ಹಿಜಾಬ್| ವಿದ್ಯಾರ್ಥಿನಿಯರನ್ನು ಗೇಟಿನ ಹೊರಗೆ ನಿಲ್ಲಿಸಿದ ಪ್ರಾಂಶುಪಾಲನಿಗೆ ರಾಜ್ಯ ಪ್ರಶಸ್ತಿ

0
1088

ಸನ್ಮಾರ್ಗ ವಾರ್ತೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಡುಪಿಯ ಸರ್ಕಾರಿ ಕಾಲೇಜಿನಿಂದ ಆರಂಭವಾದ ಹಿಜಾಬ್ ವಿವಾದ ದೇಶಾದ್ಯಂತ ಸುದ್ದಿಯಾಗಿತ್ತು. ಈ ವಿವಾದದ ಸಂದರ್ಭದಲ್ಲಿ ಕುಂದಾಪುರದ ಸರ್ಕಾರಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶಿಸುವ ವೇಳೆ ಕಾಲೇಜಿನ ಪ್ರಾಂಶುಪಾಲರಾಗಿದ್ದ ಬಿ ಜಿ ರಾಮಕೃಷ್ಣ ಎಂಬುವವರು ಗೇಟಲ್ಲೇ ತಡೆದಿದ್ದರು. ಇದರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲೂ ವೈರಲ್ ಆಗಿತ್ತು.

ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನ ಗೇಟಲ್ಲೇ ತಡೆದಿದ್ದ ಪ್ರಾಂಶುಪಾಲ, ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಕಲ್ಲು ಹಾಕಿದ್ದ ಪ್ರಾಂಶುಪಾಲ, ಈಗ ಸರ್ಕಾರ ಕೊಡಮಾಡುವ ‘ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಹೌದು. ಸೆ.5ರಂದು ‘ಶಿಕ್ಷಕರ ದಿನಾಚರಣೆ’ಯ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಇಬ್ಬರು ಉತ್ತಮ ಪ್ರಾಂಶುಪಾಲರು ಮತ್ತು 8 ಉಪನ್ಯಾಸಕರಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.

2024-25ನೇ ಶೈಕ್ಷಣಿಕ ಸಾಲಿಗೆ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲರ ಪ್ರಶಸ್ತಿಗೆ ಮೈಸೂರು ಜಿಲ್ಲೆಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹುಣಸೂರಿನ ರಾಮೇಗೌಡ ಎ ಮತ್ತು ಉಡುಪಿ ಜಿಲ್ಲೆಯ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಮಕೃಷ್ಣ ಬಿ.ಜಿ. ಕೂಡ ಆಯ್ಕೆಯಾಗಿದ್ದಾರೆ.

ಎರಡು ವರ್ಷಗಳ ಹಿಂದೆ ‘ಹಿಜಾಬ್‌ ವಿವಾದ’ದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರನ್ನು ಗೇಟಿನಲ್ಲಿ ತಡೆದು ನಿಲ್ಲಿಸಿ, ಅವರ ವಿರುದ್ಧ ಹಿಂದೂ ವಿದ್ಯಾರ್ಥಿಗಳನ್ನು ಪರೋಕ್ಷವಾಗಿ ಎತ್ತಿಕಟ್ಟಿದ ಮತ್ತು ರಾಜ್ಯದಲ್ಲಿ ಕೋಮು ಉದ್ವಿಗ್ನ ಪರಿಸ್ಥಿತಿಗೆ ಕಾರಣರಾಗಿದ್ದ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ರಾಮಕೃಷ್ಣ ಬಿ.ಜಿ. ಅವರಿಗೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರಾಜ್ಯಮಟ್ಟದ ಉತ್ತಮ ಪ್ರಶಸ್ತಿ ನೀಡಿರುವುದು ಈಗ ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ರಾಮಕೃಷ್ಣ ಬಿ ಜಿ ಅವರಿಗೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಮುವಾದಿ ಕೆಲಸ ಮಾಡಿದ್ದಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಶಸ್ತಿಯೇ ಎಂದು ಶಿಕ್ಷಣ ತಜ್ಞರು, ಸಾರ್ವಜನಿಕರು ಮತ್ತು ಪೋಷಕರು ಪ್ರಶ್ನಿಸುತ್ತಿದ್ದಾರೆ.

ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭಗೊಂಡಿದ್ದ ಹಿಜಾಬ್‌ ಗಲಾಟೆಯು ನಂತರದಲ್ಲಿ ಸಂಘಪರಿವಾರದ ಕಾರ್ಯಕರ್ತರ ಮೂಲಕ ಕುಂದಾಪುರಕ್ಕೂ ಹರಡಿತ್ತು. ಕುಂದಾಪುರದ ಪದವಿ ಪೂರ್ವ ಕಾಲೇಜಿನಲ್ಲಿ, ಕಾಲೇಜಿಗೆ ಬರುವವರೆಗೆ ಹಿಜಾಬ್‌ ಧರಿಸಿಕೊಂಡು ಬಂದು ತರಗತಿ ಪ್ರವೇಶಿಸಿದ ನಂತರ ತೆಗೆದು ಇತರ ವಿದ್ಯಾರ್ಥಿನಿಯರಂತೆ ಕುಳಿತುಕೊಳ್ಳುತ್ತಿದ್ದ ವಿದ್ಯಾರ್ಥಿನಿಯರಿಗೆ ಆ ಸಂದರ್ಭದಲ್ಲಿ ಪ್ರಾಂಶುಪಾಲ ರಾಮಕೃಷ್ಣ ಬಿ ಜಿ ಗೇಟ್ ಬಂದ್ ಮಾಡಿದ್ದರು. ಕಾಲೇಜಿನೊಳಗೆ ಪ್ರವೇಶ ನಿರಾಕರಿಸಿದ್ದರು. ಈಗ ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಶಸ್ತಿ!

ವಿದ್ಯಾರ್ಥಿನಿಯರು ಪರಿಪರಿಯಾಗಿ ಬೇಡಿಕೊಂಡಿದ್ದರೂ ವಾರಗಟ್ಟಲೆ ಗೇಟ್‌ ಹೊರಗೆ ನಿಲ್ಲಿಸಿದ್ದ ಕರುಣಾಜನಕ ದೃಶ್ಯವನ್ನು ಇಡೀ ದೇಶವೇ ಕಂಡಿತ್ತು. ಮುಸ್ಲಿಂ ಹೆಣ್ಣು ಮಕ್ಕಳ ಸಂವಿಧಾನಬದ್ಧ ಶಿಕ್ಷಣದ ಹಕ್ಕನ್ನು ವಂಚಿಸುವ ಪ್ರಯತ್ನ ಇದಾಗಿದ್ದು ಹೆಣ್ಣು ಮಕ್ಕಳನ್ನು ಗೇಟಿನಲ್ಲಿಯೇ ತಡೆದು ಪ್ರವೇಶ ನಿರಾಕರಿಸಿದ್ದ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿತ್ತು.

ಕನ್ನಡದ ಮೇರು ಕವಿ ಮುದ್ದಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಹಾಗೂ ಶಿವರಾಮ ಕಾರಂತರು ಕಲಿತಂತಹ ಕಾಲೇಜಿಗೆ ಈ ಕೋಮುದ್ವೇಷಿ ಕಳಂಕ ತಂದಿದ್ದರು ಎಂಬ ಅಸಮಾಧಾನ ಕೂಡ ವ್ಯಕ್ತವಾಗಿತ್ತು. ಪ್ರಾಂಶುಪಾಲರು ಎಬಿವಿಪಿ‌ ಕಾರ್ಯಕರ್ತನಾಗಿ ಹಾಗೂ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಈಗಲೂ ಕಾರ್ಯ ನಿರ್ವಹಿಸುತ್ತಿರುವ ಕಿರಣ್ ಪೂಜಾರಿ ಎಂಬಾತನ ಕುಮ್ಮಕ್ಕಿಗೆ ಬಹಿರಂಗವಾಗಿಯೇ ಸಾಥ್ ನೀಡಿದ್ದರು. ಪ್ರಾಂಶುಪಾಲರ ಈ ನಡೆಯಿಂದ 160ಕ್ಕೂ ಹೆಚ್ಚು ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಸಂಘ ಪರಿವಾರದ ಮಾತು ನಂಬಿ ಕೇಸರಿ ಶಾಲು ಧರಿಸಿ ಬಂದ 36 ವಂಚಿತ ಸಮುದಾಯದ ವಿದ್ಯಾರ್ಥಿಗಳೂ ಅನುತ್ತೀರ್ಣರಾಗಿದ್ದರು.

ಈಗಲೂ ಕಾಲೇಜಿನಲ್ಲಿ ಎಬಿವಿಪಿ ಚಟುವಟಿಕೆಗಳನ್ನು ಮುಂದುವರಿಸಲು ಕಿರಣ್ ಪೂಜಾರಿ ಎಂಬಾತನನ್ನು ನಿಯಮಬಾಹಿರವಾಗಿ ಗೌರವ ಉಪನ್ಯಾಸಕರಾಗಿ ತೆಗೆದುಕೊಂಡಿದ್ದಾರೆ ಎಂಬ ಆರೋಪ ಕೂಡ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ರಾಮಕೃಷ್ಣ ಬಿ.ಜಿ. ಅವರ ಮೇಲಿದೆ. ಅಲ್ಲದೇ, ಮಕ್ಕಳಿಂದ ಹಣ ವಸೂಲಿ ಮಾಡುತ್ತಿದ್ದಾರೆಂಬ ಆಪಾದನೆ ಇವರ ಮೇಲಿರುವುದಾಗಿ ಕುಂದಾಪುರದ ಸ್ಥಳೀಯ ಸಾಮಾಜಿಕ ಹೋರಾಟಗಾರರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಈ ಎಲ್ಲ ಆರೋಪಗಳ ನಡುವೆಯೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲರ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿರುವುದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ತಜ್ಞ ಶ್ರೀಪಾದ್ ಭಟ್, “ಎಬಿವಿಪಿ‌ ಕಾರ್ಯಕರ್ತನೂ ಆಗಿರುವ ಕಿರಣ್ ಪೂಜಾರಿ ಎಂಬ ಹಂಗಾಮಿ ಉಪನ್ಯಾಸಕರ ಜೊತೆಗೂಡಿ ಇದೇ ಪ್ರಾಂಶುಪಾಲರು ಎರಡು ವರ್ಷಗಳ ಹಿಂದೆ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾಮರಸ್ಯವನ್ನು ಹಾಳು ಮಾಡಿದರು. 160ಕ್ಕೂ ಹೆಚ್ಚು ಮುಸ್ಲಿಂ ಹೆಣ್ಣು ಮಕ್ಕಳು ಇದರಿಂದಾಗಿ ಶಿಕ್ಷಣ ವಂಚಿತರಾದರು. ಸಂಘ ಪರಿವಾರದ ಮಾತು ನಂಬಿ ಕೇಸರಿ ಶಾಲು ಧರಿಸಿ ಬಂದ 36 ವಂಚಿತ ಸಮುದಾಯದ ವಿದ್ಯಾರ್ಥಿಗಳೂ ಅನುತ್ತೀರ್ಣರಾದರು. ಈ ಬಾರಿಯ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ರಾಮಕೃಷ್ಣ ಬಿ.ಜಿ.ಯವರನ್ನು ಹುಡುಕಿಕೊಂಡು ಬಂದಿದೆ. ಇದು ಕಾಂಗ್ರೆಸ್ ಸರ್ಕಾರದ ಶೈಲಿ. ಖಾಸಗಿ ಕಾರ್ಪೊರೇಟ್ ಕುಳಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ಕೊಡುವುದರಲ್ಲಿ ನಿರತರಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪನವರನ್ನು ಕೇಳಿ ಏನು ಪ್ರಯೋಜನ?” ಎಂದು ಆಕ್ರೋಶ ಹೊರಹಾಕಿದ್ದಾರೆ.