ್ಯಾಭ್ಯಾಸ ಅಲ್ಲದಿದ್ದರೆ ಹಿಜಾಬ್ ಎಂಬ ಆಯ್ಕೆ ಸಾಧ್ಯವಿಲ್ಲ. ಇಸ್ಲಾಂ ಧರ್ಮದ ಸಂಸ್ಕೃತಿ ಮತ್ತು ಗುರುತುಗಳನ್ನು ದುರ್ಬಲಗೊಳಿಸುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದೆಲ್ಲವೂ ಅಲ್ಲಾಹನ ಪರೀಕ್ಷೆಗಳಾಗಿರುತ್ತದೆ. ಇಂತಹ ಪರೀಕ್ಷೆಗಳನ್ನು ಧೈರ್ಯದಿಂದ ಸಹನೆ ಮತ್ತು ಆತ್ಮವಿಶ್ವಾಸದಿಂದ ಎದುರಿಸಿದರೆ ಅಂತಿಮ ವಿಜಯವು ನಮ್ಮದಾಗಿರುತ್ತದೆ.