ನಷ್ಟ ಪರಿಹಾರದಿಂದ ಭಾರೀ ಮೊತ್ತವನ್ನು ಶುಲ್ಕವಾಗಿ ‌ಪಡೆದ ಆರೋಪ; ವಕೀಲನ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸಿದ ಅಬುಧಾಬಿ ನ್ಯಾಯಾಲಯ

0
733

ಸನ್ಮಾರ್ಗ ವಾರ್ತೆ

ಅಬುದಾಭಿ: ಚಿಕಿತ್ಸೆಯ ವೇಳೆ ನಿರ್ಲಕ್ಷ್ಯ ವಹಿಸಿದುದಕ್ಕಾಗಿ ಆಸ್ಪತ್ರೆಯ ಮೇಲೆ ವಿಧಿಸಲಾದ ದಂಡದ ಮೊತ್ತದಿಂದ ಭಾರೀ ಮೊತ್ತವನ್ನು ನ್ಯಾಯವಾದಿ ಪಡೆದುಕೊಂಡ ಪ್ರಕರಣವನ್ನು ಅಬುದಾಭಿ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದು ನ್ಯಾಯವಾದಿಯ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸಿದೆ. ಪತ್ನಿಯ ಚಿಕಿತ್ಸೆಯಲ್ಲಿ ಆಸ್ಪತ್ರೆ ನಿರ್ಲಕ್ಷ್ಯ ತೋರಿದ್ದನ್ನು ಪ್ರಶ್ನಿಸಿ ಪತಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು‌.

ನಿರ್ಲಕ್ಷ್ಯ ವಹಿಸಿದುದಕ್ಕಾಗಿ ಆಸ್ಪತ್ರೆ ದಂಡವಾಗಿ 30 ಲಕ್ಷ ದಿರ್ಹಮನ್ನು ನಷ್ಟ ಪರಿಹಾರವಾಗಿ ನೀಡಿದ್ದು ಇದರಲ್ಲಿ 25 ಶೇಕಡಾ ಹಣವನ್ನು ಶುಲ್ಕದ ಹೆಸರಲ್ಲಿ ನ್ಯಾಯವಾದಿ ಪಡೆದುಕೊಂಡಿದ್ದರು. ಕರ್ತವ್ಯಲೋಪವೆಸಗಿದ ಕಾರಣಕ್ಕಾಗಿ ಅವರ ಲೈಸನ್ಸ್‌‌ಅನ್ನು ರದ್ದುಪಡಿಸಲಾಗಿದೆ. ನಷ್ಟ ಪರಿಹಾರವನ್ನು ಸಂತ್ರಸ್ತರಿಗೆ ನೀಡದೆ ನ್ಯಾಯವಾದಿ ಅದರಿಂದ ಶುಲ್ಕದ ರೂಪದಲ್ಲಿ ಹಣ ಪಡಕೊಳ್ಳಲು ಪ್ರಯತ್ನಿಸಿದ್ದು ಈ ಕ್ರಮಕ್ಕೆ ಕಾರಣವಾಗಿದೆ. ಸಂತ್ರಸ್ತನು ನೀಡಿರುವ ಪವರ್ ಆಫ್ ಅಟಾರ್ನಿಯ ಮೂಲಕ ನ್ಯಾಯವಾದಿ ಹಣವನ್ನು ಪಡಕೊಳ್ಳಲು ಪ್ರಯತ್ನಿಸಿದ್ದರು.

ಒಟ್ಟು 30 ಲಕ್ಷ ದಿರ್ಹಮ್‌ನಿಂದ ಹತ್ತು ಲಕ್ಷ ದಿರ್ಹಮನ್ನು ಪಡೆದುಕೊಂಡು ಉಳಿದ ಹಣವನ್ನು ಆ ಸಂತ್ರಸ್ತೆಯ ಅಕೌಂಟಿಗೆ ನ್ಯಾಯವಾದಿ ವರ್ಗಾಯಿಸಿದ್ದರು.