ಅಣ್ಣ-ತಮ್ಮಂದಿರ ನಡುವೆ ಸಂಬಂಧ ಹೇಗಿದೆ?

0
1006

ಸನ್ಮಾರ್ಗ ವಾರ್ತೆ

✍️ಅಬೂ ಝೀಶಾನ್

ಖ್ಯಾತ ವಿದ್ವಾಂಸ ಹ. ಹಸನ್ ಬಸರಿ(ರ) ಒಮ್ಮೆ ತನ್ನ ಅನುಚರರೊಬ್ಬನೊಂದಿಗೆ ಕೇಳುತ್ತಾರೆ, “ನೀನು ನಿನ್ನ ಅಣ್ಣ ಅಥವಾ ತಮ್ಮನ  ಕಿಸೆಗೆ ಕೈ ಹಾಕಿ ಹಣವನ್ನು ತೆಗೆಯುತ್ತೀಯಾ?” “ಇಲ್ಲ” ಆತ ಹೇಳಿದ. ಆಗ ಹಸನ್ ಬಸರಿ(ರ) ಹೇಳಿದರು, “ಹಾಗಾದರೆ ನೀವು ಇನ್ನೂ ಪರಸ್ಪರ ಸಹೋದರರಾಗಲಿಲ್ಲ.”

ಇದರ ಅರ್ಥವೇನು? ಹ. ಹಸನ್ ಬಸರಿ(ರ) ಹೀಗೆ ಹೇಳಿದುದರ ಉದ್ದೇಶವೇನು? ನಮ್ಮ ರಕ್ತ ಸಂಬಂಧಿ ಸೋದರರು ನಮ್ಮ  ಕಿಸೆಯಿಂದ ಯಾವಾಗಲೂ ಹಣವನ್ನು ತೆಗೆಯಬೇಕೆಂದು ಹೇಳುತ್ತಿರುವುದೇ? ಖಂಡಿತ ಅಲ್ಲ. ಅವರ ಮಾತಿನ ಅರ್ಥ- ಸಹೋದರರ  ನಡುವಿನ ಸಂಬಂಧಗಳು ಎಷ್ಟು ಗಾಢ ಹಾಗೂ ಆಪ್ತವಾಗಿರಬೇಕೆಂದರೆ ಪರಸ್ಪರರ ಕಿಸೆಯಿಂದ ಹಣ ತೆಗೆಯಲು ಅನುಮತಿಯನ್ನೂ  ಪಡೆಯಬೇಕೆಂದಿಲ್ಲ. (ನಾವು ನಮ್ಮ ಅತಿ ಆಪ್ತರ ಕಿಸೆಗೆ ಮಾತ್ರ ಕೈ ಹಾಕುವುದು)
ಇಂದು ತಂದೆ-ತಾಯಿ, ಮಕ್ಕಳ ಹಕ್ಕುಗಳ ಬಗ್ಗೆ ಎಲ್ಲರೂ ಮಾತಾಡುತ್ತಾರೆ. ಆದರೆ ಸೋದರರ ನಡುವಿನ ಪರಸ್ಪರ ಸಂಬಂಧಗಳು  ಶಿಥಿಲಗೊಳ್ಳುವುದರ ಬಗ್ಗೆ ಎಲ್ಲರೂ ಮರೆತ ಹಾಗಿದೆ. ಒಂದೇ ಮನೆಯಲ್ಲಿ ವಾಸಿಸುವ ಸೋದರರ ನಡುವಿನ ಸಂಬಂಧಗಳು ಹೇಗಿವೆ?  ಒಂದೇ ಚಾಪೆಯಲ್ಲಿ ಪರಸ್ಪರ ಅಪ್ಪಿ ಹಿಡಿದು ಮಲಗಿ, ಒಟ್ಟಿಗೆ ಕುಳಿತು ಊಟ ಮಾಡಿ, ಒಟ್ಟಿಗೆ ಆಟವಾಡಿ, ಪರಸ್ಪರ ಕೈ ಹಿಡಿದು ಶಾಲೆ  ಅಂಗಡಿಗಳಿಗೆ ಹೋಗುತ್ತಾ ಆತ್ಮೀಯತೆಯೊಂದಿಗೆ ದೊಡ್ಡವರಾದ ಸಹೋದರರು, ಸ್ವಲ್ಪ ಬೆಳೆದ ನಂತರ ಆ ಆತ್ಮೀಯವಾದ ಹಾಗೂ  ಪವಿತ್ರವಾದ ಸಂಬಂಧದಿಂದ ಯಾಕೆ ದೂರವಾಗುತ್ತಾರೆ?

ಇಂದು ಹೆಚ್ಚು ಕಡಿಮೆ ಎಲ್ಲರ ಮನೆಗಳಲ್ಲಿ ಸಹೋದರರ ನಡುವೆ ಮಾತುಕತೆ ಬಹಳ ಕಡಿಮೆ. ಅದರ ಅರ್ಥ ಕೋಪ ಎಂದು ಅಲ್ಲ,  ಏನಾದರೂ ಅಗತ್ಯವಿದ್ದರೆ ಸ್ವಲ್ಪ ಮಾತುಕತೆ. ಕೆಲವು ಮನೆಗಳಲ್ಲಂತೂ ಸಹೋದರರ ನಡುವಿನ ಮಾತುಕತೆ ತಾಯಿಯ ಮೂಲಕ ಅಥವಾ ಅಕ್ಕ ತಂಗಿಯರ ಮೂಲಕ ನಡೆಯುವುದು. ಒಂದೇ ಮನೆಯಲ್ಲಿದ್ದೂ ಯಾಕೆ ಹೀಗಾಗುತ್ತದೆ? ಇದರ ಅರ್ಥ ಸಹೋದರರ ನಡುವೆ  ಪ್ರೀತಿ ಇಲ್ಲ ಎಂದು ಅಲ್ಲ. ಒಂದೇ ರಕ್ತ ಹರಿಯುವ ಕಾರಣ ತನ್ನ ಸೋದರನಿಗೆ ಏನಾದರೂ ಸಂಕಷ್ಟ ಬಂದರೆ ಪ್ರಥಮವಾಗಿ ಸಹಾಯಕ್ಕೆ  ಬರುವುದು ಆತನ ಸಹೋದರರೇ ಆಗಿರುತ್ತಾರೆ. ಹಾಗಾದರೆ ಪರಸ್ಪರ ಪ್ರೀತಿಯನ್ನು ಪ್ರಕಟಿಸಲು ಸಂಕಷ್ಟ ಬರುವುದನ್ನೇ ಕಾಯಬೇಕೇ? ತನ್ನ ಎಲ್ಲ ಕಷ್ಟ ಸುಖಗಳನ್ನು ಸ್ನೇಹಿತರೊಂದಿಗೆ ಹಂಚುವ ನಾವು ಒಂದೇ ರಕ್ತ ಹರಿಯುತ್ತಿರುವ ನಮ್ಮ ಸೋದರರೊಂದಿಗೆ ಒಂದೇ  ಒಂದು ವಿಷಯವನ್ನು ಹಂಚುವುದಿಲ್ಲ. ನಮ್ಮ ಸೋದರನ ಬಗ್ಗೆ ಏನಾದರೂ ವಿಷಯ ತಿಳಿಯಬೇಕಿದ್ದರೆ ಅದನ್ನು ಆತನ ಆಪ್ತ  ಸ್ನೇಹಿತರೊಂದಿಗೆ ಕೇಳಿದರೆ ಮಾತ್ರ ತಿಳಿಯುತ್ತದೆ.

ಸೋದರರ ನಡುವಿನ ಸಂಬಂಧಗಳು ಹೀಗಾಗಲು ಬೇರೆ ಬೇರೆ ಕಾರಣಗಳಿರಬಹುದು. ಅದು ಬಹುಶಃ ಹಣದ ವಿಷಯದಲ್ಲಿರಬಹುದು, ಮನೆಗೆ ಖರ್ಚು ಕೊಡುವ ವಿಷಯದಲ್ಲಿರಬಹುದು, ಅಥವಾ ಮದುವೆಯಾದ ನಂತರವಾಗಿರಬಹುದು. ಏನಿದ್ದರೂ ಅವುಗಳನ್ನೆಲ್ಲಾ ಬದಿಗೊತ್ತಿ ಸೋದರರೊಂದಿಗೆ ಚಂದದಿಂದ ನಯವಾಗಿ ಮಾತನಾಡಲಾದರೂ ಪ್ರಯತ್ನಿಸಬೇಕು.

ಕೆಲವು ಕಡೆ ಅಣ್ಣಂದಿರ ಕಠೋರ ಸ್ವಭಾವ ಅಥವಾ ತಮ್ಮಂದಿರ ಹಠ ಸ್ವಭಾವ ಕೂಡಾ ಸಂಬಂಧಗಳು ಶಿಥಿಲಗೊಳ್ಳಲು  ಕಾರಣವಾಗಿರಬಹುದು. ಸಹೋದರರು ಪರಸ್ಪರ ನಯವಾಗಿ ವರ್ತಿಸುವ ಕುಟುಂಬಗಳಲ್ಲಿ ಸಹೋದರ ಸಂಬಂಧಗಳು  ಸುದೃಢವಾಗಿರುತ್ತವೆ.

ಅಲ್ಲಾಹನು ಮೂಸಾ(ಅ)ರನ್ನು ನೀವು ಫಿರ್‌ಔನನ ಬಳಿಗೆ ಹೋಗಿ ಎಂದಾಗ ಹ. ಮೂಸಾ(ಅ) ತನ್ನ ಸಹೋದರ ಹಾರೂನ್(ಅ)ರನ್ನು  ತನ್ನೊಂದಿಗೆ ಕಳುಹಿಸಲು ಅಲ್ಲಾಹನೊಂದಿಗೆ ವಿನಂತಿಸುತ್ತಾರೆ. ನಾವಾಗಿದ್ದರೆ ನಮ್ಮ ಸಹೋದರನನ್ನು ನನ್ನೊಂದಿಗೆ ಕಳುಹಿಸಲು ವಿನಂತಿಸುತ್ತಿದ್ದೆವೇ? ಇನ್ನು ಕೆಲವು ಕಡೆ ಅಣ್ಣ-ತಮ್ಮಂದಿರು ವೈಮನಸ್ಸು ಹೊಂದಿ ಪರಸ್ಪರ ಮಾತುಕತೆಯೇ ನಡೆಯದ ಸ್ಥಿತಿ ಇದೆ. ಇದು ಅಲ್ಲಾಹನ ಕ್ರೋಧಕ್ಕೆ ಪಾತ್ರವಾಗುವ ಕೆಟ್ಟ ಗುಣ. ಏಕೆಂದರೆ ಕುಟುಂಬ ಸಂಬಂಧ ಮುರಿದವನ ಪ್ರಾರ್ಥನೆಯನ್ನು ಅಲ್ಲಾಹನು  ಸ್ವೀಕರಿಸುವುದಿಲ್ಲ.

ಆದ್ದರಿಂದ ಯಾರೇ ಆಗಲಿ ಸಣ್ಣ ಅಥವಾ ದೊಡ್ಡ ಕಾರಣದಿಂದ ತನ್ನ ಸಹೋದರನೊಂದಿಗೆ ಸಂಬಂಧವನ್ನು ಮುರಿ ದಿದ್ದರೆ ಅದು ಅವನ ಪರಲೋಕವನ್ನು ನಷ್ಟ ಮಾಡುವ ಸಾಧ್ಯತೆ ಇದೆ ಎಂಬುದನ್ನು ಮರೆಯಬಾರದು.