ಹೊಂಡುರಾಸ್‍: ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಕ್ಸಿಯೊಮರಾ ಕ್ಯಾಸ್ಟ್ರೋ

0
321

ಸನ್ಮಾರ್ಗ ವಾರ್ತೆ

ತೆಗುಸಿಗಲ್ಪ: ಹೊಂಡುರಾಸ್ ದೇಶದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಕ್ಸಿಯೊಮರಾ ಕ್ಯಾಸ್ಟ್ರೋ  ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ದೇಶದಲ್ಲಿ 8 ವರ್ಷದಿಂದ ಅಧಿಕಾರದಲ್ಲಿದ್ದ ಜುವಾನ್ ಒರ್ಲಾಂಡೊ ಹರ್ನಾಂಡೆರ್ ಅವರ ಆಡಳಿತ ಅಂತ್ಯವಾಗಿದ್ದು, ಕಳೆದ ನವೆಂಬರ್ 28ರಲ್ಲಿ ಚುನಾವಣೆ ನಡೆದಿತ್ತು.

ಹಿಂದಿನ ಸರಕಾರದ ವಿರುದ್ಧ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಬಡತನ ನಿರ್ಮೂಲನಕ್ಕಾಗಿ ಉಪಾಯ ಕಂಡು ಹಿಡಿಯಬೇಕಾಗಿದೆ ಎಂದು ಕ್ಯಾಸ್ಟ್ರೋ ಪ್ರಮಾಣ ವಚನದ ತರುವಾಯ ಹೇಳಿದರು. ನಿರುದ್ಯೋಗ, ಅಪರಾಧದಲ್ಲಿ ಹೆಚ್ಚಳ, ಆರೋಗ್ಯ-ಶಿಕ್ಷಣ ಕ್ಷೇತ್ರದ ಬಿಕ್ಕಟ್ಟುಗಳು ಬಗೆಹರಿಸುವುದಾಗಿ ಕ್ಯಾಸ್ಟ್ರೋ ಭರವಸೆ ನೀಡಿದರು.

ಹೊಸದಾಗಿ ಆಯ್ಕೆಯಾದ ಹೊಂಡುರಾಸ್ ನ್ಯಾಶನಲ್ ಕಾಂಗ್ರೆಸ್‍ಗೆ ಯಾರು ನೇತೃತ್ವ ಕೊಡುವರು ಎಂಬ ವಿವಾದ ಇರುವ ಸಮಯದಲ್ಲಿಯೇ ಕ್ಯಾಸ್ಟ್ರೋ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದಾರೆ. 20 ಮಂದಿ ಬಂಡುಕೋರರು ತಮ್ಮ ಸಂಗಡಿಗ ಜಾರ್ಜ್ ಕಾಲಿಕ್ಸ್‌ರನ್ನು ತಾತ್ಕಾಲಿಕವಾಗಿ ಹೊಂಡುರಾಸ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೂಚಿಸಿದ್ದು ಪಾರ್ಲಿಮೆಂಟಿನಲ್ಲಿ ಹೊಯ್‍ಕೈಗೆ ಕಾರಣವಾಗಿತ್ತು. ಹೊಂಡುರಾಸ್‍ನ ಕಾನೂನು ನಿರ್ಮಾಣ ಸಮಿತಿ ಹೊಂಡುರಾಸ್ ಕಾಂಗ್ರೆಸ್ ಆಗಿದೆ.

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಹಿತ ಹಲವು ಗಣ್ಯರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಲಸಿಗರ ಸಮಸ್ಯೆ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ನೂತನ ಅಧ್ಯಕ್ಷೆಗೆ ಅಮೆರಿಕ ಸರಕಾರದ ನೆರವನ್ನು ಈ ಸಂದರ್ಭ ಹ್ಯಾರಿಸ್ ಖಾತರಿಪಡಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.