ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಬಿಆರ್ ಅಂಬೇಡ್ಕರ್ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚನೆಗೆ ಒತ್ತಾಯಿಸಿ ಕಾಂಗ್ರೆಸ್ ಮತ್ತು ಇಂಡಿಯಾ ಬಣದ ಸಂಸದರು ಬುಧವಾರ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಮುಂದೆ ಅಂಬೇಡ್ಕರ್ ಅವರ ಚಿತ್ರಗಳನ್ನು ಹಿಡಿದುಕೊಂಡು ‘ಜೈ ಭೀಮ್’, ‘ಅಮಿತ್ ಶಾ ಮಾಫಿ ಮಾಂಗೋ’ ಎಂಬ ಘೋಷಣೆಗಳನ್ನು ಕೂಗಿದರು.
ರಾಜ್ಯಸಭೆಯಲ್ಲಿ ಅಮಿತ್ ಶಾ “ಅಂಬೇಡ್ಕರ್ ಹೆಸರು ಹೇಳುವುದು ಫ್ಯಾಷನ್ ಆಗಿದೆ” ಎಂದು ನೀಡಿದ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದೆ.
ಈ ಕುರಿತು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಕ್ಕಾಗಿ ಅಮಿತ್ ಶಾ ಕ್ಷಮೆಯಾಚಿಸಬೇಕು ಮತ್ತು ದಲಿತರ ವಿರುದ್ಧ ನಡೆಯುತ್ತಿರುವ ಈ ದುರಹಂಕಾರವನ್ನು ನಾವು ಸಹಿಸೋಲ್ಲ” ಎಂದು ಹೇಳಿದರು.
ರಾಹುಲ್ ಗಾಂಧಿ, “ಮನುಸ್ಮೃತಿಯನ್ನು ಪ್ರಾಮಾಣಿಕವಾಗಿ ನಂಬುವವರು ಅಂಬೇಡ್ಕರ್ನೊಂದಿಗೆ ಭಿನ್ನಾಭಿಪ್ರಾಯ ಹೊಂದುವುದು ಖಚಿತ” ಎಂದರು.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅಮಿತ್ ಶಾ ಅವರ ಹೇಳಿಕೆಯ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, “ಇದು ದಲಿತರ ಮತ್ತು ಶೋಷಿತ ವರ್ಗಗಳ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆ” ಎಂದು ಖಂಡಿಸಿದರು.












