ಹರಿಯಾಣದಲ್ಲಿ ಯಾಕೆ ಹೀಗಾಯಿತು ಅನ್ನೋದು ಅರ್ಥವಾಗುತ್ತಿಲ್ಲ: ಯೋಗೇಂದ್ರ ಯಾದವ್

0
88

ಸನ್ಮಾರ್ಗ ವಾರ್ತೆ

ಹರಿಯಾಣ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದಕ್ಕೆ ಖ್ಯಾತ ವಿಶ್ಲೇಷಕ ಯೋಗೇಂದ್ರ ಯಾದವ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಹರಿಯಾಣದಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ಅವರು ಸಹಿತ ಅನೇಕ ಚುನಾವಣಾ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ 90 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಪಡೆಯುವ ಮೂಲಕ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿತ್ತು.

ಹರಿಯಾಣದಲ್ಲಿ ಏನು ನಡೆದಿದೆ ಎಂದು ನನ್ನ ಗೆಳೆಯರು ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಮೆಸೇಜ್ ಮಾಡ್ತಾ ಇದ್ದಾರೆ. ನಿಜ ಏನೆಂದರೆ ನನಗೆ ಒಂದೂ ಗೊತ್ತಾಗುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ನಾನು ಹರಿಯಾಣದಲ್ಲಿ ಸುತ್ತಾಡಿದ್ದೇನೆ. ಚುನಾವಣೆಯ ಭವಿಷ್ಯ ನಾನು ಹೇಳುವವನು ಅಲ್ಲದಿದ್ದರೂ ನನ್ನ ಬರಹ ಭಾಷಣಗಳಲ್ಲಿ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಹೇಳಿದ್ದೆ. ಹರಿಯಾಣದಲ್ಲಿ ಕಾಂಗ್ರೆಸ್ ಸರಕಾರ ರಚಿಸಲಿದೆ ಎಂದು ಕೂಡ ನಾನು ಹಲವು ಬಾರಿ ಹೇಳಿದ್ದೇನೆ. ಅಲ್ಲಿನದು ಕಾಂಗ್ರೆಸ್ ಪರವಾದ ಗಾಳಿಯೋ ಅಥವಾ ಸುಂಟರಗಾಳಿಯೋ ಎಂಬ ಬಗ್ಗೆ ಮಾತ್ರ ನನಗೆ ತಕರಾರಿತ್ತು. ಆದರೆ ತೀರ ವಿರುದ್ಧ ಬೆಳವಣಿಗೆ ಇದೀಗ ನಡೆದಿದೆ. ಯಾಕೆ ಹೀಗಾಯ್ತು ಅನ್ನುವುದು ಅರ್ಥವಾಗುತ್ತಿಲ್ಲ ಎಂದವರು ಹೇಳಿದ್ದಾರೆ.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಬಗ್ಗೆ ಬಿಜೆಪಿ ನಾಯಕರಲ್ಲೇ ವಿಶ್ವಾಸ ಇರಲಿಲ್ಲ. ಕಾಂಗ್ರೆಸ್ಸಿಗೆ ಬಹುಮತ ಕಳೆದು ಎಷ್ಟು ಸೀಟು ಹೆಚ್ಚು ಸಿಗಲಿದೆ ಎಂಬ ಬಗ್ಗೆ ಮಾತ್ರ ಚರ್ಚೆ ಇತ್ತು. ಆದರೆ ಇದೀಗ ಎಲ್ಲವೂ ತಾರು ಮಾರಾಗಿದೆ ಎಂದವರು ಹೇಳಿದ್ದಾರೆ.