ಗಾಝಾದ ಮೇಲಿನ ದಾಳಿಯ ವೇಳೆ ಮೃತಪಟ್ಟ ಕ್ರೈಸ್ತ ಸೈನಿಕನ ಕೊರಳ ಪಟ್ಟಿಯ ಶಿಲುಬೆಗೆ ಬಟ್ಟೆ ಮುಚ್ಚಿದ ಇಸ್ರೇಲಿ ಸೇನೆ: ತಾಯಿಯ ಆಕ್ರೋಶ

0
359

ಸನ್ಮಾರ್ಗ ವಾರ್ತೆ

ಗಾಝಾದ ಮೇಲಿನ ದಾಳಿಯ ವೇಳೆ 2023 ಡಿಸೆಂಬರ್ ನಲ್ಲಿ ಹತ್ಯೆಗೀಡಾದ ಇಸ್ರೇಲಿ ಯೋಧ ಡೇವಿಡ್ ಬೋಗ್ಡನೋವೀಕ್ಸಿ ಅವರ ಕುತ್ತಿಗೆಯ ಫಲಕದಲ್ಲಿರುವ ಶಿಲುಬೆಯನ್ನು ತೆರವುಗೊಳಿಸಬೇಕು ಎಂದು ಇಸ್ರೇಲ್ ಸಚಿವಾಲಯ ಆದೇಶಿಸಿದೆ. ಇಲ್ಲದಿದ್ದರೆ ಇಸ್ರೇಲ್ ಸೈನಿಕರನ್ನು ಹೂಳುವ ಸಮಾಧಿ ಸ್ಥಳದಿಂದ ಅವರ ಭೌತಿಕ ಅವಶೇಷಗಳನ್ನು ಬೇರೆಡೆಗೆ ವರ್ಗಾಯಿಸಬೇಕಾಗುತ್ತದೆ ಎಂದು ಅದು ಹೇಳಿದೆ. ಯಹೂದಿಯೇತರ ಧರ್ಮಿಯರ ಕುರಿತಂತೆ ಇಸ್ರೇಲ್ ನ ಅಸಹಿಷ್ಣುತೆಯ ಪರಾಕಾಷ್ಟೆ ಇದು ಎಂದು ವ್ಯಾಖ್ಯಾನಿಸಲಾಗಿದೆ.

ಆದರೆ ಇಸ್ರೇಲ್ ಸೇನೆಯ ಈ ನಿರ್ದೇಶನವನ್ನು ಈ ಡೇವಿಡ್ ಅವರ ತಾಯಿ ತೀವ್ರವಾಗಿ ವಿರೋಧಿಸಿದ್ದಾರೆ. ಇದು ನಮ್ಮನ್ನು ಮತ್ತು ನಮ್ಮ ಧರ್ಮವನ್ನು ಅಪಮಾನಿಸುವ ಕೆಲಸ ಎಂದವರು ಹೇಳಿದ್ದಾರೆ.

ಅಕ್ಟೋಬರ್ ನಲ್ಲಿ ನಾನು ನನ್ನ ಮಗನ ಸಮಾಧಿ ಸ್ಥಳವನ್ನು ಸಂದರ್ಶಿಸಿದೆ. ಆಗ ನನ್ನ ಮಗನ ಕೊರಳ ಪಟ್ಟಿಯಲ್ಲಿರುವ ಶಿಲುಬೆಯನ್ನು ಬಟ್ಟೆಯಿಂದ ಮುಚ್ಚಲಾಗಿರುವುದನ್ನು ಕಂಡೆ. ಇದು ನನ್ನನ್ನು ತೀವ್ರವಾಗಿ ನೋಯಿಸಿತು ಎಂದು ಈ ಅಮ್ಮ ಹೇಳಿದ್ದಾರೆ.

ಈ ಡೇವಿಡ್ ಉಕ್ರೇನಿಯವರಾಗಿದ್ದು 2014ರಲ್ಲಿ ಇಸ್ರೇಲ್ ಗೆ ವಲಸೆ ಬಂದಿದ್ದರು.. ಗಾಝಾದ ಖಾನ್ ಯೂನಿಸ್ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಭಾಗವಾಗಿದ್ದ ಈತ ತನ್ನ 19ನೇ ವಯಸ್ಸಿನಲ್ಲಿ ಇಲ್ಲೇ ಹತ್ಯೆಗೀಡಾಗಿದ್ದರು.

ಮೃತಪಟ್ಟ ಯಹೂದಿಯರಲ್ಲದ ಸೈನಿಕರನ್ನು ಯಹೂದಿ ಸೈನಿಕರ ಜೊತೆ ಸಮಾಧಿ ಮಾಡುವ ಸಂಪ್ರದಾಯವನ್ನು ಇಸ್ರೇಲ್ ಅನುಸರಿಸಿಕೊಂಡು ಬಂದಿತ್ತು. ಆದರೆ ಇದೀಗ ಕ್ರೈಸ್ತ ಸೈನಿಕನ ಮೃತ ದೇಹವನ್ನು ಯಹೂದಿ ಸೈನಿಕರ ಸಮಾಧಿ ಸ್ಥಳದಲ್ಲಿ ಸಮಾಧಿ ಮಾಡದೆ ಇರಲು ಅಥವಾ ಸಮಾಧಿ ಮಾಡಿದರೆ ಅಲ್ಲಿ ಕ್ರೈಸ್ತ ಧರ್ಮದ ಚಿಹ್ನೆಯನ್ನು ಪ್ರದರ್ಶಿಸದೆ ಇರಲು ತೀರ್ಮಾನಿಸಿರುವುದು ಇಸ್ರೇಲಿ ಆಡಳಿತದಲ್ಲಿ ಯಹೂದಿ ಧರ್ಮದ ಹಿಡಿತವನ್ನು ಹೇಳುತ್ತದೆ ಎಂದು ಹೇಳಲಾಗಿದೆ. ಇಸ್ರೇಲ್ ನ ಸೇನೆಯನ್ನು ಹೇಗೆ ಧಾರ್ಮಿಕವಾಗಿ ವಿಭಜಿಸಲಾಗಿದೆ ಮತ್ತು ಯಹೂದಿಯರಿಗೆ ಹೇಗೆ ಉನ್ನತ ಸ್ಥಾನವನ್ನು ನೀಡಲಾಗಿದೆ ಎಂಬುದಕ್ಕೆ ಇದು ಉದಾಹರಣೆ ಎಂದು ಹೇಳಲಾಗಿದೆ.