ಹಿಜಾಬ್ ವಿಚಾರ: ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗಿದೆ: ಬೆಂಗಳೂರಿನಲ್ಲಿ ಮುಸ್ಲಿಂ ಮುಖಂಡರ ಹೇಳಿಕೆ

0
425

ಸನ್ಮಾರ್ಗ ವಾರ್ತೆ

ಬೆಂಗಳೂರು: ಹಿಜಾಬ್ ವಿಚಾರವಾಗಿ ವಾದ-ವಿವಾದ ಆಲಿಸುತ್ತಿರುವ ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿರುವ ಮಧ್ಯಂತರ ಆದೇಶಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹಿಜಾಬನ್ನು ಬಲವಂತವಾಗಿ ತೆಗೆಸುತ್ತಿರುವುದು ಕಾನೂನುಬಾಹಿರ ಮತ್ತು ಅವಮಾನಕರ ಕೃತ್ಯ ಎಂದು ಮುಸ್ಲಿಂ ವಿದ್ವಾಂಸರು ಹಾಗೂ ಮುಸ್ಲಿಂ ಸಂಘಟನೆಗಳು ಹೇಳಿದೆ.

ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರು, ಕೆಲವು ಮಾಧ್ಯಮಗಳು ಮತ್ತು ಶಾಲಾ ಆಡಳಿತವು ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅವಮಾನಿಸುವಂತಹ ಅಕ್ರಮಣಕಾರಿ ವರ್ತನೆ ಕೈಗೊಂಡಿರುವುದು ಆಘಾತಕಾರಿಯಾಗಿದೆ. ಇದು ಖಂಡನೀಯ ಎಂದು ಹೇಳಿದ್ದಾರೆ.

ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಪೋಷಕರು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಾರೆ ಎಂಬ ಭ್ರಮೆಯನ್ನು ಸೃಷ್ಟಿಸಲು ಪ್ರಯತ್ನಿಸಲಾಗಿದೆ ಮತ್ತು ಸಾರ್ವಜನಿಕವಾಗಿ ಮುಸ್ಲಿಮರ ಹೆಸರನ್ನು ಹಾಳುಮಾಡಲು ಉದ್ದೇಶವನ್ನು ಹೊಂದಿರುವ ಹಾಗೆ ಕಾಣುತ್ತಿದೆ ಎಂದು ಹೇಳಿದ್ದು, ಹೈಕೋರ್ಟ್ ನ ಮಧ್ಯಂತರ ಆದೇಶದಲ್ಲಿ, ಯಾವ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಗಳು (ಅಆಅ) ಸಮವಸ್ತ್ರವನ್ನು ನಿಶ್ಚಯಿಸಿದೆಯೋ ಆ ಕಾಲೇಜುಗಳ ತರಗತಿಗಳಲ್ಲಿ ಮಾತ್ರ ಇತರ ಧಾರ್ಮಿಕ ಉಡುಗೆಗಳ ಜೊತೆಗೆ ಹಿಜಾಬನ್ನು ಅನುಮತಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದ್ದಾರೆ.

ಆದ್ದರಿಂದ, ಈ ಆದೇಶವು ಶಾಲೆಗಳಿಗೆ ಅನ್ವಯಿಸುವುದಿಲ್ಲ ಮತ್ತು ಅದರೊಂದಿಗೆ, ಕಾಲೇಜು ಅಭಿವೃದ್ದಿ ಮಂಡಳಿಯು ಏಕರೂಪದ ಡ್ರೆಸ್ ಕೋಡ್ ಅನ್ನು ಜಾರಿಗೆ ತರಲು ಸೂಚಿಸಿರುವ ಕಾಲೇಜುಗಳಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಯುವತಿಯರ ಹಿಜಾಬನ್ನು ವಿವೇಚನಾರಹಿತವಾಗಿ ಮತ್ತು ಬಲವಂತವಾಗಿ ತೆಗೆದುಹಾಕುವುದು ಮತ್ತು ಅದರ ಪ್ರಕ್ರಿಯೆಯನ್ನು ಚಿತ್ರೀಕರಿಸುವುದು ಅಥವಾ ವೀಡಿಯೊ ಚಿತ್ರೀಕರಣ ಮಾಡುವುದು ಹಾಗೂ ಅವರ ಚಾರಿತ್ರ‍್ಯಕ್ಕೆ ಭಂಗ ತರುವುದು ಕ್ರಿಮಿನಲ್ ಅಪರಾಧವಾಗಿರುವುದು ಮಾತ್ರವಲ್ಲ, ಅವರ ಖಾಸಗಿತನ, ಘನತೆ ಮತ್ತು ಮೂಲಭೂತ ಹಕ್ಕುಗಳಿಗೆ ಚ್ಯುತಿಯುಂಟಾಗಿದೆ ಎಂದು ಆರೋಪಿಸಿದ್ದಾರೆ.

ಶಾಲೆಗಳು ಮಕ್ಕಳ ಎರಡನೇ ಮನೆಯಾಗಿದೆ. ಆದ್ದರಿಂದ, ವಿದ್ಯಾರ್ಥಿಗಳು ಶಾಲೆಯಲ್ಲಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಆಯಾ ಶಾಲಾ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಶಾಲಾ ಅಧಿಕಾರಿಗಳು ಹೊರಗಿನ ಜನರಿಗೆ ತಮ್ಮ ಅನುಮತಿಯಿಲ್ಲದೆ ವಿದ್ಯಾರ್ಥಿಗಳ ಚಿತ್ರೀಕರಣ ನಡೆಸಲು ಶಾಲಾ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ತಮ್ಮ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ್ದಾರೆ. ಮಾತ್ರವಲ್ಲದೆ, ಬಾಲಕಿಯರನ್ನು ವಿವಸ್ತ್ರಗೊಳಿಸಲು ಉದ್ದೇಶಿಸಿರುವ ಕ್ರಿಮಿನಲ್ ಕೃತ್ಯವೂ ಇದಾಗಿದೆ. ಹಿಜಾಬ್ ಅಥವಾ ಇನ್ಯಾವುದೇ ರೂಪದಲ್ಲಿ ತಲೆ ಸ್ಕಾರ್ಫ್ ಅನ್ನು ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆ ಮತ್ತು ಇಸ್ಲಾಮ್ ಧರ್ಮದ ಅವಿಭಾಜ್ಯ ಅಂಗ. ಮುಸ್ಲಿಂ ವಿದ್ವಾಂಸರು ಹಾಗೂ ಮುಸ್ಲಿಂ ಸಂಘ ಸಂಸ್ಥೆಗಳಿಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ. ನ್ಯಾಯಾಲಯವು ಹೊರಡಿಸಿದ ಮಧ್ಯಂತರ ಆದೇಶವನ್ನು ನಾವು ಗೌರವಿಸುತ್ತೇವೆ. ಆದೇಶದಲ್ಲಿ ವಿದ್ಯಾರ್ಥಿಗಳಿಗೆ ಹಿಜಾಬನ್ನು ತರಗತಿಗಳಲ್ಲಿ ಮಾತ್ರ ನಿರ್ಬಂಧಿಸಲಾಗಿದೆಯೇ ಹೊರತು ಕಾಲೇಜು ಕ್ಯಾಂಪಸ್ ಗಳಲ್ಲಿ ಅಲ್ಲ ಎಂಬುದು ಸ್ಪಷ್ಟ. ಆದರೆ ಶಾಲಾ ಆವರಣದೊಳಗೆ ಬರುವಾಗಲೇ ಮಾಧ್ಯಮಗಳ ಮುಂದೆ ತೆಗೆಸುತ್ತಿರುವುದು ದುರದೃಷ್ಟಕರ ಎಂದು ತಿಳಿಸಿದ್ದಾರೆ.

ಹೈಕೋರ್ಟಿನ ಆದೇಶವನ್ನು ತಪ್ಪಾಗಿ ಅರ್ಥೈಸಿ ಕಾಲೇಜು ಗೇಟ್‌ಗಳ ಹೊರಗೆ ಸಾರ್ವಜನಿಕವಾಗಿ ಬುರ್ಖಾವನ್ನು ತೆಗೆದುಹಾಕುವಂತೆ ಒತ್ತಾಯಿಸುವ ಮೂಲಕ ಮುಸ್ಲಿಂ ಮಹಿಳೆಯರ ಗೌರವಕ್ಕೆ ಚ್ಯುತಿ ತಂದಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳ ಇಂತಹ ಕೃತ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಅವಮಾನಕ್ಕೆ ಒಳಗಾದ ಮಹಿಳೆಯರಿಗೆ ನಮ್ಮ ಸಂಪೂರ್ಣ ಬೆಂಬಲ ಮತ್ತು ಐಕ್ಯತೆಯನ್ನು ವ್ಯಕ್ತಪಡಿಸಿರುವ ಮುಸ್ಲಿಮ ಮುಖಂಡರು, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕ್ರಿಯೆ ಸಲ್ಲಿಸಲು ಸಿದ್ಧರಿರುವ ಮಹಿಳೆಯರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

ಕೆಲವು ಸುದ್ದಿ ವಾಹಿನಿಗಳು, ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಶಿಕ್ಷಣ ಸಂಸ್ಥೆಗಳು ಹೇಗೆ ಅವಕಾಶ ನೀಡಿವೆ ಎಂಬುದನ್ನು ಚಿತ್ರೀಕರಿಸಿರುವುದು ಮಾತ್ರವಲ್ಲದೆ ನಂತರ ಹಿಜಾಬನ್ನು ತೆಗೆಯಲು ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡುವಂತೆ ಕಾಲೇಜು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ ಹಾಗೂ ಅದನ್ನೇ ಸಾಧನೆ ಎಂಬಂತೆ ಪ್ರಸಾರ ಮಾಡಿದ್ದಾರೆ. ಇಂತಹ ಕೀಳು ಮಟ್ಟದ, ಕಾನೂನುಬಾಹಿರ, ಪ್ರಚೋದನಕಾರಿ ಕುಕೃತ್ಯಗಳನ್ನು ನಾವು ಖಂಡಿಸುತ್ತೇವೆ. ಅವರ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ಮುಸ್ಲಿಂ ವಿದ್ಯಾರ್ಥಿನಿಯರನ್ನು ಮೌಲ್ಯಯುತವಾದ ಅತ್ಯಗತ್ಯ ಶೈಕ್ಷಣಿಕ ತರಗತಿಗಳು ಮತ್ತು ಮುಂದಿನ ಪರೀಕ್ಷೆಗಳಿಂದ ವಂಚಿತರನ್ನಾಗಿ ಮಾಡುವ ಷಡ್ಯಂತ್ರವಿದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಹಾಗೂ ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಇಂತಹ ನೀಚ ಪ್ರಯತ್ನಗಳ ಬಗ್ಗೆ ಜಾಗರೂಕರಾಗಿರಲು ಎಲ್ಲರಿಗೂ ಮನವಿ ಮಾಡುವುದಾಗಿ ಹೇಳಿದ್ದಾರೆ.

ಆದ್ದರಿಂದ, ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳದಂತೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಲು ಮತ್ತು ಅಸಂಬದ್ಧ ವಿಷಯಗಳ ವಿರುದ್ಧ ಹಾಗೂ ಸಮಾಜದ ಶಾಂತಿ ಹಾಗೂ ನೆಮ್ಮದಿಯನ್ನು ಕದಡಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮತ್ತು ಮಾಧ್ಯಮಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಾಮಿಯಾ ಮಸ್ಜಿದ್, ಬೆಂಗಳೂರು ಖತೀಬ್ ಮಕ್ಸೂದ್ ಇಮ್ರಾನ್ ರಶಾದಿ, ಸಗೀರ್ ಅಹ್ಮದ್ ರಶಾದಿ ಸಾಹೇಬ್, ಜಂ ಇಯ್ಯತುಲ್ ಉಲಮಾ ಎ ಹಿಂದ್, ಕರ್ನಾಟಕ ಅಧ್ಯಕ್ಷ ಮುಫ್ತಿ ಇಫ್ತಿಕಾರ್ ಖಾಸಿಮೀ, ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಬೆಳಗಾಮಿ ಮುಹಮ್ಮದ್ ಸಾದ್, ಝುಲ್ಫಿಕರ್ ಅಹ್ಮದ್ ನೂರೀ ಸಾಹೇಬ್, ಏಜಾಝ್ ಅಹ್ಮದ್ ನದ್ವಿ ಸಾಹೇಬ್, ಹಾಫಿಝ್ ಮುಹಿಬುಲ್ಲಾ ಅಮೀನ್, ಕರ್ನಾಟಕ ಮುಸ್ಲಿಮ್ ಮುತ್ತಹಿದಾ ಮಹಾಝ್ ಸಂಚಾಲಕ ಮಸೂದ್ ಅಬ್ದುಲ್ ಖಾದರ್, ಎಪಿಸಿಆರ್, ಕರ್ನಾಟಕ ಅಧ್ಯಕ್ಷ ಅಡ್ವೋಕೇಟ್ ಪಿ. ಉಸ್ಮಾನ್, ಮೂವ್ಮೆಂಟ್ ಫಾರ್ ಜಸ್ಟಿಸ್, ಕರ್ನಾಟಕ ಅಧ್ಯಕ್ಷ ಅಡ್ವೋಕೇಟ್ ಅಕ್ಮಲ್ ರಜ್ವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.