ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದೇಶದ ಹಲವೆಡೆ ಕೊರೋನಾ ಪಾಸಿಟಿವ್ ಪ್ರಕರಣಗಳು ದಿನನಿತ್ಯ ಹೆಚ್ಚುತ್ತಿರುವ ಪರಿಣಾಮವಾಗಿ ಕಳೆದ 24 ಗಂಟೆಗಳ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ತಿಳಿಸಿದೆ.
ಕೋರೋನಾ ಸಾಂಕ್ರಾಮಿಕ ರೋಗ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಇಂತಹ ಬೆಳವಣಿಗೆ ನಡೆದಿರುವುದು ನಾಗರಿಕರನ್ನು ಆತಂಕಕ್ಕೀಡು ಮಾಡಿದ್ದು, ಸರಕಾರ ಮತ್ತೊಮ್ಮೆ ಲಾಕ್ ಡೌನ್ ನಡೆಸಬಹುದೇ ಎಂದು ಯೋಚಿಸುತ್ತಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,03,558 ಹೊಸ ಕೋವಿಡ್ 19 ಪ್ರಕರಣಗಳು, 52,847 ಮಂದಿ ಆಸ್ಪತ್ರೆಗಳಿಂದ ಡಿಸ್ ಚಾರ್ಜ್ ಆಗಿದ್ದಾರೆ ಹಾಗೂ 478 ಮಂದಿ ಮರಣ ಹೊಂದಿರುವುದಾಗಿ ವರದಿ ಮಾಡಿದೆ.
ಅಲ್ಲದೇ ದೇಶದಲ್ಲಿ ಈವರೆಗೆ ಒಟ್ಟು 1,25,89,067 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 1,16,82,136 ಮಂದಿ ಗುಣಮುಖರಾಗಿದ್ದಾರೆ.
ಸದ್ಯ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 7,41,830 ಇರುವುದಾಗಿ ತಿಳಿಸಿದೆ. ಈವರೆಗೆ ಒಟ್ಟು 1,65,101 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ವರದಿ ಮಾಡಿದೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ. ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.
ಅಲ್ಲದೇ, ಈವರೆಗೆ ದೇಶದಲ್ಲಿ ಒಟ್ಟು 7,91,05,163 ಮಂದಿಗೆ ವ್ಯಾಕ್ಸಿನೇಷನ್ ನೀಡಿರುವ ಬಗ್ಗೆ ಮಾಹಿತಿ ನೀಡಿದೆ.
ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸರಕಾರ ತಿಳಿಸಿದೆ.












