ಶಿರಾಡಿ ಘಾಟಿಯಲ್ಲಿ ಇನ್ನೋವಾ ಕಾರು ಭೀಕರ ಅಪಘಾತ: ತಾಯಿ-ಮಗ ಮೃತ್ಯು; ಹಲವರಿಗೆ ಗಂಭೀರ ಗಾಯ

0
804

ಸನ್ಮಾರ್ಗ ವಾರ್ತೆ

ಬೆಂಗಳೂರಿನಿಂದ ಮಂಗಳೂರು ಕಡೆಗೆ ಒಂದೇ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರೊಂದು ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತಗೊಂಡ ಪರಿಣಾಮ ತಾಯಿ-ಮಗ ಮೃತಪಟ್ಟ ಘಟನೆ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಇತರರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಮೃತಪಟ್ಟವರನ್ನು ಪಾಣೆಮಂಗಳೂರು ಬೊಂಡಾಲದ ಶಬ್ಬೀರ್ ಎಂಬವರ ಮಗ ಮೊಹಮ್ಮದ್ ಶಫೀಕ್(20) ಹಾಗೂ ಅವರ ಪತ್ನಿ ಸಫಿಯಾ(50) ಎಂದು ಗುರುತಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈ ಅಪಘಾತ ಸಂಭವಿಸಿರುವುದಾಗಿ ತಿಳಿದು ಬಂದಿದೆ.

ಕಾರು ಶಿರಾಡಿ ಘಾಟ್ ನ ಕೆಂಪುಹೊಳೆ ಸಮೀಪಿಸುತ್ತಿದ್ದಂತೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಂಟೈನ‌ರ್ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಮೂವರು ಮಕ್ಕಳು ಕೂಡಾ ಇದ್ದು, ಅವರಿಗೂ ಕೂಡ ಗಂಭೀರ ಸ್ವರೂಪದ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ನಿನ್ನೆ ಸಂಬಂಧಿಕರೋರ್ವರ ಮದುವೆ ಔತಣಕೂಟ (Reception) ಸಮಾರಂಭದಲ್ಲಿ ಭಾಗವಹಿಸಿ, ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಘಟನೆಯ ಬಗ್ಗೆ ಕುಟುಂಬದ ಸದಸ್ಯರೋರ್ವರು ಮಾಹಿತಿ ನೀಡಿದ್ದು, “ಬೆಂಗಳೂರಿನಲ್ಲಿ ನಿನ್ನೆ ನಮ್ಮ ಕುಟುಂಬದ ಸದಸ್ಯರೋರ್ವರ‌ ಮಗನ ಮದುವೆಯ ಔತಣ ಕೂಟವಿತ್ತು. ಅದರಲ್ಲಿ ಕಾರಿನಲ್ಲಿದ್ದ ಕುಟುಂಬವೂ ಕೂಡ ಈ ಕೂಟದಲ್ಲಿ ಭಾಗವಹಿಸಿತ್ತು. 12 ಗಂಟೆ ರಾತ್ರಿಗೆ ಬೆಂಗಳೂರಿನಿಂದ ಮಂಗಳೂರಿನ ಮನೆಗೆ ಇನ್ನೋವಾ ಕಾರಿನಲ್ಲಿ ಹೊರಟಿದ್ದರು. ಶಿರಾಡಿ ಘಾಟಿಯಲ್ಲಿ ಟ್ರಕ್‌ವೊಂದು ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ನಮಗೆ ಗೊತ್ತಾಗಿದೆ” ಎಂದು ತಿಳಿಸಿದ್ದಾರೆ.

ಮೃತಪಟ್ಟಿರುವ ಶಫೀಕ್ ಕಾರು ಚಲಾಯಿಸುತ್ತಿದ್ದರು. ಇವರು ಮಂಗಳೂರಿನ ಕೊಣಾಜೆಯ ಪಿ ಎ ಇಂಜಿನಿಯರಿಂಗ್ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಇವರ ತಾಯಿ ಸಫಿಯಾ ಕೂಡ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತದೇಹವು ಸದ್ಯ ಬಂಟ್ವಾಳ ತಾಲೂಕಿನ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿದ್ದು, ಗಾಯಾಳುಗಳನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.