ಲಾಲೂಪ್ರಸಾದ್ ಯಾದವ್ ಜೈಲಿನಿಂದಲೇ ದಾಳ ಉರುಳಿಸುತ್ತಿದ್ದಾರೆ- ಸುಶೀಲ್ ಕುಮಾರ್ ಮೋದಿ

0
115

ಸನ್ಮಾರ್ಗ ವಾರ್ತೆ

ಪಾಟ್ನ: ಬಿಹಾರದಲ್ಲಿ ಬಿಜೆಪಿಯ ಶಾಸಕರನ್ನು ತಮ್ಮ ಕಡೆ ಮಾಡಿಕೊಳ್ಳಲು ಲಾಲುಪ್ರಸಾದ್ ಯಾದವ್ ಜೈಲಿನಿಂದಲೇ ದಾಳ ಉರುಳಿಸುತ್ತಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಆರೋಪಿಸಿದ್ದಾರೆ. ಲಾಲುಪ್ರಸಾದ್ ಯಾದವ್ ಶಾಸಕರಿಗೆ ಕರೆ ಮಾಡಿದ ಟೇಪ್ ಮತ್ತು ಮೊಬೈಲ್ ನಂಬರನ್ನು ಮಾಧ್ಯಮಗಳೊಂದಿಗೆ ಟ್ಯಾಗ್ ಮಾಡುವ ಮೂಲಕ ಅವರು ಟ್ವೀಟ್ ಮಾಡಿದ್ದರೆ. ಮೇವು ಹಗರಣದಲ್ಲಿ ಜೈಲಿನಲ್ಲಿದ್ದರೂ ಅವರು ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ ಎಂದು ಲಾಲು ವಿರುದ್ಧ ಸುಶೀಲ್ ಕುಮಾರ್ ಮೋದಿ ಆರೋಪ ಹೊರಿಸಿದ್ದಾರೆ.

ಲಾಲುಪ್ರಸಾದ್ ಯಾದವ್ ರಾಂಚಿಯಿಂದ ಎನ್‍ಡಿಎ ಶಾಸಕರಿಗೆ ಕರೆ ಮಾಡಿ ಸಚಿವ ಸ್ಥಾನದ ಭರವಸೆ ನೀಡುತ್ತಿದ್ದಾರೆ ಎಂದು ಸುಶೀಲ್ ಕುಮಾರ್ ಮೋದಿ ಟ್ವೀಟ್ ಮಾಡಿದ್ದು, ಆ ನಂಬರಿಗೆ ಕರೆ ಮಾಡಿದಾಗ ಲಾಲು ಪ್ರಸಾದ್ ಫೋನ್ ಎತ್ತಿಕೊಂಡರು. ಜೈಲಿನಿಂದ ಈ ನೀಚ ಆಟ ಆಡಬೇಡಿ. ನಿಮ್ಮ ತಂತ್ರದಲ್ಲಿ ನೀವು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು. ಸ್ಪೀಕರ್ ಚುನಾವಣೆಯಲ್ಲಿ ಮಹಾಸಖ್ಯದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಲಾಲು ಆಗ್ರಹಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಜೈಲು ಪಾಲಾಗಿರುವ ಲಾಲು ಪ್ರಸಾದ್ ಯಾದವ್ ಆರೋಗ್ಯ ಕಾರಣಗಳಿಂದ ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿದ್ದಾರೆ. ಹಲವು ತಿಂಗಳಿನಿಂದ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.