ಖದೀಜ ನುಸ್ರತ್ ಅಬುಧಾಬಿ
ಕುಟುಂಬವು ಒಂದು ಉತ್ತಮ ತರಬೇತಿ, ಸಮಾಲೋಚನೆ ಮತ್ತು ಮನಶ್ಶಾಂತಿಯ ಕೇಂದ್ರವಾಗಿದೆ. ಉತ್ತಮ ಕುಟುಂಬಗಳು ಇದ್ದರೆ ಮಾತ್ರ ಶಾಂತಿಯುತ ಸಮಾಜದ ನಿರ್ಮಾಣ ಸಾಧ್ಯ. ಮನುಷ್ಯನಿಗೆ ಕುಟುಂಬದಿಂದ ಲಭಿಸುವಷ್ಟು ಆನಂದ ಮತ್ತು ಸಂತೃಪ್ತಿ ಉತ್ತಮ ಉದ್ಯೋಗ, ಅತ್ಯುನ್ನತ ವಿದ್ಯಾಭ್ಯಾಸ, ಕಾರು, ಬಂಗಲೆ, ಕೈತುಂಬ ಹಣ, ವ್ಯಾಪಾರವಹಿವಾಟುಗಳಿದ್ದರೂ ಸಿಗಲು ಸಾಧ್ಯವಿಲ್ಲ. ಹಗಲು ರಾತ್ರಿ ನಿರಂತರ ತಮ್ಮವರಿಂದ ಪ್ರೀತಿ, ಸ್ನೇಹ, ಆರೈಕೆ, ವಾತ್ಸಲ್ಯ, ಸಂರಕ್ಷಣೆ, ಸಾಂತ್ವನ, ಸಮಾಧಾನ, ಬೆಂಬಲ, ಪ್ರೇರಣೆಯನ್ನು ಬಯಸುವುದು ಮಾನವನ ನೈಸರ್ಗಿಕ ಗುಣವಾಗಿದೆ. ಪ್ರೀತಿ ಮತ್ತು ಮನಸ್ಸಮಾಧಾನವೆಂಬುದು ಹಣ ಕೊಟ್ಟು ಪಡೆಯಲಸಾಧ್ಯವಾದಂತಹ ಮಾನಸಿಕ ಸ್ಥಿತಿಯಾಗಿರುತ್ತದೆ. ಮಾತಾಪಿತರು ಮಕ್ಕಳಿಂದ, ಮಕ್ಕಳು ಮಾತಾಪಿತರಿಂದ, ಪತಿ-ಪತ್ನಿಯರು, ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರು ಪರಸ್ಪರ ಬಯಸುವ ಪ್ರೀತಿಯು ಬೇರೆ ಬೇರೆ ಕಾಲದಲ್ಲಿ ವಿಭಿನ್ನ ರೀತಿಯದ್ದಾಗಿರುತ್ತದೆ.
ಕೆಲವು ವರ್ಷಗಳ ಹಿಂದಿನ ಇತಿಹಾಸವನ್ನು ನೋಡಿದರೆ ಹೆಚ್ಚಿನ ಮನೆಗಳು ಅವಿಭಕ್ತ ಕುಟುಂಬಗಳಾಗಿದ್ದವು. ಅಂದು ಮನೆಯಲ್ಲಿ ಸೌಕರ್ಯಗಳ ಕೊರತೆ, ಮಿತವಾದ ಆಹಾರ ಇರುತ್ತಿತ್ತು. ಆದರೆ ಕುಟುಂಬದ ಸದಸ್ಯರ ಮಧ್ಯೆ ಪ್ರೀತಿ ಇರುತ್ತಿತ್ತು. ಪರಸ್ಪರ ಮುಖ ನೋಡಿ ಮಾತನಾಡಲು, ಸುಖ ದುಃಖಗಳನ್ನು ಪರಸ್ಪರ ಹಂಚಿಕೂಳ್ಳಲು ಸಮಯ ಸಿಗುತ್ತಿತ್ತು. ಸಮಸ್ಯೆಗಳಿದ್ದರೆ ಕುಟುಂಬದ ಹಿರಿಯ ಸದಸ್ಯರು ಸರಿಯಾದ ಸದುಪದೇಶಗಳನ್ನು ನೀಡುತ್ತಾ ಬಗೆಹರಿಸಿಕೊಳ್ಳುತ್ತಿದ್ದರು. ಆದರೆ ಇಂದು ಹೆಚ್ಚಿನ ಎಲ್ಲಾ ಮನೆಗಳಲ್ಲಿ ಎಲ್ಲಾ ಸುಖ ಸೌಕರ್ಯಗಳಿವೆ. ಹೊಟ್ಟೆ ತುಂಬಾ ತಿನ್ನಲು ಹಲವು ರೀತಿಯ ಆಹಾರ ಪಾನೀಯಗಳು ಇದೆ. ಧರಿಸಲು ಅತ್ಯಾಕರ್ಷಕವಾದ ಬಟ್ಟೆ ಬರೆಗಳಿವೆ. ಆದರೆ ಪರಿಶುದ್ದವಾದ ಮನಸ್ಸಿನಿಂದ ಪ್ರೀತಿಸುವವರ ಕೊರತೆ ಇದೆ. ಎಲ್ಲಾ ರೀತಿಯ ತಂತ್ರಜ್ಞಾನಗಳ ಸೌಲಭ್ಯವಿದೆ. ಬೆರಳ ತುದಿಯಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಕಾಲ್ಪನಿಕ ಗೆಳೆಯರು ಮತ್ತು ಹಿಂಬಾಲಕರು ಇದ್ದಾರೆ. ಇದರಿಂದಾಗಿ ತಮ್ಮ ಹತ್ತಿರವಿರುವ ನಿಕಟ ಬಂಧುಗಳ ಮುಖ ನೋಡಿ ಮಾತನಾಡಲು ಸಮಯ ಸಿಗುವುದಿಲ್ಲ. ತನ್ನವರಿಂದ ನಿರ್ಲಕ್ಷಿಸಲ್ಪಡುವಾಗ, ತನಗೆ ಸಿಗಬೇಕಾದಂತಹ ಹಕ್ಕು, ಘನತೆ, ಗೌರವಗಳು ಸಿಗದೇ ಹೋದಾಗ ಮನಸ್ಸಿನಲ್ಲಿ ನಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತಾ ಪ್ರೀತಿಗಾಗಿ ಹೋರಾಡಬೇಕಾದಂತಹ ಪರಿಸ್ಥಿತಿ ಉಂಟಾಗಿದೆ.
ಕುಟುಂಬದಲ್ಲಿ ನಮ್ಮ ಮಕ್ಕಳು, ಮಾತಾಪಿತರು, ಸಹೊದರ, ಸಹೊದರಿಯರು, ನಾದಿನಿ, ಸೊಸೆ, ಅತ್ತೆಮಾವ ಹೀಗೆ ಎಲ್ಲರ ಸ್ವಭಾವ, ವ್ಯಕ್ತಿತ್ವ ನಾವು ನಿರೀಕ್ಷಿಸಿದಂತೆ, ನಾವು ಇಷ್ಟ ಪಡುವಂತೆ ಇರಬೇಕೆಂದಿಲ್ಲ. ಎಲ್ಲರಲ್ಲೂ ಕೆಲವು ಒಳಿತು, ಕೆಡುಕು, ಕುಂದುಕೊರತೆಗಳಿರುತ್ತದೆ. ನೋಡುವವರ ಮನಸ್ಸು ಮತ್ತು ಕಣ್ಣುಗಳು ಕಲುಷಿತವಾಗಿದ್ದರೆ ಎಲ್ಲ ಒಳಿತುಗಳು ಉತ್ತಮವಾಗಿ ಕಾಣಬೇಕೆಂದಿಲ್ಲ. ಎಲ್ಲರ ಮನಸ್ಸು, ಭಾವನೆ, ಅಭಿರುಚಿ ಒಂದೇ ರೀತಿ ಇರುವುದಿಲ್ಲ. ಎಲ್ಲರಿಗೂ ತಮ್ಮದೇ ಆದ ಆಹಾರ, ವಸ್ತ್ರ, ಜೀವನ ರೀತಿಗಳಿರುತ್ತವೆ. ಹಣ ಖರ್ಚು ಮಾಡುವ ರೀತಿ ಹಾಗೂ ಧಾರ್ಮಿಕ ವಿಷಯಗಳಲ್ಲಿ ತಮ್ಮದೇ ಇಷ್ಟಾನಿಷ್ಟ, ಆಯ್ಕೆ, ಅಭಿಪ್ರಾಯ, ಸ್ವಾತಂತ್ರ್ಯವಿರುತ್ತದೆ. ಒಬ್ಬರು ಇನ್ನೊಬ್ಬರನ್ನು ನಿಯಂತ್ರಿಸಲು, ಅಧಿಕಾರ ಚಲಾಯಿಸಲು ಮತ್ತು ಇತರರ ಹಕ್ಕುಗಳನ್ನು ಅಕ್ರಮವಾಗಿ ಪಡೆಯಲು ಪ್ರಯತ್ನಿಸುವಾಗ ಕುಟುಂಬದಲ್ಲಿ ಸಮಸ್ಯೆಗಳು ಆರಂಭವಾಗುತ್ತದೆ. ಉತ್ತಮ ಸಂಬಂಧಕ್ಕಾಗಿ ಎಲ್ಲರೊಂದಿಗೂ ಸಹನೆ, ತ್ಯಾಗ, ಹೊಂದಾಣಿಕೆ, ವಿಶಾಲ ಮನಸ್ಸು, ಕ್ಷಮೆ ಅವಲಂಭಿಸಬೇಕಾಗಿರುವುದು ಅತ್ಯಗತ್ಯವಾಗಿದೆ. ಎಲ್ಲರ ಸ್ವಭಾವ ನಾವು ನಿರೀಕ್ಷಿಸಿದಂತೆ ಒಂದೇ ಆಗಿರುತ್ತಿದ್ದರೆ ಅಲ್ಲಿ ಸಹನೆಗೆ ಯಾವುದೇ ಅರ್ಥವಿರುತ್ತಿರಲಿಲ್ಲ. ಯಾರಾದರೂ ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದರೆ ಅವರೊಡನೆ ಒಳಿತಿನ ವರ್ತನೆ ಮಾಡಬೇಕೆಂದು ಇಸ್ಲಾಮ್ ಧರ್ಮವು ಆದೇಶಿಸುತ್ತದೆ.
ಕೌನ್ಸಿಲಿಂಗ್ ಎಂದರೆ ಒಬ್ಬ ವ್ಯಕ್ತಿಯ ಉತ್ತಮ ಭವಿಷ್ಯಕ್ಕಾಗಿ ಸ್ವಭಾದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಮಾಡಲು ಮಾರ್ಗದರ್ಶನ ನೀಡುವುದಾಗಿದೆ. ಒಬ್ಬ ವ್ಯಕ್ತಿಗೆ ನಕಾರಾತ್ಮಕ ಚಿಂತನೆಗಳಿಂದ ದೂರವಿರಲು ಮತ್ತು ಸಮಾಜದಲ್ಲಿ ಉತ್ತಮ ಮನುಷ್ಯನಾಗಲು ಮಾಡುವ ಸಹಾಯವಾಗಿರುತ್ತದೆ. ಮಗು ಜನಿಸುವಾಗಲೇ ಎಲ್ಲಾ ವಿಷಯಗಳಲ್ಲಿ ಜ್ಞಾನ, ಪಾಂಡಿತ್ಯ, ಪರಿಪೂರ್ಣತೆಯನ್ನು ಹೊಂದಿರುವುದಿಲ್ಲ. ಕಾಲಕ್ರಮೇಣ ವಿದ್ಯಾಭ್ಯಾಸ, ತರಭೇತಿ, ಉಪದೇಶ, ಸಮಾಲೋಚನೆ, ಅಧ್ಯಯನ, ಗೆಳೆತನ ಮತ್ತು ನಾವು ವಾಸಿಸುವ ವಾತಾವರಣದಿಂದ ತಮ್ಮ ಸ್ವಭಾವ, ಚಾರಿತ್ರ್ಯದಲ್ಲಿ ಬದಲಾವಣೆಯಾಗುತ್ತಾ ಹೋಗುತ್ತದೆ.
ಈ ಜಗತ್ತಿನಲ್ಲಿ ಯಾವುದೇ ಕುಂದು ಕೊರತೆಗಳಿಲ್ಲದ ಪರಿಪೂರ್ಣ ಮನುಷ್ಯರಿಲ್ಲ. ಎಲ್ಲಾ ಸತ್ಕರ್ಮ, ಒಳಿತುಗಳನ್ನು ಮಾಡುವ, ತಮ್ಮ ಎಲ್ಲಾ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವ ಯಾವ ಮನುಷ್ಯನೂ ಇಲ್ಲ. ಆದರೆ ಎಲ್ಲರೂ ತಮಗೆ ಸಾಧ್ಯವಾದ ರೀತಿಯಲ್ಲಿ ಉತ್ತಮವಾಗಿ ನಿರ್ವಹಿಸಲು ಪ್ರಯತ್ನಿಸುತ್ತಾರೆ. ನೀವು ಎಷ್ಟು ವಿದ್ಯಾವಂತರು, ಶ್ರೀಮಂತರು, ಎಷ್ಟು ಹಣ ಖರ್ಚು ಮಾಡುತ್ತೀರೋ, ಎಷ್ಟು ಧಾರ್ಮಿಕ ಜ್ಞಾನ ಇದೆ, ಎಷ್ಟು ಕುರ್ಆನ್ ಕಂಠ ಪಾಠ ಮಾಡಿದ್ದೀರೋ ಎಂಬುದು ಮುಖ್ಯವಲ್ಲ. ಕುಟುಂಬದಲ್ಲಿ ಅಗತ್ಯದ ಸಮಯದಲ್ಲಿ ಯಾರು ಹೆಚ್ಚು ಸಹಾಯ ಮಾಡುತ್ತಾರೆ, ಜನರೊಂದಿಗೆ ಉತ್ತಮ ಮಾತನಾಡುತ್ತಾರೆ ಮತ್ತು ಒಳಿತಿನ ವರ್ತನೆ ಮಾಡುತ್ತಾರೆ ಎಂಬುದು ಒಬ್ಬ ವ್ಯಕ್ತಿಯ ಚಾರಿತ್ರ್ಯವನ್ನು ಪ್ರತಿಬಿಂಬಿಸುತ್ತದೆ. ಜನರೊಂದಿಗೆ ಉತ್ತಮ ಮಾತನಾಡುವವರು ಮತ್ತು ಉಪಕಾರ ಮಾಡುವವರನ್ನು ಕುಟುಂಬ ಮತ್ತು ಸಮಾಜದಲ್ಲಿ ಎಲ್ಲರೂ ಪ್ರೀತಿಸುತ್ತಾರೆ. ಕುಟುಂಬದಲ್ಲಿ ಯಾರು ಎಲ್ಲಿ ಹೋಗುತ್ತಾರೆ, ಏನು ತಿನ್ನುತ್ತಾರೆ, ಕುಡಿಯುತ್ತಾರೆ, ಹೇಗೆ ಸಂಪಾದಿಸುತ್ತಾರೆ, ಹೇಗೆ ಹಣ ಖರ್ಚು ಮಾಡುತ್ತಾರೆ, ಎಲ್ಲಿ ವಾಸಿಸುತ್ತಾರೆ, ಅವರ ವಸ್ತ್ರಾಭರಣ ಮತ್ತು ಧಾರ್ಮಿಕ ಕರ್ಮಗಳ ಮೇಲ್ನೋಟವಿಡುವಂತಹ ಕೆಲಸವನ್ನು ಮಾಡಬೇಡಿರಿ. ಅದೆಲ್ಲವೂ ಮಾನವರ ಕೆಲಸವಲ್ಲ. ಅದಕ್ಕಾಗಿ ಅಲ್ಲಾಹನು ಪ್ರತ್ಯೇಕವಾಗಿ ದೇವಚರರನ್ನು ನಿಯೋಗಿಸಿದ್ದಾನೆ. ಜನರ ಕರ್ಮಗಳ ಬಗ್ಗೆ ತೀರ್ಪು ನೀಡುವ ಅಧಿಕಾರ ಅಲ್ಲಾಹನಿಗೆ ಮಾತ್ರವಿದೆ.
ಕೌನ್ಸಿಲಿಂಗ್ ಯಾರಿಗೆ ಅಗತ್ಯ ಎಂಬುವುದು ಎಲ್ಲರನ್ನು ಕಾಡುವ ಒಂದು ಪ್ರಶ್ನೆಯಾಗಿದೆ. ಇದು ಮಾನಸಿಕ ರೋಗಿಗಳಿಗೆ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುವವರಿಗೆ ಇರುವಂತಹದ್ದು ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಧಾರಾಳವಾಗಿದೆ. ಆದರೆ ಕೌನ್ಸಿಲಿಂಗ್ ಎಂಬುದು ಎಲ್ಲಾ ಸಾಮಾನ್ಯ ಜನರಿಗೆ ಕೂಡಾ ಅಗತ್ಯವಾಗಿದೆ. ಬಿಡುವಿಲ್ಲದ ಜೀವನ, ಹಲವಾರು ರೀತಿಯ ಸಮಸ್ಯೆಗಳು, ಮಾನಸಿಕ ಸಂಘರ್ಷವನ್ನು ಅನುಭವಿಸದ ಮನುಷ್ಯರಿಲ್ಲ. ಕುಟುಂಬ ಜೀವನದಲ್ಲಿ ಪತಿಪತ್ನಿಯರ ನಡುವಿನ ಸಂಬಂಧ, ಮಕ್ಕಳ ಪರಿಪಾಲನೆ, ವ್ಯಾಪಾರ ವಹಿವಾಟು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಒಂದು ತರಭೇತಿ ಹೊಂದಿದ ಕೌನ್ಸಿಲರ್ ನಿಂದ ಮಾರ್ಗದರ್ಶನ, ಪ್ರೇರಣೆ ಪಡೆಯುತ್ತಾ ಜೀವನ ನಡೆಸುವಾಗ ಸಿಗುವ ಸಂತೋಷ, ಸಂತೃಪ್ತಿ ಬೇರೆಯೇ ಆಗಿರುತ್ತದೆ. ಪ್ರತಿಯೊಬ್ಬರಿಗೂ ಕೌನ್ಸಿಲರನ್ನು ವೈಯಕ್ತಿಕವಾಗಿ ಭೇಟಿಯಾಗಲು ಅಸಾಧ್ಯ. ಆಧುನಿಕ ಕಾಲದಲ್ಲಿ ನಮ್ಮ ಜೀವನ ರೀತಿ, ನಾವು ಎದುರಿಸುವ ಸವಾಲು ನಮ್ಮ ಹಿಂದಿನ ತಲೆಮಾರಿಗಿಂತ ತೀರಾ ಭಿನ್ನವಾಗಿದೆ. ಕುಟುಂಬ ಜೀವನದ ಬಗ್ಗೆ ಪ್ರೇರಣೆ ನೀಡುವಂತಹ ಬರಹಗಳು , ಪುಸ್ತಕಗಳು, ಸಾಮಾಜಿಕ ಜಾಲತಾಣಗಳಲ್ಲಿ ಉಚಿತವಾಗಿ ಲಭ್ಯವಿರುವಂತಹ ವೀಡಿಯೋ ಅಥವಾ ಇನ್ನಾವುದೇ ತರಭೇತಿ ತರಗತಿಗಳಿಂದ ಕುಟುಂಬ ಜೀವನವನ್ನು ಸುಂದರವಾಗಿಸುವ ಕಲೆ, ವಿಜ್ಞಾನ, ಮನಶಾಸ್ತ್ರ ಇತ್ಯಾದಿಗಳನ್ನು ಕಲಿಯುವುದು ಪ್ರಸಕ್ತ ಕಾಲದಲ್ಲಿ ಅತೀ ಅಗತ್ಯವಾಗಿದೆ. ಕುಟುಂಬ ಕಲಹಗಳು ಮತ್ತು ವಿವಾಹ ವಿಚ್ಛೇದನೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ನಮ್ಮ ಕುಟುಂಬದ ಎಲ್ಲಾ ಸಮಸ್ಯೆಗಳನ್ನು ನಾವೇ ಪರಿಹರಿಸುವಷ್ಟು ಪ್ರಬುದ್ಧರಾಗಬೇಕು. ಆದರೆ ಕುಟುಂಬ ಜೀವನವು ಸ್ವಾರಸ್ಯಕರವಾಗದಿದ್ದರೆ ಕೆಲವೊಮ್ಮೆ ನಮ್ಮ ಸಮಸ್ಯೆಗಳನ್ನು ಮೂರನೆಯವರಿಗೆ ತಿಳಿಸಿ ತಜ್ಞ ಸಲಹೆಗಾರರಿಂದ ಕೌನ್ಸಿಲಿಂಗ್ ಪಡೆಯುವುದು ಅಗತ್ಯವಾಗಿದೆ.












