ಸನ್ಮಾರ್ಗ ವಾರ್ತೆ
ಉಪ್ಪಿನಂಗಡಿ: ಮಹಿಳೆಯರು ತಲೆ ಮುಚ್ಚಬೇಕೆಂಬ ನಿಯಮವು ಮುಸ್ಲಿಮರ ಮಧ್ಯೆ ಯಾವುದೇ ಅಭಿಪ್ರಾಯ ವ್ಯತ್ಯಾಸ ಇಲ್ಲದ ಧರ್ಮದ ಒಂದು ಆಚಾರ ಪದ್ದತಿಯಾಗಿದ್ದು ಇದು ಯಾವುದೇ ಇತರ ಧರ್ಮೀಯರ ವಿರುದ್ದವಾಗಿರುವುದಿಲ್ಲ. ಅದೇ ಕಾರಣಕ್ಕೆ ಇಸ್ಲಾಂ ಧರ್ಮದಲ್ಲಿ ಹಿಜಾಬ್ ಅಗತ್ಯ ಇಲ್ಲ ಎಂಬ ಹೈಕೋರ್ಟ್ ತೀರ್ಪಿನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ‘ಸಮಸ್ತ ಉಲಮಾ ಒಕ್ಕೂಟ’ ಮೇಲ್ಮನವಿ ಸಲ್ಲಿಸಿದ್ದು ನ್ಯಾಯ ಸಿಗುವ ಭರವಸೆ ಇದೆ ಎಂದು ‘ಸಮಸ್ತ ವಿದ್ಯಾಭ್ಯಾಸ ಬೋರ್ಡ್’ ಪ್ರದಾನ ಕಾರ್ಯದರ್ಶಿ ಶೈಖುನಾ ಎಂಟಿ ಉಸ್ತಾದ್ ಹೇಳಿದ್ದಾರೆ.
ಅವರು ಉಪ್ಪಿನಂಗಡಿಯ ಕೆಮ್ಮಾರ ಶಕ್ತಿನಗರದಲ್ಲಿರುವ ಶಂಸುಲ್ ಉಲಮಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಅಧೀನದ ಶಂಸುಲ್ ಉಲಮಾ ವುಮೆನ್ಸ್ ಶರೀಅತ್ ಕಾಲೇಜ್ ನ ದ್ವಿತೀಯ ಸನದುದಾನ ಸಮ್ಮೇಳನದಲ್ಲಿ ಪ್ರದಾನ ಭಾಷಣಗೈದರು.
ಇಸ್ಲಾಂ ಶಾಂತಿಯ ಧರ್ಮ ವಾಗಿದ್ದು, ಯಾವುದೇ ಸಂದರ್ಭದಲ್ಲಿ ಸಹನೆ ಕೈಬಿಡಬಾರದು, ಯಾವುದೇ ಸಮಸ್ಯೆಗಳಿದ್ದರೂ ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಎಂದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಅಗತ್ಯವಾಗಿದ್ದು, ಯಾರೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು, ಹೆಣ್ಮಕ್ಕಳಿಗೆ ಪಿ.ಯು,ಡಿಗ್ರಿ ಶಿಕ್ಷಣದೊಂದಿಗೆ ಶರೀಅತ್ ಕೋರ್ಸನ್ನು ನೀಡುವ ‘ಫಾಳಿಲಾ’ ಮತ್ತು ‘ಫಳೀಲಾ’ ಎಂಬ ಕೋರ್ಸ್ ಗಳನ್ನು ‘ಸಮಸ್ತ’ದ ಅಧೀನದಲ್ಲಿ ಆರಂಭಿಸಲಾಗಿದೆ. ಈ ಮಹಿಳಾ ಕಾಲೇಜ್ ಇಂದು ಅತೀ ಹೆಚ್ಚು ಜನಪ್ರಿಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಜಿ ಎಸ್.ಬಿ.ಮುಹಮ್ಮದ್ ದಾರಿಮಿ ಅವರು, ಹೆಣ್ಮಕ್ಕಳಿಗೆ ಸಮನ್ವಯ ಶಿಕ್ಷಣ ನೀಡುವ ‘ಫಾಳಿಲಾ’ ಕೋರ್ಸ್ ಸಮಾಜದಲ್ಲಿ ಸುಶಿಕ್ಷಿತ ಮಹಿಳೆಯರನ್ನು ರೂಪಿಸುತ್ತಿದೆ. ಈಗಾಗಲೇ ಎರಡು ಬ್ಯಾಚ್ ನ ವಿದ್ಯಾರ್ಥಿನಿಯರು ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪೂರೈಸಿದ್ದಾರೆ.
ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಹಲವಾರು ಹೊಸ ಶೈಕ್ಷಣಿಕ ಯೋಜನೆಗಳನ್ನು ಹಾಕಿ ಕೊಳ್ಳಲಾಗಿದ್ದು,ಅದರ ಭಾಗವಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಶರೀಅತ್ ಶಿಕ್ಷಣವನ್ನು ಉಚಿತವಾಗಿ ನೀಡಿ, ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲಾಗುವುದು. ಎಲ್ಲರೂ ಇದರ ಸದುಪಯೋಗ ವನ್ನು ಪಡೆದುಕೊಳ್ಳಬೇಕು ಎಂದರು.
ಸಯ್ಯಿದ್ ಜುನೈದ್ ಜಿಫ್ರಿ ತಂಙಳ್ ಆತೂರು ಕಾರ್ಯಕ್ರಮವನ್ನು ಉದ್ಗಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ವೆಸ್ಟ್ ಅಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ದುವಾಶೀರ್ವಚನ ನೀಡಿದರು.
‘ಸಮಸ್ತ’ ಹನೀಫಿ ಉಲಮಾ ಒಕ್ಕೂಟದ ಅಧ್ಯಕ್ಷ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಗಂಡಿಬಾಗಿಲು ಖತೀಬು ಶೌಖತ್ತಲಿ ಫೈಝಿ , ಉಪ್ಪಿನಂಗಡಿ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಮೊದಲಾದವರು ಮಾತನಾಡಿದರು.
ಶರೀಅತ್ ಪದವಿ ಮುಗಿಸಿದ 22 ವಿದ್ಯಾರ್ಥಿನಿಯರಿಗೆ ‘ಫಾಳಿಲಾ’ ಪದವಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾಲೇಜ್ ನ ಮಾಹಿತಿ ಪತ್ರವನ್ನು ಸಂಸ್ಥೆಯ ಸಂಚಾಲಕ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಬಿಡುಗಡೆ ಗೊಳಿಸಿದರು. ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮ್ಮೇಳನ ಪ್ರಯುಕ್ತ ವಿದ್ಯಾರ್ಥಿನಿಯರು ಹೊರತಂದ ವಿಶೇಷ ಪುರವಣಿ ಯನ್ನು ಶೈಖುನಾ ಎಂ.ಟಿ.ಉಸ್ತಾದ್ ಬಿಡುಗಡೆ ಗೊಳಿಸಿದರು.
ಸಮಾರಂಭದಲ್ಲಿ ಕಾಲೇಜ್ ನ ಪ್ರಾಂಶುಪಾಲ ಹನೀಫ್ ದಾರಿಮಿ, ಆತೂರು ರೇಂಜ್ ಅಧ್ಯಕ್ಷ ಹನೀಫ್ ಫಾಝಿಲ್ ಹನೀಫಿ ಆತೂರು, ಕಾರ್ಯದರ್ಶಿ ಸಿದ್ದೀಕ್ ಫೈಝಿ ಕರಾಯ, ಮುನೀರ್ ಅನ್ವರಿ ಕುಂಡಾಜೆ, ಝಕರಿಯಾ ಮುಸ್ಲಿಯಾರ್, ಜಾಬಿರ್ ಫೈಝಿ ನೀರಾಜೆ,ಅಶ್ರಫ್ ರಹ್ಮಾನಿ ವೀರಮಂಗಿಲ,ಗಂಡಿಬಾಗಿಲು ಜಮಾಅತ್ ಅಧ್ಯಕ್ಷ ಆದಂ ಹಾಜಿ ಬಡ್ಡಮೆ, ಕಾರ್ಯದರ್ಶಿ ಎಸ್. ಆದಂ ಹಾಜಿ, ಹಸೈನಾರ್ ಹಾಜಿ ಕೊಯಿಲ, ಜಿಲ್ಲಾ ಎಸ್.ವೈ.ಎಸ್.ನಾಯಕ ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ಕಾರ್ಯದರ್ಶಿ ರಫೀಕ್ ಹಾಜಿ ನೇರಳಕಟ್ಟೆ, ಬಿಕೆ ಮುಹಮ್ಮದ್ ಹಾಜಿ ಕುಂಡಾಜೆ, ಎನ್.ಇಸ್ಹಾಕ್ ಶಕ್ತಿನಗರ, ಹುಸೈನ್ ಬಡಿಲ, ರಫೀಕ್ ಹಾಜಿ ಗಂಡಿಬಾಗಿಲು, ಪತ್ರಕರ್ತರಾದ ಸಿದ್ದೀಕ್ ನೀರಾಜೆ,ನಝೀರ್ ಕೊಯಿಲ, ಇಸ್ಮಾಯಿಲ್ ಕೆಮ್ಮಾರ, ಖಲಂದರ್ ಗಂಡಿಬಾಗಿಲು,ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಹಸೈನಾರ್ ಹಾಜಿ ಹಿರೆಬಂಡಾಡಿ, ಪಿ.ಆದಂ ಹಾಜಿ, ಹೈದರ್ ಕಲಾಯಿ,ಇಸ್ಹಾಕ್ ಹಾಜಿ ತೋಡಾರ್, ಅಹ್ಮದ್ ಕುಂಞಿ, ಶಾಹುಲ್ ಹಮೀದ್ ಕುಂಡಾಜೆ,ಯೂಸುಫ್ ನೀರಾಜೆ, ಝುಬೈರ್ ಆತೂರು,ನಝೀರ್ ಕೆ., ಯೂಸುಫ್ ನೀರಾಜೆ, ಅಬ್ದುಲ್ ಲತೀಫ್, ಬಿ.ಕೆ.ಅಬ್ದುಲ್ ಅಝೀಝ್ ,ನಝೀರ್, ಬಿ.ಕೆ.ಅಬ್ದುಲ್ ರಝಾಕ್ , ಅಶ್ರಫ್ ಕೋರಪದವು,ಯೂಸುಫ್ ಹಾಜಿ ಪದಮಾಲೆ, ಅಬ್ದುಲ್ ರಹಿಮಾನ್ ಯುನಿಕ್,ಸಿದ್ದೀಕ್ ಎನ್,ಇಬ್ರಾಹಿಂ ಬಡಿಲ, ಬಶೀರ್ ಮೊದಲಾದವರು ಉಪಸ್ಥಿತರಿದ್ದರು.
ಈ ಮೊದಲು ‘ಸಮಸ್ತ’ದ ಅಗಲಿದ ನಾಯಕರ ಅನುಸ್ಮರಣೆ ನಡೆಸಲಾಯಿತು. ಶಿಕ್ಷಣ ತಜ್ಞರಾದ ರಫೀಕ್ ಮಾಸ್ಟರ್ ಆತೂರು ಮತ್ತು ಹನೀಫ್ ಪುತ್ತೂರು ವಿದ್ಯಾರ್ಥಿ ಮತ್ತು ಪೋಷಕರಿಗೆ ಮಾಹಿತಿ ತರಬೇತಿ ನಡೆಸಿಕೊಟ್ಟರು. ಕಾರ್ಯಕ್ರಮದ ಮೊದಲು ಕಾಲೇಜ್ ಉಪನ್ಯಾಸಕಿಯರ ನೇತೃತ್ವದಲ್ಲಿ ಕಾಲೇಜ್ ವಿದ್ಯಾರ್ಥಿನಿಯರಿಂದ ಇಸ್ಲಾಮಿಕ್ ಕಲಾ ಸ್ಪರ್ಧೆ ನಡೆಯಿತು.ಸಂಸ್ಥೆಯ ಕೋಶಾಧಿಕಾರಿ ಹಸೈನಾರ್ ಹಾಜಿ ಕೊಯಿಲ ಧ್ವಜಾರೋಹಣ ಗೈದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಝಲುದ್ದೀನ್ ಹೇಂತಾರ್ ಸ್ವಾಗತಿಸಿದರು. ಸ್ಥಳೀಯ ಅಧ್ಯಾಪಕ ಅಬ್ದುಲ್ ರಝಾಕ್ ದಾರಿಮಿ ಧನ್ಯವಾದ ಹೇಳಿದರು. ರಫೀಕ್ ಆತೂರು ಕಾರ್ಯಕ್ರಮ ನಿರ್ವಹಿಸಿದರು.












