ಮುಸ್ಲಿಮರ ನಮಾಝ್ ವಿರುದ್ಧ ಹನುಮಾನ್ ಕೀರ್ತನೆ: ಹಿಂದು ಯುವ ವಾಹಿನಿಯ ಪ್ರತಿಭಟನೆ

0
1038

ಹತ್ರಾಸ್, ಜು. 18: ಉತ್ತರ ಪ್ರದೇಶದ ಹತ್ರಾಸ್ ನಗರದಲ್ಲಿ ಮುಸ್ಲಿಮರು ಬೀದಿ ಬದಿ ನಮಾಝ್ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಯುವವಾಹಿನಿ ಎನ್ನು ವ ಸಂಘಟನೆ ಹನುಮಾನ್ ಕೀರ್ತನೆಯ ಮೂಲಕ ಪ್ರತಿಭಟನೆ ನಡೆಸುತ್ತಿದೆ. ಮುಸ್ಲಿಮರು ನಮಾಝ್ ಮಾಡುವ ಸಮಯದಲ್ಲಿ ಹನುಮಾನ್ ಚಾಲಿಸ್ (ಹಿಂದೂ ಧರ್ಮ ವಿಶ್ವಾಸಿಗಳ ವಿಶೇಷ ರೀತಿಯ ಕೀರ್ತನೆ) ಪಠಿಸಿ ಹಿಂದೂ ಯುವ ವಾಹಿನಿ ಕಾರ್ಯಕರ್ತರು ವಿರೋಧಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಹತ್ರಾಸ್‍ನ ಸಿಕಂದರ ರಾವ್ ಏರಿಯದ ಹನುಮಾನ್ ಮಂದಿರದ ಮುಂಭಾಗದಲ್ಲಿ ಮಂಗಳವಾರ ಯುವವಾಹಿನಿಯ ಕಾರ್ಯಕರ್ತರು ಹನುಮಾನ್ ಚಾಲಿಸ್ ಕೀರ್ತನೆ ಮಾಡಿದರು. ನಿರಂತರ ಒಂದು ಗಂಟೆಯ ವರೆಗೆ ಇದು ಮುಂದುವರಿಯಿತು. ಮುಸ್ಲಿಮರು ನಮಾಝ್ ಕೊನೆಗೊಳಿಸುವವರೆಗೂ ನಡೆಯಿತು. ಈ ರೀತಿ ಹನುಮಾನ್ ಚಾಲಿಸ್ ಪಠಣದೊಂದಿಗೆ ನಮಾಝ್ ನ್ನು ವಿರೋಧಿಸುವುದಾಗಿ ಹಿಂದೂ ಯವವಾಹಿನಿ ತಿಳಿಸಿದೆ.

ಶುಕ್ರವಾರ ಮುಸ್ಲಿಮರು ರಸ್ತೆಯಲ್ಲಿ ನಮಾಝ್ ಮಾಡುವ ಮೂಲಕ ಜನರಿಗೆ ಕಷ್ಟವುಂಟುಮಾಡುತ್ತಾರೆ. ರಸ್ತೆ ಬ್ಲಾಕ್ ಆಗುತ್ತದೆ ಎಂದು ಸಂಘಟನೆ ಆರೋಪಿಸಿದೆ. ಅವರು ನಮಾಝ್ ಮಾಡುವುದು ನಿಲ್ಲಿಸಿದರೆ ನಾವು ಕೂಡ ಕೀರ್ತನೆ ನಿಲ್ಲಿಸುತ್ತೇವೆ ಎಂದು ಸಂಘಟನೆ ಹೇಳಿದೆ. ಅಲ್ಲವಾದರೆ ಎಲ್ಲ ಮಂಗಳವಾರ ಹನುಮಾನ್ ಮಂದಿರದಿಂದ ನಾವು ಕೀರ್ತನೆ ಆರಂಭಿಸುತ್ತೇವೆ ಎಂದು ಯುವವಾಹಿನಿ ವಕ್ತಾರ ರವೀಂದ್ರ ಕುಮಾರ್ ಸಿಂಗ್ ಹೇಳಿದರು. ಆದರೆ ಪೊಲೀಸರು ಈ ವಿಷಯದಲ್ಲಿ ಮೌನ ಪಾಲಿಸುತ್ತಿದ್ದಾರೆ. ಈ ವರೆಗೆ ಯಾರ ಕಡೆಯಿಂದಲೂ ದೂರು ಬಂದಿಲ್ಲ. ಆದ್ದರಿಂದ ನಾವೇನೂ ಮಾಡುವಂತಿಲ್ಲ ಎಂದು ಹಿರಿಯ ಪೊಲೀಸಧಿಕಾರಿಗಳು ಹೇಳಿದರು.