ಸನ್ಮಾರ್ಗ ವಾರ್ತೆ
ಹೈದರಾಬಾದ್: ಜಮೀನು ವಿವಾದದ ಹಿನ್ನೆಲೆಯಲ್ಲಿ ಮಸೀದಿಯೊಂದರ ಭಾಗವನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ ಹೈದರಾಬಾದ್ನ ಚಿಂತಲ್ಮೇಡುವಿನಲ್ಲಿ ಭಾರಿ ಪ್ರತಿಭಟನೆ ಭುಗಿಲೆದ್ದಿದೆ. ಮಸೀದಿಯು ದೇವಸ್ಥಾನಕ್ಕೆ ಸೇರಿದ ಭೂಮಿಯಲ್ಲಿದೆ ಎಂದು ಗುಂಪೊಂದು ಪ್ರತಿಪಾದಿಸುತ್ತಿದೆ. ಈ ಘಟನೆಯನ್ನು ಖಂಡಿಸಿ ಎಐಎಂಐಎಂ ನಾಯಕರು ಹೈದರಾಬಾದ್ನಲ್ಲಿ ಪ್ರತಿಭಟನೆ ನಡೆಸಿದರು. ಇದರ ಬೆನ್ನಲ್ಲೇ ಬಹಾದ್ದೂರ್ಪುರ ಶಾಸಕ ಮೊಹಮ್ಮದ್ ಮುಬೀನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜೇಂದ್ರನಗರ ಕ್ಷೇತ್ರದ ಮಸೀದ್-ಎ-ಮೊಹಮ್ಮದಿಯಾ ಮುಂದೆ ಕಂದಾಯ ಅಧಿಕಾರಿಗಳು, ಪೊಲೀಸರು ಹಾಗೂ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಸಿಬ್ಬಂದಿ ಸೋಮವಾರ ಬೆಳಿಗ್ಗೆ ಆಗಮಿಸಿದರು. ಅವರು ವಿವಾದಿತ ಗೋಡೆಯನ್ನು ಧ್ವಂಸಗೊಳಿಸಲು ಪ್ರಾರಂಭಿಸಿದರು ಎಂದು ವರದಿಯಾಗಿದೆ. ಈ ಗೋಡೆಯ ಮೇಲಿನ ಹಕ್ಕಿನ ಕುರಿತು ಕಳೆದ ಕೆಲವು ದಿನಗಳಿಂದ ಪ್ರದೇಶದಲ್ಲಿ ಉದ್ವಿಗ್ನತೆ ನೆಲೆಸಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪ್ರದೇಶದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಎಐಎಂಐಎಂ ಕಾರ್ಪೊರೇಟರ್ ಮುಹಮ್ಮದ್ ನವಾಜುದ್ದೀನ್ ಅಹಮದ್ ‘ಸಿಯಾಸತ್.ಕಾಮ್’ಗೆ ನೀಡಿರುವ ಮಾಹಿತಿಯ ಪ್ರಕಾರ, 300 ಚದರ ಅಡಿಯ ನಿವೇಶನದಲ್ಲಿ ಒಂದೂವರೆ ವರ್ಷದ ಹಿಂದೆ ಮಸೀದಿಯನ್ನು ನಿರ್ಮಿಸಲಾಗಿತ್ತು. “ಒಂದೂವರೆ ವರ್ಷದ ಹಿಂದೆಯೇ ಗಡಿಗಳನ್ನು ಗುರುತಿಸಲಾಗಿತ್ತು. ಆದರೆ ಎಂಡೋಮೆಂಟ್ ಇಲಾಖೆಯು ಈಗ ಅದನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ” ಎಂದು ಅವರು ಹೇಳಿದರು.
ಕಳೆದ ವಾರ ಈ ಗಡಿ ವಿವಾದ ತಲೆದೂರಿತ್ತು. ಆಗ ಮಸೀದಿಯ ಒಂದು ಭಾಗವನ್ನು ಕೆಡವಲು ಜೆಸಿಬಿ ಯಂತ್ರಗಳನ್ನು ತರಲಾಗಿತ್ತು. ಎಐಎಂಐಎಂ ನಾಯಕರ ಹಸ್ತಕ್ಷೇಪದ ನಂತರ ಜೆಸಿಬಿಯನ್ನು ಹಿಂಪಡೆಯಲಾಯಿತು ಎಂದು ಅವರು ಸ್ಪಷ್ಟಪಡಿಸಿದರು. ಈ ಭೂಮಿಯು ವಕ್ಫ್ ಮಂಡಳಿಗೆ ಸೇರಿದ್ದು, ಮಸೀದಿಯನ್ನು ಕಾನೂನುಬದ್ಧವಾಗಿ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೈದರಾಬಾದ್ ಪೊಲೀಸ್ ಕಮಿಷನರ್ ಮತ್ತು ಮಂಡಲ ಕಂದಾಯ ಅಧಿಕಾರಿಗೆ ಹಸ್ತಾಂತರಿಸಲಾಗಿದೆ. ಎಂಡೋಮೆಂಟ್ ಇಲಾಖೆಯು ಭೂ ಮಾಫಿಯಾಗಳೊಂದಿಗೆ ಶಾಮೀಲಾಗಿದೆ ಮತ್ತು ಚಿಂತಲ್ಮೇಡು ನಿವಾಸಿಗಳಾದ ಗುಜ್ಜರ್ ಗೌಸ್ ಹಾಗೂ ನಾ ಸಿಂಗ್ ಇದರ ಹಿಂದೆ ಇದ್ದಾರೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ, ಶಾಸಕ ಮೊಹಮ್ಮದ್ ಮುಬೀನ್ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದು ರಾಂಗೋಪಾಲಪೇಟೆ ಪೊಲೀಸ್ ಠಾಣೆಗೆ ಸ್ಥಳಾಂತರಿಸಿದರು. ತೆರವು ಪ್ರಕ್ರಿಯೆಯ ನೇತೃತ್ವ ವಹಿಸಿದ್ದ ಅಧಿಕಾರಿಗಳೊಂದಿಗೆ ಶಾಸಕರು ವಾಗ್ವಾದ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
“ಜಂಟಿ ಸರ್ವೇ ನಡೆಸುವುದಾಗಿ ನೀವು ಭರವಸೆ ನೀಡಿದ್ದೀರಿ. ಆ ಸರ್ವೇ ನಡೆಸಲಾಗಿದೆಯೇ ಎಂದು ನನಗೆ ಹೇಳಿ. ಜಂಟಿ ಸರ್ವೇ ನಡೆಸದೆ ನಾವು ಕ್ರಮ ಕೈಗೊಳ್ಳುವುದು ಹೇಗೆ? ನಮ್ಮ ಬಳಿ ಅಗತ್ಯ ದಾಖಲೆಗಳಿವೆ” ಎಂದು ಶಾಸಕರು ವೀಡಿಯೊದಲ್ಲಿ ಅಧಿಕಾರಿಗಳನ್ನು ಕೇಳುತ್ತಿರುವುದು ಕಂಡುಬಂದಿದೆ. ಪ್ರತಿಭಟನಾಕಾರರು ‘ಪೋಲೀಸ್ ದೌರ್ಜನ್ಯ ಕೊನೆಗೊಳಿಸಿ’ ಎಂದು ಘೋಷಣೆಗಳನ್ನು ಕೂಗುತ್ತಿದ್ದಂತೆ ಕಾರ್ಪೊರೇಟರ್ ನವಾಜುದ್ದೀನ್ ಅಹಮದ್ ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವ ಮತ್ತೊಂದು ವೀಡಿಯೊ ಹೊರಬಂದಿದೆ.












