ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ನಮ್ಮ ದೇಶದಲ್ಲಿ ಕಷ್ಟಪಟ್ಟು ಆ್ಯಪಲ್ ಬೆಳೆಯುವ ರೈತರ ಸ್ಥಿತಿ ಎಲ್ಲಿಗೆ ತಲುಪಿದೆ ಎಂದರೆ ತಾವು ಬೆಳೆದ ಬೆಳೆಗೆ ದೇಶದ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲದಂತಾಗಿದೆ. ಇದರಿಂದಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾರಣ ಬೇರೇನೂ ಅಲ್ಲ ಸರಕಾರ ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಇರಾನ್ನಿಂದ ಆಮದು ಮಾಡಿಕೊಳ್ಳುವ ಆ್ಯಪಲ್ ಸದ್ಯ ಈಗ ಈಗ ನಮ್ಮ ರೈತರ ಕಣ್ಣೀರಿಗೆ ಕಾರಣವಾಗಿದೆ.
ಕಡಿಮೆ ಬೇಡಿಕೆ ಮತ್ತು ಬೆಲೆಗೆ ಕಾರಣವೇನೆಂದರೆ ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಇರಾನ್ನಿಂದ ಆಮದು ಮಾಡಿಕೊಳ್ಳುವ ಸುಂಕ-ಮುಕ್ತ (ಟ್ಯಾಕ್ಸ್ ಇಲ್ಲದ) ವ್ಯವಹಾರದಿಂದ ನಮ್ಮ ರೈತರ ಆಪಲ್ ಗೆ ಬೇಡಿಕೆ ಕುಸಿದಿದೆ. ಇರಾನಿನ ಆ್ಯಪಲ್ ಭಾರತಕ್ಕೆ ಆಮದಾಗುತ್ತಿರುವ ಕಾರಣ ಸ್ಥಳೀಯ ಸೇಬಿನ ಬೇಡಿಕೆ ಗಣನೀಯವಾಗಿ ಕುಸಿದಿದೆ. ಅಂದಾಜು 30 ಮಿಲಿಯನ್ ಬಾಕ್ಸ್ ಸೇಬುಗಳು ದೇಶಾದ್ಯಂತ ಕೋಲ್ಡ್ ಸ್ಟೋರೇಜ್ಗಳಲ್ಲಿ ಬಿದ್ದಿವೆ. ಒಂದು ಬಾಕ್ಸ್ (16 ಕೆಜಿ) ಸೇಬನ್ನು ಸಾಮಾನ್ಯವಾಗಿ ರೂ. 1,200-1,400 ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು, ಆದರೆ ಪ್ರಸ್ತುತ ಕಡಿಮೆ ಅವಧಿಯಲ್ಲಿ, ದರಗಳು ಶೇಕಡಾ 30 ರಷ್ಟು ಕುಸಿದಿದೆ.
ಅಟ್ಟಾರಿ-ವಾಘಾ ಸೇರಿದಂತೆ ಅಫ್ಘಾನಿಸ್ತಾನದ ಮೂಲಕವೂ ಕೂಡ ಬೃಹತ್ ಸರಕುಗಳನ್ನು ಸಾಗಿಸುವ ಹಡಗುಗಳ ನೆರವಿನಿಂದ ಕೂಡ ಇರಾನಿನ ಆಪಲ್ ಭಾರತದ ಮಾರುಕಟ್ಟೆಗೆ ಬರುತ್ತಿದೆ. ಇದು ದೇಶೀಯ ಮಾರುಕಟ್ಟೆಗಳಲ್ಲಿನ ಹಣ್ಣಿನ ದರದಲ್ಲಿ ವಿಪರೀತ ಏರುಪೇರು ಉಂಟುಮಾಡಿದೆ. ಇದು ಭಾರತೀಯ ರೈತರು ಮಾತ್ರವಲ್ಲದೆ, ಈ ವ್ಯಾಪಾರದೊಂದಿಗೆ ಸಂಬಂಧ ಹೊಂದಿರುವ ಸಾಗಣೆದಾರರು ಮತ್ತು ಕೋಲ್ಡ್ ಸ್ಟೋರೇಜ್ ಮಾಲೀಕರು, ವ್ಯಾಪಾರಿಗಳು ಮತ್ತು ಏಜೆಂಟ್ಗಳವರೆಗೆ ಎಲ್ಲಾ ವರ್ಗದ ಜನರಿಗೆ ನಷ್ಟವನ್ನು ತಂದೊಡ್ಡಿದೆ.
ಸಗಟು ಹಣ್ಣಿನ ಏಷ್ಯಾದ ಅತಿದೊಡ್ಡ ಮಾರುಕಟ್ಟೆಯಾಗಿ ಗುರುತಿಸಿರುವ ದೆಹಲಿಯ ಆಜಾದ್ಪುರ ಮಂಡಿಯಲ್ಲಿ ಇರಾನಿನ ಸೇಬಿನ ಪ್ರಭಾವವು ತೀವ್ರವಾಗಿ ತಟ್ಟಿದೆ ಎಂದೇ ಹೇಳಬಹುದು. ಈ ಬಗ್ಗೆ ಕಾಶ್ಮೀರ ಆಪಲ್ ಮರ್ಚೆಂಟ್ಸ್ ಅಸೋಸಿಯೇಷನ್ ಮತ್ತು ಆಜಾದ್ಪುರದ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ತಲ್ರಾ ಅವರು, 10 ಕೆಜಿ ತೂಕದ ಇರಾನ್ನ ಸೇಬುಗಳ ಬಾಕ್ಸ್ ಭಾರತದಲ್ಲಿ ಸುಮಾರು 600 ರೂ. ಯಿಂದ ಹಿಡಿದು 850 ರೂ. ಗಳ ನಡುವೆ ಮಾರಾಟವಾಗುತ್ತಿದ್ದರೆ, ಕಾಶ್ಮೀರ ಅಥವಾ ಹಿಮಾಚಲ ಪ್ರದೇಶದ ಅದೇ ಪ್ರಮಾಣದ ಸೇಬು 900-1,100 ರೂ. ಇದೆ. ಇದರಿಂದಾಗಿ ಸ್ಥಳೀಯ ಉತ್ಪನ್ನಗಳಿಗೆ ಬೆಲೆ ಕಡಿಮೆಯಾಗಿದೆ. ಇದರಿಂದಾಗಿ ದೇಶೀಯ ಉತ್ಪನ್ನಗಳ ವ್ಯಾಪಾರದಲ್ಲಿ ಕುಸಿತಕ್ಕೆ ಕಾರಣವಾಯಿತು ಎಂದು ತಲ್ರಾ ಹೇಳುತ್ತಾರೆ.
ಆಜಾದ್ಪುರ ಮಂಡಿಯಿಂದ ಸೇಬುಗಳನ್ನು ಸಾಗಿಸುವ ಸುಮಾರು 100 ರಿಂದ 150 ಟ್ರಕ್ಗಳು ದಕ್ಷಿಣ ಭಾರತಕ್ಕೆ ಪ್ರತಿದಿನ ಹೊರಡುತ್ತವೆ. ಆದರೆ ವ್ಯಾಪಾರ ಶೇ.80ರಷ್ಟು ಕುಸಿದಿದೆ ಎಂದಿರುವ ತಳ್ರಾ, ಉತ್ತರ ಭಾರತದಲ್ಲಿ ನಮ್ಮ ಸ್ಥಳೀಯ ಉತ್ಪನ್ನಗಳಿಗೆ ಸ್ವಲ್ಪ ಬೇಡಿಕೆಯಿದೆಯಾದರೂ ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದ ಮಾರುಕಟ್ಟೆಗಳು ಇರಾನಿನ ಸೇಬುಗಳಿಂದಲೇ ತುಂಬಿಕೊಂಡಿವೆ. ಇದರಿಂದಾಗಿ ಸುಮಾರು 30 ಮಿಲಿಯನ್ ಸೇಬು ಪೆಟ್ಟಿಗೆಗಳು ಕೋಲ್ಡ್ ಸ್ಟೋರೇಜ್ಗಳಲ್ಲಿ ಬಾಕಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇರಾನಿನ ಸೇಬುಗಳ ಮೇಲೆ ಸೆಸ್ ಮತ್ತು ಆಮದು ಸುಂಕಗಳನ್ನು ವಿಧಿಸಿ ದೇಶೀಯ ಉತ್ಪನ್ನಗಳ ಮೇಲೆ ಆಗುತ್ತಿರುವ ಹಾನಿಯನ್ನು ತಡೆಯಬೇಕೆಂದು ಸರಕಾರವನ್ನು ವಿಜಯ್ ಕುಮಾರ್ ಒತ್ತಾಯಿಸಿದ್ದಾರೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2021 ರ ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಇರಾನ್ನಿಂದ ಒಟ್ಟು 30,369 ಟನ್ ಸೇಬುಗಳನ್ನು 12.1 ಲಕ್ಷ ರೂಪಾಯಿ ಮೌಲ್ಯದಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪ್ರತಿ ವರ್ಷ ಭಾರತದಲ್ಲಿ ಸುಮಾರು 3.5 ಲಕ್ಷ ಮೆಟ್ರಿಕ್ ಟನ್ ಸೇಬನ್ನು ಉತ್ಪಾದಿಸಲಾಗುತ್ತದೆ . ಇದರಲ್ಲಿ ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಹೆಚ್ಚಿನ ಕೊಡುಗೆಯನ್ನು ನೀಡುತ್ತವೆ. ಸೆಪ್ಟೆಂಬರ್ನಲ್ಲಿ ಸುಗ್ಗಿಯ ಕಾಲ ಪ್ರಾರಂಭವಾದ ಕೂಡಲೇ ಭಾರತದಾದ್ಯಂತದ ಮಾರುಕಟ್ಟೆಗಳಿಗೆ ಬೃಹತ್ ಪ್ರಮಾಣದ ಸೇಬುಗಳನ್ನು ಸಾಗಿಸಲಾಗುತ್ತದೆ. ಆದರೆ ಚಳಿಗಾಲದ ತೆಳ್ಳಗಿನ ಅವಧಿಯಲ್ಲಿ ಉತ್ತಮ ದರಗಳನ್ನು ಗಳಿಸಲು ಹೆಚ್ಚಿನ ಉತ್ಪನ್ನಗಳನ್ನು ಕೋಲ್ಡ್ ಸ್ಟೋರೇಜ್ಗಳಲ್ಲಿ ಇರಿಸಲಾಗುತ್ತದೆ. ಇನ್ನೊಂದು ಅಧಿಕೃತ ಅಂಕಿಅಂಶಗಳ ಪ್ರಕಾರ ಕಾಶ್ಮೀರವು ಇಲ್ಲಿಯವರೆಗೆ 16 ಲಕ್ಷ ಮೆಟ್ರಿಕ್ ಟನ್ ಸೇಬುಗಳನ್ನು ರವಾನಿಸಿದ್ದು, ಇನ್ನೂ 2 ಲಕ್ಷ ಮೆಟ್ರಿಕ್ ಟನ್ ಸೇಬುಗಳು ಕೋಲ್ಡ್ ಸ್ಟೋರೇಜ್ನಲ್ಲಿಯೇ ಬಾಕಿಯಾಗಿದ್ದು, ಸದ್ಯ ಇದು ಬೆಳೆ ಬೆಳೆದಿರುವ ರೈತರನ್ನು ಚಿಂತೆಗೀಡು ಮಾಡಿದೆ.












