ಇರಾನ್ ಯುದ್ಧ: ಟ್ರಂಪ್ ಮತ್ತು ನೆತನ್ಯಾಹು ನಡುವೆ ಜಟಾಪಟಿ, ಮತ್ತೆ ದಾಳಿ ನಡೆಸುವ ಒತ್ತಡಕ್ಕೆ ಮಣಿಯಲು ಅಮೆರಿಕ ಅಧ್ಯಕ್ಷರ ನಕಾರ

0
11

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಇರಾನ್ ಯುದ್ಧದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವಿನ ದೂರವಾಣಿ ಕರೆಯು “ವಿಪರೀತ ವಾಗ್ವಾದ”ಕ್ಕೆ ತಿರುಗಿದೆ ಎಂದು ವರದಿಯಾಗಿದೆ. ಇರಾನ್ ಮೇಲಿನ ದಾಳಿಯನ್ನು ಪುನರಾರಂಭಿಸುವ ಕುರಿತ ಭಿನ್ನಾಭಿಪ್ರಾಯಗಳ ನಡುವೆ ಉಭಯ ನಾಯಕರ ದೂರವಾಣಿ ಸಂಭಾಷಣೆ ನಡೆದಿದೆ. ಈ ವರದಿಯನ್ನು ಇಸ್ರೇಲಿ ಸುದ್ದಿ ವೆಬ್‌ಸೈಟ್ ‘ವೈನ್ ನ್ಯೂಸ್’ ಪ್ರಕಟಿಸಿದೆ. ಆದಾಗ್ಯೂ, ನೆತನ್ಯಾಹು ಅವರ ಕಚೇರಿಯು ಈ ಸುದ್ದಿಯನ್ನು ನಿರಾಕರಿಸಿದೆ. ಚರ್ಚೆ ನಡೆದಿರುವುದನ್ನು ಮತ್ತೊಬ್ಬ ಹಿರಿಯ ಅಧಿಕಾರಿ ದೃಢಪಡಿಸಿದ್ದಾರೆ. ಆದರೆ, ಅದು ತೀವ್ರ ವಾಗ್ವಾದಕ್ಕೆ ತಿರುಗಲಿಲ್ಲ ಎಂದು ಅವರು ಹೇಳಿದ್ದಾರೆ.

ಟ್ರಂಪ್ ಅವರು ಇರಾನ್‌ನೊಂದಿಗೆ ರಾಜತಾಂತ್ರಿಕ ಪರಿಹಾರಗಳಿಗೆ ಆದ್ಯತೆ ನೀಡಿದ್ದಾರೆ. ಆದರೆ ನೆತನ್ಯಾಹು ಅವರು ಇರಾನ್‌ನಲ್ಲಿ ಸೇನಾ ಕಾರ್ಯಾಚರಣೆ ಮತ್ತು ಆಡಳಿತ ಬದಲಾವಣೆಯನ್ನು ಬಯಸುತ್ತಿದ್ದಾರೆ. ಇಸ್ರೇಲ್‌ನಲ್ಲಿ ನೆತನ್ಯಾಹು ಅವರ ನಾಯಕತ್ವಕ್ಕೆ ರಾಜಕೀಯ ವಿರೋಧ ಹೆಚ್ಚುತ್ತಿರುವ ನಡುವೆಯೇ ಈ ಭಿನ್ನಾಭಿಪ್ರಾಯ ಮೂಡಿದೆ. ಇರಾನ್ ವಿರುದ್ಧದ ಮುಂದಿನ ನಡೆಯ ಕುರಿತು ವಾರಾಂತ್ಯದಲ್ಲಿ ಟ್ರಂಪ್ ಮತ್ತು ನೆತನ್ಯಾಹು ನಡುವೆ ನಡೆದ ದೂರವಾಣಿ ಕರೆಯು ತೀವ್ರ ಭಿನ್ನಾಭಿಪ್ರಾಯ ಮತ್ತು ವಾಗ್ವಾದಕ್ಕೆ ಕಾರಣವಾಯಿತು ಎಂದು ‘ವೈನೆಟ್’ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಉಭಯ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಿವೆ ಎಂದು ಸ್ಪಷ್ಟಪಡಿಸಿದ ಇಸ್ರೇಲಿ ಅಧಿಕಾರಿಯೊಬ್ಬರು, ಇದನ್ನು “ನರಕಸದೃಶ ಜಗಳ” ಎಂದು ಬಣ್ಣಿಸಿದ್ದಾರೆ.

ಇರಾನ್ ಮೇಲಿನ ದಾಳಿಯನ್ನು ಪುನರಾರಂಭಿಸುವಂತೆ ಒತ್ತಾಯಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರತಿದಿನ ಕರೆ ಮಾಡುತ್ತಿದ್ದಾರೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. “ಇರಾನ್ ಮೇಲಿನ ಯುದ್ಧವನ್ನು ಪುನರಾರಂಭಿಸುವಂತೆ ಒತ್ತಾಯಿಸಲು ನೆತನ್ಯಾಹು ಅವರಿಗೆ ಪ್ರತಿದಿನ ಕರೆ ಮಾಡುತ್ತಿದ್ದಾರೆ. ಶ್ವೇತಭವನದ ಒಳಗೆ ಮತ್ತು ಹೊರಗೆ ಯುದ್ಧವನ್ನು ಬಯಸದವರು ಅದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಲ್ಲದೆ, ಸಂಘರ್ಷವನ್ನು ತೀವ್ರಗೊಳಿಸದಂತೆ ಮತ್ತು ರಾಜತಾಂತ್ರಿಕ ಮಾತುಕತೆಗಳಿಗೆ ಆದ್ಯತೆ ನೀಡುವಂತೆ ಪ್ರಾದೇಶಿಕ ನಾಯಕರು ಟ್ರಂಪ್ ಅವರನ್ನು ಒತ್ತಾಯಿಸುತ್ತಿದ್ದಾರೆ ಎಂದೂ ಅಧಿಕಾರಿ ಹೇಳಿದ್ದಾರೆ.

ಇರಾನ್ ಯುದ್ಧವನ್ನು ಮತ್ತೆ ಆರಂಭಿಸಲು ನೆತನ್ಯಾಹು ಅನುಸರಿಸುತ್ತಿರುವ ಒತ್ತಡ ತಂತ್ರಗಳ ಬಗ್ಗೆ ಅರಬ್ ಮತ್ತು ಮುಸ್ಲಿಂ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ ಎಂದೂ ಫೈನಾನ್ಷಿಯಲ್ ಟೈಮ್ಸ್ ವರದಿ ತಿಳಿಸಿದೆ.

ಆದರೆ ಸಂಘರ್ಷವನ್ನು ಪುನರಾರಂಭಿಸುವ ಕರೆಗಳಿಗೆ ಟ್ರಂಪ್ ಮಣಿದಿಲ್ಲ. ಇರಾನ್ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಲು ಆರ್ಥಿಕ ಒತ್ತಡ ಹೇರುವುದನ್ನು ಮುಂದುವರಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಈ ವರದಿಯನ್ನು “ನಕಲಿ ಸುದ್ದಿ, ಸಂಪೂರ್ಣ ಅಸಂಬದ್ಧ” ಎಂದು ನೆತನ್ಯಾಹು ಕಚೇರಿ ತಳ್ಳಿಹಾಕಿದೆ. ಈ ಸಂಭಾಷಣೆಯು ಸಂಘರ್ಷಾತ್ಮಕವಾಗಿರಲಿಲ್ಲ ಎಂದು ಹಿರಿಯ ಇಸ್ರೇಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಪುನರಾರಂಭಿಸುವಂತೆ ಟ್ರಂಪ್ ಮೇಲೆ ಒತ್ತಡ ಹೇರಲು ನೆತನ್ಯಾಹು ಪ್ರಯತ್ನಿಸುತ್ತಿರುವಂತೆಯೇ ಈ ಭಿನ್ನಾಭಿಪ್ರಾಯ ಹೊರಬಿದ್ದಿದೆ.