ಆಂಬುಲೆನ್ಸ್ ಸೇವೆ ನೀಡಲು ನಿರಾಕರಿಸಿದ ಆಸ್ಪತ್ರೆ: ಮಗುವಿನ ಮೃತದೇಹದೊಂದಿಗೆ 65 ಕಿ‌.ಮೀ ಬೈಕ್‍ನಲ್ಲಿ ಪ್ರಯಾಣಿಸಿದ ಆದಿವಾಸಿ ಕುಟುಂಬ

0
369

ಸನ್ಮಾರ್ಗ ವಾರ್ತೆ

ಹೈದರಾಬಾದ್: ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳು ಆಂಬ್ಯುಲೆನ್ಸ್ ಸೇವೆ ಒದಗಿಸಲು ನಿರಾಕರಿಸಿದ ಕಾರಣದಿಂದಾಗಿ ಆದಿವಾಸಿ ಕುಟುಂಬವೊಂದು ಮೂರು ವರ್ಷದ ಬಾಲಕಿಯ ಶವದೊಂದಿಗೆ ಬೈಕ್‌ನಲ್ಲಿ 65ಕಿ.ಮೀ ಪ್ರಯಾಣಿಸಿದ ಘಟನೆಯೊಂದು ವರದಿಯಾಗಿದೆ. ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿರುವ ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರದ(ಎಂಸಿಎಚ್) ಅಧಿಕಾರಿಗಳಹ ಮಗುವಿನ ಶವವನ್ನು ತೆಗೆದುಕೊಂಡು ಹೋಗಲು ಆಂಬ್ಯುಲೆನ್ಸ್‌ ಸೇವೆಗೆ ಅವಕಾಶ ನೀಡಲಿಲ್ಲ. ಖಾಸಗಿ ಆಂಬ್ಯುಲೆನ್ಸ್‌ ಸೇವೆಯನ್ನು ಪಡೆಯಲು ಕುಟುಂಬದ ಬಳಿ ಸಾಕಷ್ಟು ಹಣವಿರಲಿಲ್ಲ ಎಂಬುದಾಗಿ ವರದಿಯಾಗಿದೆ.

ಖಮ್ಮಂ ಜಿಲ್ಲೆಯ ಕೋಟ ಮೇಟೆಪಲ್ಲಿ ಗ್ರಾಮದ ವೆಟ್ಟಿ ಮಲ್ಲಯ್ಯರ ಮೂರು ವರ್ಷದ ಸುಕ್ಕಿ ಎಂಬ ಹೆಣ್ಮಗು ಮೃತಪಟ್ಟಿತ್ತು. ಅನಾರೋಗ್ಯದಿಂದಾಗಿ ಮಗುವನ್ನು ಮೊದಲು ಏಣ್ಕೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಆರೋಗ್ಯ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ಖಮ್ಮಂ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲು ಹೇಳಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ರವಿವಾರ ಬೆಳಗ್ಗೆ ಮಗು ಮೃತಪಟ್ಟಿತ್ತು. ಆಸ್ಪತ್ರೆಯವರು ಆಂಬುಲೆನ್ಸ್ ಸೇವೆ ನೀಡಲು ನಿರಾಕರಿಸಿದ್ದರಿಂದ ಗ್ರಾಮದ ಸಂಬಂಧಿಕನ ಬೈಕ್‍ನಲ್ಲಿ ಮಗುವಿನ ಮೃತದೇಹವನ್ನು 65ಕಿ.ಮೀ ದೂರದ ತಮ್ಮ ಊರಿಗೆ ಸಾಗಿಸಿದ್ದಾರೆ‌.